Site icon Vistara News

IND vs SA: ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಗೆದ್ದರೆ ಸರಣಿ ಸಮಬಲ

South Africa vs India, 3rd T20

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ(IND vs SA) 1-0 ಹಿನ್ನಡೆ ಅನುಭವಿಸಿರುವ ಭಾರತ ತಂಡ ಅಂತಿಮ ಪಂದ್ಯವನ್ನಾಡಲು ಸಜ್ಜಾಗಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ನಾಳೆ(ಗುರುವಾರ) ನಡೆಯುವ ಪಂದ್ಯ ಸೂರ್ಯಕುಮಾರ್​ ಯಾದವ್​ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸರಣಿ ಸೋಲನ್ನು ತಪ್ಪಿಸಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡವಿದೆ.

ಬದಲಾವಣೆ ನಿರೀಕ್ಷೆ

ದ್ವಿತೀಯ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಜಿತೇಶ್​ ಶರ್ಮ ಅವರನ್ನು ಮತ್ತು ತಿಲಕ್​ ವರ್ಮ ಅವರನ್ನು ಕೈ ಬಿಟ್ಟು ಈ ಪಂದ್ಯಕ್ಕೆ ಋತುರಾಜ್​ ಗಾಯಕ್ವಾಡ್​ ಮತ್ತು ಇಶಾನ್​ ಕಿಶನ್​ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಅಧಿಕವಾಗಿದೆ. ಉಭಯ ಆಟಗಾರರು ಉತ್ತಮ ಫಾರ್ಮ್​ನಲ್ಲಿದ್ದರೂ ಅವರನ್ನು ಕಳೆದ ಪಂದ್ಯಕ್ಕೆ ಬೆಂಚ್​ ಕಾಯಿಸಿದ್ದಕ್ಕೆ ಅನೇಕ ಹಿರಿಯ ಮಾಜಿ ಆಟಗಾರರು ಬಿಸಿಸಿಐ ವಿರುದ್ಧ ಅಪಸ್ವರ ಎತ್ತಿದ್ದರು.

ವಿಶ್ವಕಪ್​ ಆಡಿ ಬಂದ ಶುಭಮನ್​ ಗಿಲ್​ ಕಳೆದ ಪಂದ್ಯದಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರಿ. 2 ಎಸೆತ ಎದುರಿಸಿ ಶೂನ್ಯಕ್ಕೆ ಔಟ್​ ಆಗಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಅವರು ನಿಂತು ಆಡುವ ಮೂಲಕ ತಂಡಕ್ಕೆ ಆಸರೆಯಾಗಬೇಕು. ಜತೆಗೆ ಅನುಭವಿ ಬೌಲರ್​ ಮೊಹಮ್ಮದ್​ ಸಿರಾಜ್​ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ. ದುಬಾರಿ ರನ್​ ಬಿಟ್ಟುಕೊಡುತ್ತಿದ್ದಾರೆ.

ರಿಂಕು-ಸೂರ್ಯ ಮೇಲೆ ನಂಬಿಕೆ

ಬೌನ್ಸಿ ಪಿಚ್​ನಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದು ನಾಯಕ ಸೂರ್ಯಕುಮಾರ್​ ಮತ್ತು ರಿಂಕು ಸಿಂಗ್​ ಮಾತ್ರ. ಹೀಗಾಗಿ ಈ ಪಂದ್ಯದಲ್ಲಿಯೂ ಉಭಯ ಆಟಗಾರರ ಬ್ಯಾಟಿಂಗ್​ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ಇವರ ಜತೆ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಬ್ಯಾಟರ್​ಗಳು ಈ ಪಂದ್ಯದಲ್ಲಿ ಮೈ ಚಳಿ ಬಿಟ್ಟು ಬ್ಯಾಟ್​ ಬೀಸಿದರೆ ತಂಡಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.

ಹರಣಿ ಪಡೆ ಸಮರ್ಥವಾಗಿದೆ

ಐಡೆನ್​ ಮಾರ್ಕ್ರಮ್​ ಪಡೆ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ಎಲ್ಲ ವಿಭಾಗದಲ್ಲಿ ಸಮರ್ಥವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿಯೂ ಪುಟಿದೆದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಬಲ್ಲ ಆಟಗಾರರು ಈ ತಂಡದಲ್ಲಿದ್ದಾರೆ. ಹೀಗಾಗಿ ಭಾರತ ಶಕ್ತಿ ಮೀರಿ ಪ್ರಯತ್ನಿಸಬೇಕಿದೆ. ಜೊಹಾನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ(Wanderers Stadium) ಭಾರತದ ನೆಚ್ಚಿನ ತಾಣ. ಇಲ್ಲಿ ಆಡಿದ ಏಕದಿನ, ಟಿ20 ಮತ್ತು ಟೆಸ್ಟ್​ ಪಂದ್ಯದಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ.

ಇದನ್ನೂ ಓದಿ ಇಂಗ್ಲೆಂಡ್​ ಎದುರು ಟಿ20 ಫೇಲ್ ಆದ ಭಾರತ ಮಹಿಳಾ ಕ್ರಿಕೆಟ್​ ತಂಡಕ್ಕೆ​ ಈಗ ‘ಟೆಸ್ಟ್’ ಪರೀಕ್ಷೆ​

ಮಳೆ ಭೀತಿ ಇಲ್ಲ

ವೆದರ್‌ಕಾಮ್ ನೀಡಿದ ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯ ನಡೆಯುವ ಜೋಹಾನ್ಸ್‌ಬರ್ಗ್‌ನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಇರಲಿದೆ ಎನ್ನಲಾಗಿದೆ. ಮಳೆ ಸಾಧ್ಯತೆ ಶೇ.5ರಷ್ಟು ಇರಲಿದೆ ಎಂದಿದೆ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ದ್ವಿತೀಯ ಪಂದ್ಯವೂ ಮಳೆಯಿಂದ ಅಡಚಣೆಯಾಗಿ 15 ಓವರ್​ಗಳ ಪಂದ್ಯ ನಡೆದಿತ್ತು. ಆದರೆ ಅಂತಿಮ ಪಂದ್ಯಕ್ಕೆ ಮಳೆ ಕಾಟ ಇಲ್ಲದಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ.

Exit mobile version