Site icon Vistara News

IND vs SL 3rd ODI: 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಏಕದಿನ ಸರಣಿ ಶ್ರೀಲಂಕಾ ಮಡಿಲಿಗೆ

IND vs SL 3rd ODI

ಕೊಲೊಂಬೊ: ಟಿ-20 ವಿಶ್ವಕಪ್‌, ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಗೆಲುವಿನ ಅತ್ಯುತ್ಸಾಹದಲ್ಲಿದ್ದ ಭಾರತ ತಂಡಕ್ಕೆ ಶ್ರೀಲಂಕಾ ತಂಡವು ಏಕದಿನ ಸರಣಿಯಲ್ಲಿ (IND vs SL 3rd ODI) ಆಘಾತ ನೀಡಿದೆ. ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ಬಳಗವನ್ನು 110 ರನ್‌ಗಳಿಂದ ಮಣಿಸುವ ಮೂಲಕ ಶ್ರೀಲಂಕಾ 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದ ದಾಖಲೆ ಬರೆಯಿತು.

ಶ್ರೀಲಂಕಾ ನೀಡಿದ 249 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್‌ ಶರ್ಮಾ (35) ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾವೊಬ್ಬ ಆಟಗಾರನೂ ನೆಲಕಚ್ಚಿ ಆಡಲಿಲ್ಲ. ವಿರಾಟ್‌ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದರು. ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌ ಕೂಡ ಭಾರತ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲಿಲ್ಲ. ಶುಭಮನ್‌ ಗಿಲ್‌ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಇದರಿಂದಾಗಿ ಭಾರತ ಮೂರನೇ ಪಂದ್ಯವನ್ನು ಸೋತು, ಸರಣಿ ಬಿಟ್ಟುಕೊಡಬೇಕಾಯಿತು.

ಆವಿಷ್ಕ ಫರ್ನಾಂಡೋ ಭರ್ಜರಿ ಬ್ಯಾಟಿಂಗ್

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ, ಭರ್ಜರಿ ಆರಂಭ ಪಡೆಯಿತು. ಪಥುಮ್‌ ನಿಸಂಕಾ (45), ಆವಿಷ್ಕ ಫರ್ನಾಂಡೋ (96) ಹಾಗೂ ಕುಶಾಲ್‌ ಮೆಂಡಿಸ್‌ (59) ರನ್‌ಗಳ ನೆರವಿನಿಂದ ಒಂದು ಹಂತದಲ್ಲಿ ಶ್ರೀಲಂಕಾ 3 ವಿಕೆಟ್‌ಗೆ 183 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬೃಹತ್‌ ಮೊತ್ತ ಪೇರಿಸುವ ಸಾಧ್ಯತೆಯೂ ಇತ್ತು. ಆದರೆ, ನಂತರ ಬಂದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿ ವಿಕೆಟ್‌ ಒಪ್ಪಿಸಿದ ಕಾರಣ ಶ್ರೀಲಂಕಾ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಪರ ರಿಯಾನ್‌ ಪರಾಗ್‌ 3 ವಿಕೆಟ್‌ ಕಬಳಿಸಿದರೆ, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಕುಲದೀಪ್‌ ಯಾದವ್‌ ಅವರು ತಲಾ ಒಂದು ವಿಕೆಟ್‌ ಪಡೆದರು. ಮೊದಲ ಪಂದ್ಯ ರೋಚಕ ಟೈ ಆದರೆ, ಎರಡನೇ ಪಂದ್ಯದಲ್ಲಿ ಭಾರತವು 32 ರನ್‌ಗಳಿಂದ ಸೋಲನುಭವಿಸಿತ್ತು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ 50 ಓವರ್‌ಗಳಲ್ಲಿ 248/7

(ಆವಿಷ್ಕ ಫರ್ನಾಂಡೋ 96, ಕುಶಾಲ್‌ ಮೆಂಡಿಸ್‌ 59, ರಿಯಾನ್‌ ಪರಾಗ್‌ 54/3)

ಭಾರತ ಓವರ್‌ಗಳಲ್ಲಿ 130ಕ್ಕೆ ಆಲೌಟ್‌

(ರೋಹಿತ್‌ ಶರ್ಮಾ 35, ರಿಯಾನ್‌ ಪರಾಗ್‌ 30, ದುನಿತ್‌ ವೆಲ್ಲಲಾಗೆ 27/5)

ಇದನ್ನೂ ಓದಿ: Chuttamalle Song: ‘ಮಾನಿಕೆ ಮಾಗೆ ಹಿತೆ’ ಹಾಡಿನ ಟ್ಯೂನ್‌ ಕದ್ರಾ ಅನಿರುದ್ಧ ರವಿಚಂದರ್? ಶ್ರೀಲಂಕಾ ಕಂಪೋಸರ್‌ ಹೇಳೋದೇನು?

Exit mobile version