Site icon Vistara News

IND vs SA: ಕುಸಿದ ಭಾರತ ತಂಡಕ್ಕೆ ಆಸರೆಯಾದ ಕನ್ನಡಿಗ ಕೆಎಲ್​ ರಾಹುಲ್​

KL Rahul had to dig deep to bring up his half-century

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ(IND vs SA) ವಿರುದ್ಧ ಇಂದು(ಮಂಗಳವಾರ) ಆರಂಭಗೊಂಡ ಬಾಕ್ಸಿಂಗ್​ ಡೇ ಟೆಸ್ಟ್(South Africa vs India, 1st Test)​ ಪಂದ್ಯದಲ್ಲಿ ಭಾರತ ತಂಡ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರ ಏಕಾಂಗಿ ಹೋರಾಟದ ಫಲದಿಂದ ಚೇತರಿಕೆಯ ಹಾದಿಯಲ್ಲಿದೆ. ಮೂರು ಅವಧಿಯ ಆಟ ಮುಕ್ತಾಯ ಕಂಡ ವೇಳೆ ಮಳೆ ಬಂದ ಕಾರಣ ಇಲ್ಲಿಗೆ ಮೊದಲ ದಿನದ ಆಟ ಮುಕ್ತಾಯ ಕಂಡಿದೆ. ರಾಹುಲ್​(70*) ಮತ್ತು ಖಾತೆ ತೆರೆಯದ ಸಿರಾಜ್​ ದ್ವಿತೀಯ ದಿನಕ್ಕೆ ಬ್ಯಾಟಿಂಗ್​​ ಕಾಯ್ದುಕೊಂಡಿದ್ದಾರೆ.

ಜೊಹಾನ್ಸ್​ಬರ್ಗ್​ನ ಸೆಂಚುರಿಯನ್​ನಲ್ಲಿ ಆರಂಭಗೊಂಡ ಈ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ಆರಂಭದಲ್ಲೇ ಆಘಾತ ಎದುರಿಸಿತು. ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಇದೇ ಮೊದಲ ಬಾರಿ ಆಡಲಿಳಿದ ನಾಯಕ ರೋಹಿತ್​ ಶರ್ಮ(5) ಕೇವಲ ಒಂದು ಬೌಂಡರಿಗೆ ಸೀಮಿತರಾಗಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ದ್ವಿತೀಯ ವಿಕೆಟ್​ಗೆ ಕ್ರೀಸ್​ಗೆ ಬಂದ ಶುಭಮನ್​ ಗಿಲ್​ ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. 12 ಎಸೆತ ಎದುರಿಸಿ ಕೇವಲ 2 ರನ್​ಗಳಿಸಿ ಔಟಾದರು.

ಇದನ್ನೂ ಓದಿ IND vs SA : ಮೊದಲ ಪಂದ್ಯಕ್ಕೆ ರವೀಂದ್ರ ಜಡೇಜಾ ಇಲ್ಲ; ಕಾರಣ ಹೇಳಿದ ರೋಹಿತ್​

ಆರಂಭಿಕ ಆಘಾತದಿಂದ ಪಾರು ಮಾಡಿದ ಕೊಹ್ಲಿ-ಅಯ್ಯರ್​

ಬಡಬಡನೆ 4 ಬೌಂಡರಿ ಬಾರಿಸಿದ ಯುವ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಕೂಡ 17 ರನ್​ಗೆ ಆಟ ಮುಗಿಸಿದರು. ತಂಡದ ಮೊತ್ತ 24 ಆಗುವಷ್ಟರಲ್ಲಿ ಮೂರು ವಿಕೆಟ್​ ಕಳೆದುಕೊಂಡ ಭಾರತ ಆರಂಭಿಕ ಆಘಾತಕ್ಕೆ ಒಳಗಾಯಿತು. ಈ ವೇಳೆ ನಾಲ್ಕನೇ ವಿಕೆಟ್​ಗೆ ಜತೆಯಾದ ಶ್ರೇಯಸ್​ ಅಯ್ಯರ್​ ಮತ್ತು ವಿರಾಟ್​ ಕೊಹ್ಲಿ ಕೆಲ ಕಾಲ ತಾಳ್ಮೆಯುತ ಬ್ಯಾಟಿಂಗ್​ ನಡೆಸುವ ಮೂಲಕ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು.

ಉತ್ತಮ ಬ್ಯಾಟಿಂಗ್​ ನಡೆಸುವ ಮೂಲಕ ಭೋಜನ ವಿರಾಮದ ತನಕ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಈ ವಿರಾಮದ ಬಳಿಕ ವಿಕೆಟ್​ ಕೈಚೆಲ್ಲಿದರು. ಉಭಯ ಆಟಗಾರರ ಜತೆಯಾಟಕ್ಕೆ ರಬಾಡ ಬ್ರೇಕ್​ ಹಾಕಿದರು. 31 ರನ್​ ಗಳಿಸಿದ್ದ ಅಯ್ಯರ್​ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿದರು. ಕೊಹ್ಲಿ ಮತ್ತು ಅಯ್ಯರ್​ 4ನೇ ವಿಕೆಟ್​ಗೆ 68 ರನ್​ ಜತೆಯಾಟ ನಡೆಸಿದರು. ಅಯ್ಯರ್​ ಅವರ ವಿಕೆಟ್​ ಬಿದ್ದು 15 ರನ್​ ಅಂತರದಲ್ಲಿ ವಿರಾಟ್​ ಕೊಹ್ಲಿಯ ವಿಕೆಟ್​ ಕೂಡ ಬಿದ್ದಿತು. ಕೊಂಚ ಚೇತರಿಕೆ ಕಂಡಿದ್ದ ಭಾರತ ಮತ್ತೆ ಆಘಾತಕ್ಕೊಳಗಾಯಿತು. ವಿರಾಟ್​ ಕೊಹ್ಲಿ 64 ಎಸೆತ ಎದುರಿಸಿ 5 ಬೌಂಡರಿ ನರೆವಿನಿಂದ 38 ರನ್​ ಗಳಿಸಿದರು.

ತಂಡಕ್ಕೆ ಆಸರೆಯಾದ ರಾಹುಲ್​

ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ಹಿರಿಯ ಸ್ಪಿನ್ನರ್​ ಆರ್​.ಅಶ್ವಿನ್​ ಅವರು ಕೇವಲ 8 ರನ್​ಗೆ ಆಟ ಮುಗಿಸಿದರು. ಇನ್ನೇನು 150ರ ಒಳಗೆ ಭಾರತ ಗಂಟು ಮೂಟೆ ಕಟ್ಟುತ್ತದೆ ಎಂಬ ಸ್ಥಿತಿಯಲ್ಲಿದ್ದಾಗ ತಂಡಕ್ಕಾಗಿ ಟೊಂಕ ಕಟ್ಟಿ ನಿಂತು, ಹರಿಣಗಳ ಬಿಗು ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ರಾಹುಲ್​ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ವಿಚಲಿತರಾಗದೆ ಮತ್ತೊಂದು ತುದಿಯಲ್ಲಿ ಬೇರೂರಿ ನಿಂತ ರಾಹುಲ್​ ಎದೆಗುಂದದೆ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಹರಿಣಗಳ ಬೌಲರ್​ಗಳಿಗೆ ಕಾಡಿದರು. ಅವರು ನಿಂತು ಆಡದೇ ಹೋಗಿದ್ದರೆ ಭಾರತ ಮೊದಲ ಇನಿಂಗ್ಸ್​ನಲ್ಲಿ ಭಾರಿ ಹಿನ್ನಡೆ ಅನುಭವಿಸುತ್ತಿತ್ತು. ಸದ್ಯ 8 ವಿಕೆಟ್​ ಕಳೆದುಕೊಂಡಿರುವ ಭಾರತ 208 ರನ್​ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ.

ರಾಹುಲ್​ 105 ಸೆತ ಎದುರಿಸಿ ಬರೋಬ್ಬರಿ 10 ಬೌಂಡರಿ ಮತ್ತು 2 ಸಿಕ್ಸರ್​ ಬಾರಿಸಿ ಅಜೇಯ 70 ರನ್​ ಗಳಿಸಿದ್ದಾರೆ. ಜೋರು ಮಳೆಯಾದ ಪರಿಣಾಮ ಮೈದಾನದ ನೀರು ಇಂಗಲು ಹೆಚ್ಚಿನ ಸಮಯ ಬೇಕಾದಂತೆ ಕಂಡುಬಂದ ಕಾರಣ ಪಂದ್ಯವನ್ನು ಇಲ್ಲಿಗೆ ನಿಲ್ಲಿಸಲಾಯಿತು. ಬುಧವಾರ ದ್ವಿತೀಯ ದಿನದ ಆಟ ಮುಂದುವರಿಯಲಿದೆ. ಆದರೆ ದ್ವಿತೀಯ ದಿನಕ್ಕೂ ಮಳೆಯ ಭೀತಿ ಇದೆ.

Exit mobile version