ಗ್ಕೆಬರ್ಹಾ: ಇನ್ನೇನು ಭಾರತ ತಂಡದ ಬ್ಯಾಟಿಂಗ್ ಇನಿಂಗ್ಸ್ ಮುಕ್ತಾಯಗೊಳ್ಳಲು ಮೂರು ಎಸೆತಗಳು ಬಾಕಿ ಇರುವಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಸದ್ಯ ಭಾರತ 19.3 ಓವರ್ಗಳಲ್ಲಿ 7 ವಿಕೆಟ್ಗೆ 180 ರನ್ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ. 68 ರನ್ ಗಳಿಸಿರುವ ರಿಂಕು ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಕ್ರೀಸ್ನಲ್ಲಿದ್ದಾರೆ.
ಇಲ್ಲಿನ ಗ್ಕೆಬರ್ಹಾ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕ ಐಡೆನ್ ಮಾರ್ಕ್ರಮ್ ಅವರ ನಿರ್ಧಾರವನ್ನು ದಕ್ಷಿಣ ಆಫ್ರಿಕಾ ಬೌಲರ್ಗಳು ಸಮರ್ಥಸಿಕೊಂಡರು. ಆರಂಭದಿಂದಲೇ ವಿಕೆಟ್ ವಿಕೆಟ್ ಕಿತ್ತು ಮುನ್ನಡೆ ಸಾಧಿಸಿದರೂ ಆ ಬಳಿಕ ಚೇತರಿಸಿಕೊಂಡ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿತು. ಸೂರ್ಯಕುಮಾರ್ ಮತ್ತು ರಿಂಕು ಅವರ ಅರ್ಧಶತಕ ಭಾರತ ಬ್ಯಾಟಿಂಗ್ ಸರದಿಯ ಪ್ರಮುಖ ಹೈಲೆಟ್ಸ್ ಆಗಿದೆ.
ಶೂನ್ಯ ಸುತ್ತಿದ ಗಿಲ್-ಜೈಸ್ವಾಲ್
ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಮಾರ್ಕೊ ಜಾನ್ಸೆನ್ ದೊಡ್ಡ ಆಘಾತ ನೀಡಿದರು. ಮೊದಲ ಓವರ್ನ ಮೂರನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್(0) ಅವರ ವಿಕೆಟ್ ಕಿತ್ತರು. ಕವರ್ನಲ್ಲಿ ನಿಂತಿದ್ದ ಡೇವಿಡ್ ಮಿಲ್ಲರ್ ಅವರು ಜಿಂಕೆಯಂತೆ ಜಿಗಿದು ಕ್ಯಾಚ್ ಹಿಡಿಯುವ ಮೂಲಕ ಜೈಸ್ವಾಲ್ಗೆ ಪೆವಿಲಿಯನ್ ದಾರಿ ತೋರಿದರು. ಭಾರತ ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡಿತು.
ಇದೇ ಓವರ್ನ ನಾಲ್ಕನೇ ಎಸೆದಲ್ಲಿ ತಿಲಕ್ ವರ್ಮ ವಿಕೆಟ್ ಕೂಡ ಬೀಳುತ್ತಿತ್ತು. ಜೈಸ್ವಾಲ್ ಅವರಂತೆ ಕ್ಯಾಚ್ ನೀಡಿ ತಿಲಕ್ ಕೂಡ ಬ್ಯಾಕ್ಟು ಬ್ಯಾಕ್ ವಿಕೆಟ್ ಒಪ್ಪಿಸುತ್ತಿದ್ದರು. ಡೇವಿಡ್ ಮಿಲ್ಲರ್ ಅವರಿಗೆ ಈ ಕ್ಯಾಚ್ ಬಂದಿತ್ತು. ಆದರೆ ಡೈವಿಂಗ್ನಲ್ಲಿ ಕ್ಯಾಚ್ ಪಡೆದ ಬಳಿಕ ಮೈದಾನಕ್ಕೆ ಬೀಳುವ ವೇಳೆ ಚೆಂಡು ಕೈಯಿಂದ ಜಾರಿತು. ಜೀವದಾನ ಪಡೆದ ತಿಲಕ್ 4 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ 29 ರನ್ ಗಳಿಸಿದರು. ವಿಶ್ವಕಪ್ ಬಳಿಕ ವಿಶ್ರಾಂತಿ ಪಡೆದು ಈ ಸರಣಿಯಲ್ಲಿ ಆಡಲಿಳಿದ ಭರವಸೆಯ ಆಟಗಾರ ಶುಭಮನ್ ಗಿಲ್ 2 ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ವಿಲಿಯಮ್ಸ್ ಎಸೆತಕ್ಕೆ ಎಲ್ಬಿಡಬ್ಲ್ಯು ಆದರು.
ರಿಂಕು-ಸೂರ್ಯ ಅರ್ಧಶತಕ
ಆರಂಭಿಕ ಆಘಾತ ಎದುರಿಸಿದ ಭಾರತ ತಂಡಕ್ಕೆ ಆಸರೆಯಾದದ್ದು ರಿಂಕು ಸಿಂಗ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್. ಉಭಯ ಆಟಗಾರರು ಭಯ ಮುಕ್ತವಾಗಿ ಬ್ಯಾಟಿಂಗ್ ನಡೆಸಿದರು. ಸೂರ್ಯಕುಮಾರ್ ತಮ್ಮ ಎಂದಿನ ಶೈಲಿಯಲ್ಲೇ ಹೊಡಿ ಬಡಿ ಆಟವಾಡಿ ಅರ್ಧಶತಕ ಬಾರಿಸಿದರು.
ಅರ್ಧಶತಕ ಬಾರಿಸಿದ ಬಳಿಕ ತಬ್ರೆಜ್ ಶಂಸಿ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸಲು ಹೋದ ಸೂರ್ಯಕುಮಾರ್ ಲಾಂಗ್ ಆನ್ನಲ್ಲಿ ಜಾನ್ಸೆನ್ಗೆ ಕ್ಯಾಚ್ ನೀಡಿದರು. ಒಟ್ಟು 36 ಎಸೆತ ಎದುರಿಸಿದ ಅವರು ಸೊಗಸಾದ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 56 ರನ್ ಬಾರಿಸಿದರು. ರಿಂಕು ಜತೆಗೂಡಿ 4ನೇ ವಿಕೆಟ್ಗೆ 70 ರನ್ ಒಟ್ಟುಗೂಡಿಸಿದರು.
ಇದನ್ನೂ ಓದಿ Pro Kabaddi: ಬೆಂಗಾಲ್ ವಾರಿಯರ್ಸ್ ಆರ್ಭಟಕ್ಕೆ ಪಲ್ಟಿಯಾದ ಪಾಟ್ನಾ ಪೈರೆಟ್ಸ್
ರಿಂಕು ಕಮಾಲ್
ಸೂರ್ಯಕುಮಾರ್ ಅವರೊಂದಿಗೆ ಉತ್ತಮ ಇನಿಂಗ್ಸ್ ಕಟ್ಟಿದ ರಿಂಕು ಅವರು ಸೂರ್ಯ ವಿಕೆಟ್ ಪತನದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿ ಅವರು ಕೂಡ ಅರ್ಧಶತಕ ಬಾರಿಸಿದರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಅರ್ಧಶತಕ. ಇಶಾನ್ ಕಿಶನ್ ಸ್ಥಾನದಲ್ಲಿ ಆಡಲಿಳಿದ ವಿಕೆಟ್ ಕೀಪರ್ ಜಿತೇಶ್ ಶರ್ಮ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು.
First of many more to come!
— BCCI (@BCCI) December 12, 2023
Maiden T20I half-century for Rinku Singh 👏👏
Live – https://t.co/4DtSrebAgI #SAvIND pic.twitter.com/R7nYPCgSY0
ಕೊಹ್ಲಿ ದಾಖಲೆ ಸರಿಗಟ್ಟಿ ರಾಹುಲ್ ದಾಖಲೆ ಮುರಿದ ಸೂರ್ಯ
ಸೂರ್ಯಕುಮಾರ್ ಯಾದವ್ ಅವರು ಈ ಪಂದ್ಯದಲ್ಲಿ 15 ರನ್ ಗಳಿಸಿದ ವೇಳೆ ದಾಖಲೆಯೊಂದನ್ನು ಬರೆದರು. ಭಾರತ ತಂಡದ ಪರ ಅತಿ ವೇಗವಾಗಿ 2 ಸಾವಿರ್ ರನ್ ಪೂರೈಸಿದ ಆಟಗಾರನಾಗಿ ಮೂಡಿಬಂದರು. ಈ ಮೂಲಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿ ಕೆ.ಎಲ್ ರಾಹುಲ್ ಅವರ ದಾಖಲೆಯನ್ನು ಮುರಿದರು. ಕೊಹ್ಲಿ ಮತ್ತು ಸೂರ್ಯ ಈ ದಾಖಲೆಯನ್ನು 56 ಇನ್ನಿಂಗ್ಸ್ನಲ್ಲಿ ಮಾಡಿದ್ದಾರೆ. ರಾಹುಲ್ 58 ಇನಿಂಗ್ಸ್ನಲ್ಲಿ ಈ ದಾಖಲೆ ನಿರ್ಮಿಸಿ 2ನೇ ಸ್ಥಾನದಲ್ಲಿದ್ದರು. ಆದರೆ ಸೂರ್ಯ ಅವರು ಇದಕ್ಕೂ ಕಡಿಮೆ ಇನಿಂಗ್ಸ್ನಲ್ಲಿ ಈ ಗುರಿ ತಲುಪಿದ ಕಾರಣ ರರಾಹುಲ್ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.