ಕೊಲಂಬೊ: ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಏಷ್ಯಾಕಪ್(Asia Cup 2023) ಸೂಪರ್-4(India vs Sri Lanka, Super Fours) ಪಂದ್ಯವನ್ನು ಭಾರತ ತಂಡ 41 ರನ್ನುಗಳಿಂದ ಗೆದ್ದು ಏಷ್ಯಾ ಕಪ್ ಫೈನಲ್ ಪ್ರವೇಶಿಸಿದೆ. ಸೋಲಿನಿಂದ ಹತಾಶರಾದ ಶ್ರೀಲಂಕಾದ ಅಭಿಮಾನಿಗಳು ಭಾರತದ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ದುರ್ವರ್ತನೆಗೆ ಬಿಸಿಸಿಐ ಸೇರಿ ಕೆಲ ಭಾರತೀಯ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಏಕಾಏಕಿ ಹಲ್ಲೆ ನಡೆಸಿದ ಲಂಕಾ ಅಭಿಮಾನಿಗಳು
ಕೊಲಂಬೊದ ಆರ್. ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 49.1 ಓವರ್‌ಗಳಲ್ಲಿ 213ಕ್ಕೆ ಆಲೌಟಾಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ 41.3 ಓವರ್‌ಗಳಲ್ಲಿ 172ಕ್ಕೆ ಆಲೌಟ್ ಆಗಿ ಸೋಲು ಕಂಡಿತು. ಈ ಸೋಲಿನಿಂದ ಶ್ರೀಲಂಕಾದ ಫೈನಲ್ ಹಾದಿ ದುರ್ಗಮಗೊಂಡಿದೆ. ಗುರುವಾರ ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿತು. ಇದೇ ಸಿಟ್ಟಿನಲ್ಲಿ ಲಂಕಾದ ಅಭಿಮಾನಿಗಳು ಗ್ಯಾಲರಿಯಲ್ಲಿದ್ದ ಭಾರತ ತಂಡದ ಅಭಿಮಾನಿಗಳ ಮೇಲೆ ಏಕಾಏಕಿ ಹಲ್ಲೆ ನಡೆಸಿ ದುರ್ವರ್ತನೆ ತೋರಿದ್ದಾರೆ. ಈ ವಿಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ಲಂಕಾದ ಕೆಲ ಅಭಿಮಾನಿಗಳು ಭಾರತೀಯರ ಮೇಲೆ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ದುರ್ವರ್ತನೆಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದ್ದು, ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲಂಕಾ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ.
India – Sri Lanka : Fans engage in fight.#AsiaCup2023 #AsiaCup pic.twitter.com/WqxsxMmSYe
— MrDeepak (@X_MrDeepak) September 13, 2023
ಭಾರತದ ಬ್ಯಾಟಿಂಗ್ ಸರದಿಯಲ್ಲಿ ರೋಹಿತ್ ಶರ್ಮ-ಶುಭಮನ್ ಗಿಲ್ ಜೋಡಿ ಮೊದಲ ವಿಕೆಟಿಗೆ 11.1 ಓವರ್‌ಗಳಿಂದ 80 ರನ್ ಪೇರಿಸಿದರು. ಆದರೆ ಮತ್ತೆ ಆ ಬಳಿಕ 106 ರನ್ ರನ್ ಒಟ್ಟುಗೂಡುವಷ್ಟರಲ್ಲಿ 9 ವಿಕೆಟ್ ಪತನಗೊಂಡಿತು. ಪಾಕ್ ವಿರುದ್ಧ ಮಿಂಚಿದ್ದ ಕೊಹ್ಲಿ ಕೇವಲ ಮೂರು ರನ್ಗೆ ಆಟಮುಗಿಸಿದರು.
ಕೆಟ್ಟ ದಾಖಲೆ ಬರೆದ ಭಾರತ
1997ರ ಕೊಲಂಬೊ ಪಂದ್ಯದಲ್ಲಿ ಶ್ರೀಲಂಕಾದ ಸಿನ್ನರ್‌ಗಳು ಭಾರತದ 9 ವಿಕೆಟ್ ಕೆಡವಿದ್ದು ಭಾರತದೆದುರಿನ ಈವರೆಗಿನ ಉತ್ತಮ ಸಾಧನೆಯಾಗಿತ್ತು. ಆದರೆ ಮಂಗಳವಾರ 10 ವಿಕೆಟ್ ಕೂಡ ಸ್ಪಿನ್ನ್ಗೆ ಒಪ್ಪಿಸಿ ಭಾರತ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿತು. ಅದು ಕೂಡ ಅನಾನುಭವಿ ಸ್ಪಿನ್ನರ್ಗಳಿಗೆ ವಿಕೆಟ್ ಒಪ್ಪಿಸಿದ್ದು ಹಲವು ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ ICC Odi Ranking: ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ ಗಿಲ್,ರೋಹಿತ್, ಕುಲ್ದೀಪ್
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವೆಲ್ಲಲಗೆ
ಭಾರತದ ಕುಸಿತಕ್ಕೆ ಕಾರಣರಾದವರು ದುನಿತ್ ವೆಲ್ಲಲಗೆ. ಅವರು 40 ರನ್ನಿಗೆ 5 ವಿಕೆಟ್ ಉರುಳಿಸಿ ಮೆರೆದಾಡಿದರು. ಬ್ಯಾಟಿಂಗ್ನಲ್ಲಿಯೂ ಮಿಂಚಿದ ಅವರು ಅಜೇಯ 42 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಉಳಿದಂತೆ ಬಲಗೈ ಸ್ಪಿನ್ನರ್ ಚರಿತ ಅಸಲಂಕ 4 ವಿಕೆಟ್, ಕೊನೆಯ ವಿಕೆಟ್ ಮತೀಶ ತೀಕ್ಷಣ ಉರುಳಿಸಿದರು. ಲಂಕಾದ ಸ್ಪಿನ್ನರ್ ಎದುರಾಳಿ ತಂಡದ ಎಲ್ಲ ವಿಕೆಟ್‌ಗಳನ್ನು ಉರುಳಿಸಿದ 2ನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ 2011ರಲ್ಲಿ ಇದೇ ಮೈದಾನದಲ್ಲಿ ಜಿಂಬಾಬ್ವೆ ತಂಡದ ಎಲ್ಲ 10 ವಿಕೆಟ್‌ಗಳನ್ನು ಕೆಡವಿದ್ದರು.