Site icon Vistara News

Ind vs Sa T20 | ಬೆಂಗಳೂರು ಮ್ಯಾಚ್‌ಗೆ ಬಂದವರಿಗೆ ಟಿಕೆಟ್‌ನ 50% ದುಡ್ಡು ವಾಪಸ್‌

ಬೆಂಗಳೂರು: Ind vs Sa T20 | ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕೊನೆಯ ಟಿ೨೦ ಪಂದ್ಯ ನೋಡಲು ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋದವರಿಗೆ ಕೆಎಸ್‌ಸಿಎ ಸಿಹಿ ಸುದ್ದಿ ನೀಡಿದೆ. ಮಳೆಯ ಕಾರಣದಿಂದ ಪಂದ್ಯ ರದ್ದಾಗಿದ್ದರಿಂದ ಕ್ರೀಡಾಂಗಣಕ್ಕೆ ಮ್ಯಾಚ್‌ ನೋಡಲು ಹೋದ ಪ್ರೇಕ್ಷಕರಿಗೆ ನಿರಾಸೆಯಾಗಿತ್ತು. ಆದರೆ, ಕರ್ನಾಟಕ ರಾಜ್ಯ ಕ್ರಿಕೆಟ್‌ ಒಕ್ಕೂಟ 50%ರಷ್ಟು ಟಿಕೆಟ್‌ ದರವನ್ನು ಮರುಪಾವತಿಸಲು ತೀರ್ಮಾನಿಸಿದೆ.

ಕ್ರಿಕೆಟ್‌ ಅಭಿಮಾನಿಗಳು ಭಾನುವಾರದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ರೋಚಕ ಪಂದ್ಯವನ್ನು ವೀಕ್ಷಿಸುವ ನಿರೀಕ್ಷೆಯಲ್ಲಿದ್ದರು. ಇದು ಸರಣಿ ನಿರ್ಣಾಯಕ ಪಂದ್ಯವಾಗಿದ್ದರಿಂದ ಯಾರಿಗೆ ಟ್ರೋಫಿ ಎಂಬುದು ಕುತೂಹಲಕಾರಿಯಾಗಿತ್ತು. ಆದರೆ, ಅಭಿಮಾನಿಗಳ ನಿರೀಕ್ಷೆಯೆಲ್ಲ ಮಳೆಯಲ್ಲಿ ತೊಳೆದು ಹೋಯಿತು. 3.3 ಓವರ್‌ ಆದ ಬಳಿಕ ಶುರುವಾದ ಮಳೆ ನಿಲ್ಲಲೇ ಇಲ್ಲ. ಈ ಕಾರಣದಿಂದ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಹಾಗಾಗಿ, ಅಭಿಮಾನಿಗಳು ನಿರಾಸೆಯಿಂದ ಮನೆಗೆ ತೆರಳಬೇಕಾಯಿತು. ಟಿಕೆಟ್‌ ಪಡೆದು ಮ್ಯಾಚ್‌ ಕೂಡ ನೊಡದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಕೆ.ಎಸ್‌.ಸಿ.ಎ ಇದೀಗ ಒಂದು ಸಮಾಧಾನದ ಸುದ್ದಿ ನೀಡಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಒಕ್ಕೂಟದ ಕೋಶಾಧ್ಯಕ್ಷರಾದ ವಿನಯ್‌ ಮೃತ್ಯುಂಜಯ ಮಾತನಾಡಿ, ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಟಿಕೆಟ್‌ನ 50%ರಷ್ಟು ಹಣವನ್ನು ಪ್ರೇಕ್ಷಕರಿಗೆ ಮರುಪಾವತಿಸಲು ತೀರ್ಮಾನಿಸಿದ್ದೇವೆʼ ಎಂದು ತಿಳಿಸಿದ್ದಾರೆ.

ನಿಯಮ ಹಾಗೂ ಷರತ್ತುಗಳ ಪ್ರಕಾರ ಪಂದ್ಯದಲ್ಲಿ ಒಂದೇ ಒಂದು ಬಾಲ್‌ ಮಾಡಿದ್ದರೂ ಆ ಟಿಕೆಟ್‌ ದರವನ್ನು ಮರುಪಾವತಿ ಮಾಡುವ ಕ್ರಮವಿಲ್ಲ. ಆದರೆ, ಕೆ.ಎಸ್‌.ಸಿ.ಎ 50%ರಷ್ಟು ಹಣವನ್ನು ಮರುಪಾವತಿಸಲು ತೀರ್ಮಾನಿಸಿದ್ದು ವಿಶೇಷವಾಗಿದೆ. ಮರುಪಾವತಿ ಎಲ್ಲಿ? ಯಾವಾಗ? ಹೇಗೆ ಮಾಡಲಾಗುತ್ತದೆ ಎಂಬ ಮಾಹಿತಿ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಕೆಎಸ್‌ಸಿಎ ತಿಳಿಸಿದ್ದು, ಪ್ರೇಕ್ಷಕರು ತಮ್ಮ ಟಿಕೆಟನ್ನು ಕಾಪಾಡಿಟ್ಟುಕೊಳ್ಳುವಂತೆ ಸೂಚಿಸಿದೆ.

ಇದನ್ನೂ ಓದಿ: Ind vs Sa T20 | ಮಳೆಯಿಂದಾಗಿ ಪಂದ್ಯ ರದ್ದು, 2-2 ಸಮಬಲದೊಂದಿಗೆ ಸರಣಿ ಅಂತ್ಯ

Exit mobile version