ಜೊಹಾನ್ಸ್ಬರ್ಗ್: ಗುರುವಾರ ರಾತ್ರಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ದಕ್ಷಿಣ ಆಫ್ರಿಕಾ(IND vs SA) ವಿರುದ್ಧ ಭರ್ಜರಿ 106 ರನ್ಗಳ ಅಂತರದ ಗೆಲುವು ಸಾಧಿಸಿತು. ಈ ಮೂಲಕ ಸರಣಿಯನ್ನು 1-1 ಸಮಬಲ ಮಾಡಿಕೊಂಡಿತು. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಭಾರತ ಈ ಗೆಲುವಿನ ಮೂಲಕ ದಾಖಲೆಯೊಂದನ್ನು ಕೂಡ ನಿರ್ಮಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಇದುವರೆಗಿನ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ ದೊಡ್ಡ ಅಂತರದ ಗೆಲವು ಇದಾಗಿದೆ. ಆದರೆ ದಾಖಲೆ ಆಸ್ಟ್ರೇಲಿಯಾದ ಹೆಸರಿನಲ್ಲಿದೆ. ಆಸೀಸ್ ತಂಡ ಕ್ರಮವಾಗಿ 111 ಮತ್ತು 107 ರನ್ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ.
ಟಿ20 ಕ್ರಿಕೆಟ್ನಲ್ಲಿ ಭಾರತ ತಂಡದ ಅತ್ಯಂತ ದೊಡ್ಡ ಅಂತರದ ಗೆಲುವು 168 ರನ್. ಇದೇ ವರ್ಷ ಅಹಮದಾಬಾದ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಈ ಗೆಲುವು ದಾಖಲಾಗಿತ್ತು.
ಇದನ್ನೂ ಓದಿ Ind vs SA : ಮೂರನೇ ಪಂದ್ಯದಲ್ಲಿ ಭಾರತಕ್ಕೆ 106 ರನ್ ಜಯ, ಸರಣಿ ಸಮಬಲ
Joint winners of the T20I series.
— BCCI (@BCCI) December 14, 2023
🇮🇳 🤝 🇿🇦 #SAvIND pic.twitter.com/8Zg0aEhKoL
ಇಲ್ಲಿನ ದಿ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 13.5 ಓವರ್ಗಳಲ್ಲಿ 95 ರನ್ಗಳಿಗೆ ಆಲ್ಔಟ್ ಆಯಿತು. ಭಾರತದ ಬೌಲರ್ಗಳ ಮುಂದೆ ತಣ್ಣಗಾದ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ಗಳು ಸತತವಾಗಿ ವಿಕೆಟ್ ಒಪ್ಪಿಸಿದರು. ನಾಯಕ ಏಡೆನ್ ಮಾರ್ಕ್ರಮ್ 14 ಎಸೆತಕ್ಕೆ 25 ರನ್ ಬಾರಿಸಿದರೆ, ಡೇವಿಡ್ ಮಿಲ್ಲರ್ 25 ಎಸೆತಕ್ಕೆ 35 ರನ್ ಬಾರಿಸಿದ್ದು ಹರಿಣಗಳ ಪಡೆಯ ಪಾಲಿಗೆ ಗರಿಷ್ಠ ರನ್ ಎನಿಸಿಕೊಂಡಿತು. ಡೆನ್ವೊನ್ ಪೆರೆರಾ 12 ರನ್ ಬಾರಿಸಿದರೆ ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ಸೀಮಿತಗೊಂಡರು.
ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್ (100) ಹಾಗೂ 17 ರನ್ಗಳಿಗೆ 5 ವಿಕೆಟ್ ಉರುಳಿಸಿದ ಕುಲ್ದೀಪ್ ಯಾದವ್ ಮೂರನೇ ಪಂದ್ಯ ಗೆಲುವಿನ ರೂವಾರಿಗಳೆನಿಸಿಕೊಂಡರು. ಬರ್ತ್ಡೇ ಬಾಯ್ ಕುಲ್ದೀಪ್ ಯಾದವ್ ಮಾರಕ ದಾಳಿ ಸಂಘಟಿಸಿ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳು ನಿರುತ್ತರರಾಗುವಂತೆ ನೋಡಿಕೊಂಡರು. 2.5 ಓವರ್ಗಳಲ್ಲಿ 17 ರನ್ ನೀಡಿದ ಅವರು 5 ವಿಕೆಟ್ ಸಾಧನೆ ಮಾಡಿದರು.
ಶತಕ ಬಾರಿಸಿ ಮಿಂಚಿದ ಸೂರ್ಯ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊದಲ ಎರಡು ವಿಕೆಟ್ಗಳನ್ನು 29 ರನ್ಗಳಿಗೆ ಕಳೆದುಕೊಂಡಿತು. ಆದರೆ ಆ ಬಳಿಕ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 132 ರನ್ಗಳ ಜತೆಯಾಟ ನೀಡುವ ಮೂಲಕ ಕುಸಿದ ಭಾರತಕ್ಕೆ ನೆರವಾದರು. ಇಬ್ಬರೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಜೈಸ್ವಾಲ್ 60 ರನ್ಗಳಿಗೆ ಔಟಾದರು. ಆ ಬಳಿಕವೂ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ ಸೂರ್ಯಕುಮಾರ್ ಶತಕ ಬಾರಿಸಿದರು. ಇದು ಅವರ ಪಾಲಿನ 4ನೇಋ ಟಿ20 ಶತಕವಾಗಿದೆ.