Site icon Vistara News

IND vs SA: ಅರ್ಶ್​ದೀಪ್ ‘ಆವೇಶ’ ಬೌಲಿಂಗ್ ದಾಳಿಗೆ ನಲುಗಿದ ​ದಕ್ಷಿಣ ಆಫ್ರಿಕಾ

Avesh Khan wrecked South Africa's innings

ಜೊಹಾನ್ಸ್​ಬರ್ಗ್​: ಟೀಮ್​ ಇಂಡಿಯಾದ(IND vs SA) ಯುವ ಬೌಲಿಂಗ್​ ಪಡೆಯ ಘಾತಕ ಸ್ಫೆಲ್​ಗೆ ಬೆದರಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ. ಭಾರತ ಗೆಲುವಿಗೆ ರನ್​ 117 ಬಾರಿಸಬೇಕಿದೆ. ಆವೇಶ್​ ಖಾನ್(4 ವಿಕೆಟ್​)​ ಮತ್ತು ಅರ್ಶ್​ದೀಪ್(5 ವಿಕೆಟ್)​ ಅವರ ಮೊನಚಾದ ಬೌಲಿಂಗ್​ ದಾಳಿ ಪಂದ್ಯದ ಹೈಲೆಟ್ಸ್​ ಆಗಿತ್ತು.

ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ದಕ್ಷಿಣ ಆಫ್ರಿಕಾ ನಾಯಕ ಐಡೆನ್​ ಮಾರ್ಕ್ರಮ್​ ಬ್ಯಾಟಿಂಗ್​ ಆಯ್ದುಕೊಂಡರು. ಅಂತೆಯೇ ಬ್ಯಾಟಿಂಗ್​ ಆರಂಭಿಸಿದ ಹರಿಣ ಪಡೆ, ಆವೇಶ್​ ಖಾನ್​ ಮತ್ತು ಅರ್ಶದೀಪ್ ಅವರ ಬೌಲಿಂಗ್​ ದಾಳಿಗೆ ತರಗೆಲೆಯಂತೆ ಉದುರಿ 27.3 ಓವರ್​ಗಳಲ್ಲಿ 116 ರನ್​ಗೆ ಸರ್ವಪತನ ಕಂಡಿತು.

ಸಾಯಿ ಸುದರ್ಶನ್ ಪದಾರ್ಪಣೆ

ಪ್ರಮುಖ ಆಟಗಾರರ ಗೈರಿನಲ್ಲಿ ತಮಿಳುನಾಡು ಆಟಗಾರ ಸಾಯಿ ಸುದರ್ಶನ್ ಈ ಪಂದ್ಯದಲ್ಲಿ ಆಡುವ ಮೂಲಕ ಏಕದಿನ ಕ್ರಿಕೆಟ್​ಗೆ ಪದಾರ್ಪಣೆಗೈದರು. 13 ಐಪಿಎಲ್​ ಆಡಿದ ಅನುಭವ ಹೊಂದಿರುವ ಅವರು 507 ರನ್​ ಬಾರಿಸಿದ್ದಾರೆ.

ಘಾತಕ ಬೌಲಿಂಗ್​ ದಾಳಿ

ಪಂದ್ಯ ಆರಂಭಗೊಂಡು ಮೂರು ರನ್​ ಆಗುವಷ್ಟರಲ್ಲಿ ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​ ಅವರು ದಕ್ಷಿಣ ಆಫ್ರಿಕಾಗೆ ಅವಳಿ ಆಘಾತ ನೀಡಿದರು. ಡೇಂಜರಸ್​ ಬ್ಯಾಟರ್​ಗಳಾದ​ ರೀಝಾ ಹೆಂಡ್ರಿಕ್ಸ್​ ಮತ್ತು ರಸ್ಸಿ ವಾನ್​ಡರ್​ ಡುಸ್ಸೆನ್​ ಅವರನ್ನು ಶೂನ್ಯಕ್ಕೆ ಔಟ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಇದು ಬ್ಯಾಕ್​ಟು ಬ್ಯಾಕ್​ ವಿಕೆಟ್​ ಆಗಿತ್ತು. ಇಬ್ಬರದ್ದು ಶೂನ್ಯ ಗಳಿಕೆ. ಹೆಂಡ್ರಿಕ್ಸ್ ಕ್ಲೀನ್​ ಬೌಲ್ಡ್​ ಆದರೆ, ಡುಸ್ಸೆನ್ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು.

ಇಲ್ಲಿಗೆ ಸುಮ್ಮನಾಗದ ಅರ್ಶ್​ದೀಪ್​ ಮತ್ತೆ ವಿಕೆಟ್​ ಬೇಟೆಯಾಡಿ ಒಟ್ಟು 37 ರನ್​ ಬಿಟ್ಟುಕೊಟ್ಟು 5 ವಿಕೆಟ್​ ಕಿತ್ತ ಸಾಧನೆ ಮಾಡಿದರು. ಜಿದ್ದಿಗೆ ಬಿದ್ದವರಂತೆ ಇವರಿಗೆ ಪೈಪೋಟಿ ನೀಡಿದ ಅವೇಶ್​ ಖಾನ್​ ತಮ್ಮ ಆವೇಶಭರಿತ ಬೌಲಿಂಗ್​ ದಾಳಿ ನಡೆಸಿ 27 ರನ್​ ನೀಡಿ 4 ವಿಕೆಟ್​ ಕಿತ್ತರು. ಉಭಯ ಬೌಲರ್​ಗಳ ಘಾತಕ ಬೌಲಿಂಗ್​ ದಾಳಿಯನ್ನು ಎದುರಿಸಲು ವಿಫಲವಾದ ಡೇವಿಡ್​ ಮಿಲ್ಲರ್​(2), ವಿಯಾನ್ ಮುಲ್ಡರ್(0), ಹೆನ್ರಿಕ್ ಕ್ಲಾಸೆನ್(6), ನಾಯಕ ಐಡೆನ್​ ಮಾರ್ಕ್ರಮ್​(12),ರಾಸ್ಸಿ ವ್ಯಾನ್ ಡೆರ್ ಡಸ್ಸೆನ್(0), ಹೆಂಡ್ರಿಕ್ಸ್(0) ಬಾರಿಸಿ ಪೆವಿಲಿಯನ್​ ಪರೇಡ್​ ನಡೆಸಿದರು.

ಇದನ್ನೂ ಓದಿ IPL 2024 : ರೋಹಿತ್ ಶರ್ಮಾ ಖರೀದಿಸಲು ಹೊಂಚು ಹಾಕಿದ ಡೆಲ್ಲಿ ಕ್ಯಾಪಿಟಲ್ಸ್​

ಮಾನ ಉಳಿಸಿದ ಫೆಹ್ಲುಕ್ವಾಯೊ

58ರನ್​ಗೆ 7 ವಿಕೆಟ್​ ಕಳೆದುಕೊಂಡು ಗಂಟುಮೂಟೆ ಕಟ್ಟುವ ಸ್ಥಿತಿಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸರೆಯಾದ್ದು ಬೌಲರ್​ ಆಂಡಿಲೆ ಫೆಹ್ಲುಕ್ವಾಯೊ. ಭಾರತೀಯ ಬೌಲರ್​ಗಳ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ 2 ಸಿಕ್ಸರ್​ ಮತ್ತು 3 ಬೌಂಡರಿ ಬಾರಿಸಿ 33 ರನ್​ ಗಳಿಸಿದರು. ಇರರದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಒಂದೊಮ್ಮೆ ಇವರು ಈ ಮೊತ್ತವನ್ನು ಬಾರಿಸುತ್ತಿರದಿದ್ದರೆ ಹರಿಣ ಪಡೆ 70 ರನ್​ಗೆ ಆಲೌಟ್​ ಆಗುತ್ತಿತ್ತು. ಇವರ ಈ ಬ್ಯಾಟಿಂಗ್​ನಿಂದಾಗಿ ಕನಿಷ್ಠ 100 ರನ್​ಗಳ ಗಡಿ ದಾಟುವಂತಾಯಿತು.

ವಿಶ್ವಕಪ್ ಬಳಿಕ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಆಡಲಿಳಿದ ಯುವ ಪಡೆಯ ಭಾರತ ಶ್ರೇಷ್ಠ ಪ್ರದರ್ಶನವನ್ನೇ ತೋರುವಲ್ಲಿ ಯಶಸ್ಸು ಕಂಡಿತು. ಅದೂ ಕೂಡ ವಿದೇಶಿ ಪಿಚ್​ನಲ್ಲಿ. ಈ ಪ್ರದರ್ಶನವನ್ನು ನೋಡುವಾಗ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ನಲ್ಲಿ ಯುವ ಪಡೆಯ ಮೇಲೆ ನಂಬಿಕೆಯೊಂದನ್ನು ಇಡಬಹುದಾಗಿದೆ.

Exit mobile version