Site icon Vistara News

IND vs SA: ಇನಿಂಗ್ಸ್​, 32 ರನ್​ಗಳ ಸೋಲಿಗೆ ತುತ್ತಾದ ಭಾರತ

A thrilled South African unit celebrates with David Bedingham after he catches R Ashwin out for a duck

ಜೊಹಾನ್ಸ್​ಬರ್ಗ್​: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಭಾರತ ಇನಿಂಗ್ಸ್​ ಮತ್ತು 32 ರನ್​ಗಳ ಸೋಲಿಗೆ ತುತ್ತಾಗಿದೆ. ಮೂರೇ ದಿನಕ್ಕೆ ಈ ಪಂದ್ಯ ಅತ್ಯಂಕಡಿತು. ಭಾರತದ ದ್ವಿತೀಯ ಇನಿಂಗ್ಸ್​ನಲ್ಲಿ ಕೊಹ್ಲಿಯ ಏಕಾಂಗಿ ಹೋರಾಟದ ಅರ್ಧಶತಕ ಮಾತ್ರ ಹೈಲೆಟ್​ ಆಗಿತ್ತು.

ಇಲ್ಲಿನ ಸೆಂಚುರಿಯನ್​ ಸೂಪರ್​ಸ್ಪೋರ್ಟ್ಸ್​ ಪಾರ್ಕ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ಮೊದಲ ಇನಿಂಗ್ಸ್​ನಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​(101) ಅವರ ಶತಕದ ನೆರವಿನಿಂದ 245ರನ್​ಗೆ ಆಲೌಟ್​ ಆಯಿತು. ಜವಾಬಿತ್ತ ದಕ್ಷಿಣ ಆಫ್ರಿಕಾ ವಿದಾಯ ಸರಣಿ ಆಡುತ್ತಿರುವ ಡೀನ್​ ಎಲ್ಗರ್​(185) ಮತ್ತು ವೇಗಿ ಮಾರ್ಕೊ ಜಾನ್ಸೆನ್​(ಅಜೇಯ 84) ಬ್ಯಾಟಿಂಗ್​ ನೆರವಿನಿಂದ 408 ರನ್​ ಬಾರಿಸಿ 163 ರನ್​ಗಳ ಮುನ್ನಡೆ ಸಾಧಿಸಿತು.

163 ರನ್​ಗಳ ಹಿನ್ನೆಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಭಾರತ ಆರಂಭದಲ್ಲೇ ಸತತವಾಗಿ ವಿಕೆಟ್​ ಕಳೆದುಕೊಂಡು ಇನ್ನಿಂಗ್ಸ್​ ಮತ್ತು 32 ರನ್​ಗಳ ಸೋಲು ಕಂಡಿತು. ನಾಯಕ ರೋಹಿತ್​ ಶರ್ಮಾ ಶೂನ್ಯ ಸುತ್ತಿದರೆ, ಅವರ ಜತೆಗಾರ ಯಶಸ್ವಿ ಜೈಸ್ವಾಲ್​ 5 ರನ್​ಗೆ ಆಟ ಮುಗಿಸಿದರು. ಬರವಸೆಯ ಆಟಗಾರ ಶುಭಮನ್​ ಗಿಲ್​ ಈ ಪಂದ್ಯದಲ್ಲಿಯೂ ಕೈ ಕೊಟ್ಟರು. ಬಡಬಡನೆ 6 ಬೌಂಡರಿ ಬಾರಿಸಿ 25 ರನ್​ಗೆ ವಿಕೆಟ್​ ಕೈಚೆಲ್ಲಿದರು.

ಇದನ್ನೂ ಓದಿ Virat Kohli: ಕುಮಾರ ಸಂಗಕ್ಕರ ವಿಶ್ವ ದಾಖಲೆ ಮುರಿದ ‘ಕಿಂಗ್​’ ವಿರಾಟ್​ ಕೊಹ್ಲಿ

ಗಿಲ್​ ವಿಕೆಟ್​ ಪತನದ ಬಳಿಕ ಆಡಲಿಳಿದ ಶ್ರೇಯಸ್​ ಅಯ್ಯರ್ 4 ರನ್ ಗಳಿಸಿದ್ದ ವೇಳೆ​ ಒಂದು ಜೀವದಾನ ಪಡೆದರೂ ಇದರ ಲಾಭವೆತ್ತುವಲ್ಲಿ ವಿಫಲರಾದರು. 6 ರನ್​ ಗಳಿಸಿ ಜಾನ್ಸೆನ್​ಗೆ ವಿಕೆಟ್​ ಒಪ್ಪಿಸಿದರು. ಮೊದಲ ಇನಿಂಗ್ಸ್​ನಲ್ಲಿ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ರಾಹುಲ್​ ದ್ವಿತೀಯ ಇನಿಂಗ್ಸ್​ನಲ್ಲಿ ಒಂದಕಿಂಗೆ ಸೀತರಾದರು. ಅವರ ಗಳಿಕೆ 4. ಇದು ಕೂಡ ಒಂದು ಬೌಂಡರಿ ಮೂಲಕ ದಾಖಲಾಯಿತು.

ಕೊಹ್ಲಿ ಏಕಾಂಗಿ ಹೋರಾಟ

ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಕೂಡ ವಿರಾಟ್​ ಕೊಹ್ಲಿ ಕ್ರೀಸ್​ ಕಚ್ಚಿ ನಿಂತು ಎದೆಗುಂದದೆ ರನ್​ ಗಳಿಸುತ್ತಿದ್ದರು. ಆದರೆ ಇವರಿಗೆ ಯಾರೋಬ್ಬರು ಕೂಡ ಸಾಥ್​ ನೀಡಲಿಲ್ಲ. ಕೊಹ್ಲಿಯನ್ನು ಮೈದಾನದಲ್ಲಿ ನೋಡುವಾಗ ಅಸಹಾಯಕರಂತೆ ಕಂಡು ಬಂತು. ಆದರೂ ಛಲ ಬಿಡದ ಕೊಹ್ಲಿ ಇನಿಂಗ್ಸ್​ ಸೋಲನ್ನು ತಪ್ಪಿಸಲು ಪ್ರಯತ್ನಪಟ್ಟರು. ಆದರೆ, ಅಂತಿಮವಾಗಿ ರಬಾಡಗೆ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಜಾನ್ಸೆನ್​ ಪಾಲಾಯಿತು. 82 ಎಸೆತ ಎದುರಿಸಿ 12 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿದ ಕೊಹ್ಲಿ 76 ರನ್​ ಗಳಿಸಿದರು. ಭಾರತ ಪರ ಕೊಹ್ಲಿ ಮತ್ತು ಗಿಲ್​ ಮಾತ್ರ ಎರಡಂಕಿ ಮೊತ್ತ ಕಲೆ ಹಾಕಿದರು. ಉಳಿದ 8 ಮಂದಿ ಬ್ಯಾಟರ್​ಗಳದ್ದು ಸಿಂಗಲ್ ಡಿಜಿಟ್​ ಮೊತ್ತ. ರೋಹಿತ್​, ಬುಮ್ರಾ ಮತ್ತು ಅಶ್ವಿನ್​ ಶೂನ್ಯಕ್ಕೆ ಔಟಾದರು. ದಕ್ಷಿಣ ಆಫ್ರಿಕಾ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಬರ್ಗರ್​ 4, ಮಾರ್ಕೊ ಜಾನ್ಸೆನ್​(3) ಮತ್ತು ರಬಾಡ 2 ವಿಕೆಟ್​ ಕಿತ್ತರು.

ಇದಕ್ಕೂ ಮುನ್ನ 140 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಡೀನ್​ ಎಲ್ಗರ್​ ಮೂರನೇ ದಿನದಾಟದಲ್ಲಿ 45 ರನ್​ ಬಾರಿಸಿದರು. ಅವರ ಒಟ್ಟು ಗಳಿಕೆ 185 ರನ್​. ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 28 ಬೌಂಡರಿ ದಾಖಲಾಯಿತು. ದ್ವಿಶತಕದತ್ತ ಮುನ್ನುಗ್ಗುತ್ತಿದ್ದ ಅವರನ್ನು ಶಾರ್ದೂಲ್​ ಠಾಕೂರ್​ ಅವರು ವೈಡ್​ ಲೈನ್​ನತ್ತ ಬೌಲಿಂಗ್​ ಎಸೆದು ಕ್ಯಾಚ್​ ನೀಡುವಂತೆ ಮಾಡಿ ವಿಕೆಟ್​ ಕಬಳಿಸಿದರು.

ಆಲ್​ರೌಂಡರ್​ ಪ್ರದರ್ಶನ ತೋರಿದ ಜಾನ್ಸೆನ್​

ಬೌಲಿಂಗ್ ಆಲ್​ರೌಂಡರ್​ ಆಗಿರುವ ಮಾರ್ಕೊ ಜಾನ್ಸೆನ್​ ಈ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರುವ ಮೂಲಕ ಅಜೇಯ ಅರ್ಧಶತಕ ಬಾರಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ಡೀನ್​ ಎಲ್ಗರ್​ ಜತೆ ಸೇರಿಕೊಂಡು ಉತ್ತಮ ಇನಿಂಗ್ಸ್​ ಕಟ್ಟಿ ಭಾರತೀಯ ಬೌಲರ್​ಗಳನ್ನು ಕಾಡಿದರು. ಕೊನೆಗೂ ಅವರು ಅಜೇಯರಾಗಿ ಉಳಿದರು. 11 ಬೌಂಡರಿ ಮತ್ತು 1 ಸಿಕ್ಸರ್​ ಬಾರಿಸಿ ಅಜೇಯ 84 ರನ್​ ಗಳಿಸಿದರು. ಬವುಮಾ ಗಾಯಗೊಂಡು ಬ್ಯಾಟಿಂಗ್​ ನಡೆಸದ ಕಾರಣ ಅವರಿಗೆ ಶತಕ ಬಾರಿಸುವ ಅವಕಾಶ ಕೈ ತಪ್ಪಿತು. ಮಾರ್ಕೊ ಜಾನ್ಸೆನ್​ ಮತ್ತು ಡೀನ್​ ಎಲ್ಗರ್​ ಜೋಡಿ 6ನೇ ವಿಕೆಟ್​ಗೆ ಭರ್ತಿ 111 ರನ್​ಗಳ ಜತೆಯಾಟ ನಡೆಸಿತು.

ಭಾರತ ಪರ ಜಸ್​ಪ್ರೀತ್​ ಬುಮ್ರಾ 69 ನೀಡಿ 4 ವಿಕೆಟ್​ ಕಿತ್ತು ಯಶಸ್ವಿ ಬೌಲರ್​ ಎನಿಸಿಕೊಂಡರು. ಮೊಹಮ್ಮದ್​ ಸಿರಾಜ್​ 2 ವಿಕೆಟ್​ ಪಡೆದರು. ಉಳಿದಂತೆ ಠಾಕೂರ್​, ಅಶ್ವಿನ್​ ಮತ್ತು ಪ್ರಸಿದ್ಧ್​ ತಲಾ ಒಂದು ವಿಕೆಟ್​ ಕಿತ್ತರು. ಶಾದೂಲ್​ ಕೊಂಚ ದುಬಾರಿಯಾಗಿ ಕಂಡು ಬಂದರು.

Exit mobile version