Site icon Vistara News

IND vs SA Test Match: ವಿಶ್ವ ದಾಖಲೆ ಬರೆದ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್​ ಪಂದ್ಯ

South Africa vs India, 2nd Test

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಣ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಅಪರೂಪದ ವಿಶ್ವದಾಖಲೆಯೊಂದು ನಿರ್ಮಾಣವಾಗಿದೆ. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಕಡಿಮೆ ಎಸೆತಗಳಲ್ಲಿ ಮುಕ್ತಾಯವಾದ ಪಂದ್ಯ ಎನಿಸಿಕೊಂಡಿದೆ.

ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಈ ಪಂದ್ಯದ ಕೇವಲ ಒಂದುವರೆ ದಿನಗಳಲ್ಲಿ ಮುಕ್ತಾಯ ಕಂಡಿತು. ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಹರಿಣ ಪಡೆ ಮೊದಲ ಇನಿಂಗ್ಸ್‌ನಲ್ಲಿ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬ್ಯಾಟಿಂಗ್​ ನಡೆಸಿದ ಭಾರತ 153 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಅಚ್ಚರಿ ಎಂದರೆ 153 ರನ್​ಗೆ 4 ವಿಕೆಟ್​ ಕಳೆದುಕೊಂಡಿದ್ದ ಭಾರತ ನಾಟಕೀಯ ಕುಸಿತ ಕಂಡು ಇದೇ ಮೊತ್ತಕ್ಕೆ ಉಳಿದ 6 ವಿಕೆಟ್​ ಕಳೆದುಕೊಂಡು ಆಲೌಟ್​ ಆಗಿತ್ತು.

98 ರನ್‌ಗಳ ಹಿನ್ನಡೆಯೊಂದಿಗೆ ಬುಧವಾರವೇ ಎರಡನೇ ಇನಿಂಗ್ಸ್‌ ಆರಂಭಿಸಿದ್ಧ ದಕ್ಷಿಣ ಆಫ್ರಿಕಾ 62ಕ್ಕೆ 3 ವಿಕೆಟ್ ಕಳೆದುಕೊಂಡು 36 ರನ್‌ಗಳ ಹಿನ್ನಡೆಯಲ್ಲಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದಕೊಂಡಿತ್ತು. ಅದರಂತೆ 2ನೇ ದಿನವಾದ ಗುರುವಾರ ಬ್ಯಾಟಿಂಗ್​ ಮುಂದುವರಿಸಿದ ದಕ್ಷಿಣ ಆಫ್ರಿಕಾ ಐಡನ್‌ ಮಾರ್ಕ್ರಮ್​ ಬಾರಿಸಿದ ಶತಕದ ನೆರವಿನಿಂದ 176 ರನ್‌ ಬಾರಿಸಿ ಭಾರತಕ್ಕೆ 78 ರನ್‌ಗಳ ಸುಲಭ ಗುರಿ ನೀಡಿತು. ಗುರಿ ಬೆನ್ನತ್ತಿದ ರೋಹಿತ್​ ಪಡೆ ಕೇವಲ ಮೂರು ವಿಕೆಟ್​ ಕಳೆದುಕೊಂಡು 80 ರನ್​ ಬಾರಿಸಿ ಗೆಲುವಿನ ಪತಾಕೆ ಹಾರಿಸಿತು.

ಇದನ್ನೂ ಓದಿ WTC 2023-25 Points Table: ಆರರಿಂದ ಅಗ್ರಸ್ಥಾನಕ್ಕೇರಿದ ಟೀಮ್​ ಇಂಡಿಯಾ

ಈ ಪಂದ್ಯವು 107 ಓವರ್‌ಗಳಲ್ಲೇ (642 ಎಸೆತಗಳ್ಲಲೇ) ಫಲಿತಾಂಶ ಕಾಣುವ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಮುಕ್ತಾಯ ಕಂಡ ಮೊದಲ ಪಂದ್ಯ ಎನ್ನುವ ವಿಶ್ವದಾಖಲೆ ಬರೆಯಿತು. 1932ರಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯವು 656 ಎಸೆತಗಳಲ್ಲಿ ಪೂರ್ಣಗೊಂಡಿತ್ತು. ಇದು ಈವರೆಗಿನ ದಾಖಲೆಯಾಗಿ ಉಳಿದಿತ್ತು. ಈಗ ಈ ದಾಖಲೆ ಪತನಗೊಂಡಿದೆ. ಅಂದಿನ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. 1935ರಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ನಡುವಣ ಪಂದ್ಯವು 672 ಎಸೆತಗಳಲ್ಲಿ ಮುಗಿದಿತ್ತು.

ಅತಿ ಕಡಿಮೆ ಎಸೆತಗಳಲ್ಲಿ ಮುಕ್ತಾಯ ಕಂಡ ಟೆಸ್ಟ್​ ಪಂದ್ಯ

ಭಾರತ-ದಕ್ಷಿಣ, 642 ಎಸೆತ, ಸ್ಥಳ ಕೇಪ್​ ಟೌನ್​ (2024)

ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ, 656 ಎಸೆತ, ಸ್ಥಳ ಮೆಲ್ಬೊರ್ನ್​(1932)

ವೆಸ್ಟ್​ ಇಂಡೀಸ್​-ಇಂಗ್ಲೆಂಡ್, 672 ಎಸೆತ, ಸ್ಥಳ ಬ್ರಿಡ್ಜ್​ಟೌನ್​(1935)

ಇಂಗ್ಲೆಂಡ್​-ಆಸ್ಟ್ರೇಲಿಯಾ, 788 ಎಸೆತ, ಸ್ಥಳ ಮ್ಯಾಂಚೆಸ್ಟರ್​(1888)

ಇಂಗ್ಲೆಂಡ್​-ಆಸ್ಟ್ರೇಲಿಯಾ, 792 ಎಸೆತ, ಸ್ಥಳ ಲಾರ್ಡ್ಸ್​(1888)


ವಿಕೆಟ್​ ಪತನದಲ್ಲಿಯೂ ದಾಖಲೆ


ಒಂದೇ ದಿನ 23 ವಿಕೆಟ್ ಪತನವಾಗಿರುವುದು ಕೂಡ ಟೆಸ್ಟ್ ಇತಿಹಾಸದಲ್ಲಿ ಈ ಶತಮಾನದ ಹೊಸ ದಾಖಲೆಯಾಗಿದೆ. 1902 ರಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವೆ ಮೆಲ್ಬೋರ್ನ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ 25 ವಿಕೆಟ್ ಪತನವಾಗಿದ್ದು ಈ ಹಿಂದಿನ ದಾಖಲೆಯಾಗಿತ್ತು. 1888 ರಲ್ಲಿ ಲಾರ್ಡ್ಸ್ ನಲ್ಲಿ ನಡೆದ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಎರಡನೇ ದಿನದ ಆಟದಲ್ಲಿ 27 ವಿಕೆಟ್ ಪತನವಾಗಿತ್ತು. 2018 ರಲ್ಲಿ ಬೆಂಗಳೂರಿನಲ್ಲಿ ಭಾರತ ಮತ್ತು ಅಫಘಾನಿಸ್ತಾನ ನಡುವಿನ ಪಂದ್ಯದ 2ನೇ ದಿನ 24 ವಿಕೆಟ್ ಪತನವಾಗಿತ್ತು.

Exit mobile version