ಬೆಂಗಳೂರು: ಕ್ರಿಕೆಟಿಗರು ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರುವ ಜತೆಗೆ ತಮ್ಮ ನಡವಳಿಕೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಏನಾದರೂ ಸ್ವಲ್ಪ ಹೆಚ್ಚು ಕಮ್ಮಿ ಆದರೆ ನೇರ ಪ್ರಸಾರದ ಕ್ಯಾಮೆರಾದ ಮೂಲಕ ಪ್ರೇಕ್ಷಕರಿಗೆ ವಿಷಯ ತಲುಪಿ ದೊಡ್ಡ ಚರ್ಚೆ ನಡೆಯುವುದು ಗ್ಯಾರಂಟಿ. ಅಂತೆಯೇ ಬೆಂಗಳೂರಿನಲ್ಲಿ ಭಾನುವಾರ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನಡುವಿನ ಟಿ೨೦ ಸರಣಿಯ ಕೊನೇ ಪಂದ್ಯದಲ್ಲಿ ಗ್ರೌಂಡ್ಸ್‌ಮನ್ ತಳ್ಳಿದ ಋತುರಾಜ್ ಗಾಯಕ್ವಾಡ್ ವರ್ತನೆ ಸರಿಯೊ ತಪ್ಪೊ ಎಂಬ ಚರ್ಚೆಗಳು ನಡೆದಿದೆ.
ಭಾನುವಾರದ ಈ ಪಂದ್ಯ ಮಳೆಯಿಂದಾಗಿ ರದ್ದುಗೊಂಡು ೫ ಪಂದ್ಯಗಳ ಸರಣಿ ೨-೨ ಅಂತರದಲ್ಲಿ ಡ್ರಾದಲ್ಲಿ ಮುಕ್ತಾಯಗೊಳ್ಳುವ ಮೊದಲು ಈ ಘಟನೆ ನಡೆದಿದೆ. ಋತುರಾಜ್ ಅವರ ಈ ನಡವಳಿಕೆ ಬಗ್ಗೆ ಪರ- ವಿರೋಧ ಜೋರು ಚರ್ಚೆಗಳು ನಡೆದಿದ್ದು, ಹಲವರು ಋತುರಾಜ್ ಗಾಯಕ್ವಾಡ್‌ಗೆ ಅಹಂಕಾರ ಎಂದರೆ, ಇನ್ನಲವರು ಸರಿಯಾಗಿ ಮಾಡಿದ್ದಾರೆ ಎಂದು ಅವರ ಬೆಂಬಲಕ್ಕೆ ನಿಂತಿದ್ದಾರೆ.
ತಳ್ಳಿದ್ದು ಯಾಕೆ?
ಪಂದ್ಯ ಸ್ಥಗಿತಗೊಂಡ ಸ್ವಲ್ಪ ಹೊತ್ತಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿತ್ತು. ಆರಂಭಿಕ ಬ್ಯಾಟರ್‌ಗಳಾದ ಋತುರಾಜ್ ಗಾಯಕ್ವಾಡ್ ಹಾಗೂ ಇಶಾನ್, ಕಿಶನ್ ಡಗ್‌ಔಟ್‌ನಲ್ಲಿ ಬ್ಯಾಟ್ ಮಾಡಲೆಂದು ಕಾದು ಕುಳಿತಿದ್ದರು. ಈ ವೇಳೆ ಮೈದಾನ ಸಿಬ್ಬಂದಿಯೊಬ್ಬರು ತಮ್ಮ ಕ್ಯಾಮೆರಾ ಹಿಡಿದುಕೊಂಡು ಋತುರಾಜ್ ಜತೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಅದಕ್ಕೊಪ್ಪದ ಋತುರಾಜ್ ಗಾಯಕ್ವಾಡ್ ಗ್ರೌಂಡ್ಸ್‌ಮನ್ ಅನ್ನು ದೂರ ತಳ್ಳಿದ್ದಾರೆ. ಆ ಸಿಬ್ಬಂದಿ ಮತ್ತೊಮ್ಮೆ ಸೆಲ್ಫಿ ತೆಗೆಸಿಕೊಳ್ಳುವಂತೆ ಒತ್ತಾಯ ಮಾಡಿ ಹತ್ತಿರ ಬಂದಿದ್ದಾರೆ. ಅಸಹನೆ ತೋರಿದ ಋತುರಾಜ್ ಗಾಯಕ್ವಾಡ್ ಅವರನ್ನು ದೂರ ತಳ್ಳಿದ್ದಾರೆ. ಈ ಪ್ರಸಂಗದ ಸುಮಾರು ೧೫ ಸೆಕೆಂಡ್‌ಗಳ ವಿಡಿಯೊ ಬಹಿರಂಗಗೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಋತುರಾಜ್ ಗಾಯಕ್ವಾಡ್ ಅವರ ನಡವಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸೆಲ್ಫಿ ತೆಗೆಯಲು ಮುಂದಾದ ಗ್ರೌಂಡ್ಸ್‌ಮನ್ ತಳ್ಳುವ ಮೂಲಕ ಈ ಯುವ ಕ್ರಿಕೆಟಿಗ ಅಹಂಕಾರ ಪ್ರದರ್ಶಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಟೀಕೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಋತುರಾಜ್ ಮಾಡಿದ್ದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ. ಋತುರಾಜ್ ಗಾಯಕ್ವಾಡ್ ಈಗಾಗಲೇ ಎರಡು ಬಾರಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಗ್ರೌಂಡ್ಸ್‌ಮನ್ ಹತ್ತಿರಕ್ಕೆ ಹೋದಾಗ ಅವರಿಗೆ ಮತ್ತೊಮ್ಮೆ ಕೊರೊನಾ ಸೋಂಕು ಬಾಧಿಸುವ ಭಯ ಉಂಟಾಗಿ ದೂರ ತಳ್ಳಿದ್ದಾರೆ ಎಂದು ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಕಂಡುಬಂದ ಕೆಲವು ಪ್ರತಿಕ್ರಿಯೆಗಳ ತುಣುಕುಗಳು:
ಮಾಜಿ ನಾಯಕ ಧೋನಿ ಅವರಿಂದ ಋತುರಾಜ್ ಗಾಯಕ್ವಾಡ್ ಬಹಳಷ್ಟು ಕಲಿಯಬೇಕು!
ಋತುರಾಜ್ ಗಾಯಕ್ವಾಡ್ ಗ್ರೌಂಡ್ಸ್‌ಮನ್ ತಳ್ಳಿರುವ ವರ್ತನೆ ಅವರ ಅಹಂಕಾರವನ್ನು ಸೂಚಿಸುತ್ತದೆ. ಮೊದಲು ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸಲು ಕಲಿಯಬೇಕು.
ಋತುರಾಜ್ ಗಾಯಕ್ವಾಡ್ ಅವರು ಭಾರತದ ಇತರ ಆಟಗಾರರನ್ನು ನೋಡಿ ಕಲಿಯಬೇಕಾಗಿದೆ!
ಒಂದು ಸೆಲ್ಫಿ ತೆಗೆಸಿಕೊಳ್ಳಲು ಬಂದ ಗ್ರೌಂಡ್ಸ್‌ಮನ್‌ಗೆ ಅಗೌರವ ತೋರಿದ್ದಾರೆ.
ಇದನ್ನೂ ಓದಿ: Ind vs Sa T20 | ಮಳೆಯಿಂದಾಗಿ ಪಂದ್ಯ ರದ್ದು, 2-2 ಸಮಬಲದೊಂದಿಗೆ ಸರಣಿ ಅಂತ್ಯ