Site icon Vistara News

IND vs SL: ಭಾರತ-ಲಂಕಾ ನಡುವಣ ವಿಶ್ವಕಪ್​ ದಾಖಲೆಯೇ ಅತ್ಯಂತ ರೋಚಕ

ಮುಂಬಯಿ: ಪ್ರಸಕ್ತ ನಡೆಯುತ್ತಿರುವ ವಿಶ್ವಕಪ್(ICC Cricket World Cup 2023)​ ಟೂರ್ನಿಯಲ್ಲಿ ಆಡಿದ ಎಲ್ಲ 6 ಪಂದ್ಯಗಳನ್ನು ಗೆದ್ದು ಸೆಮಿಫೈನಲ್​ ಸನಿಹ ಬಂದು ನಿಂತಿರುವ ಭಾರತ ತಂಡ, ಗುರುವಾರ ನೆರೆಯ ರಾಷ್ಟ್ರ ಶ್ರೀಲಂಕಾ(IND vs SL) ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ. ಈ ಪಂದ್ಯವನ್ನು ಗೆದ್ದರೆ ಸೆಮಿಫೈನಲ್​ ಟಿಕೆಟ್​ ಅಧಿಕೃತವಾಗಲಿದೆ. ಉಭಯ ತಂಡಗಳ ವಿಶ್ವಕಪ್​ ಮುಖಾಮುಖಿ ಮತ್ತು ದಾಖಲೆಗಳು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ವಿಶ್ವಕಪ್​ ಮುಖಾಮುಖಿ

ಭಾರತ ಮತ್ತು ಶ್ರೀಲಂಕಾ ತಂಡಗಳು ವಿಶ್ವಕಪ್​ನಲ್ಲಿ ತನ್ನದೇ ಆದ ದಾಖಲೆಗಳನ್ನು ಹೊಂದಿದೆ. ಉಭಯ ತಂಡಗಳು ಒಟ್ಟು 9 ಬಾರಿ ವಿಶ್ವಕಪ್​ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇತ್ತಂಡಗಳು ತಲಾ 4 ಪಂದ್ಯಗಳನ್ನು ಗೆದ್ದ ದಾಖಲೆ ಹೋಂದಿದೆ. 1992ರ ವಿಶ್ವಕಪ್​ ಪಂದ್ಯವೊಂದು ಮಳೆಯಿಂದ ರದ್ದುಗೊಂಡಿತ್ತು.

ಇದನ್ನೂ ಓದಿ Quinton de Kock: ಶತಕ ಬಾರಿಸಿ ಸಂಗಕ್ಕರ ದಾಖಲೆ ಸರಿಗಟ್ಟಿದ ಕ್ವಿಂಟನ್​ ಡಿ ಕಾಕ್

1979ರಲ್ಲಿ ಮೊದಲ ಮುಖಾಮುಖಿ

ಇತ್ತಂಡಗಳು ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾದದ್ದು 1979ರಲ್ಲಿ. ಈ ಪಂದ್ಯವನ್ನು ಶ್ರೀಲಂಕಾ ತಂಡ 47 ರನ್​ಗಳಿಂದ ಗೆದ್ದು ಭಾರತಕ್ಕೆ ಸೋಲಿನ ಏಟು ನೀಡಿತ್ತು. ಆಗ ಭಾರತ ಕ್ರಿಕೆಟ್​ ಲೋಕದ ಶಿಶುವಾಗಿತ್ತು. ಇದು 60 ಓವರ್​ನ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ್ದ ಶ್ರೀಲಂಕಾ ನಿಗದಿತ 60 ಓವರ್​ಗಳಲ್ಲಿ 5 ವಿಕೆಟ್​ಗೆ 238 ರನ್​ ಬಾರಿಸಿತ್ತು. ಗುರಿ ಬೆನ್ನಟ್ಟಿದ ಭಾರತ 54.1 ಓವರ್​ನಲ್ಲಿ 191 ರನ್​ಗೆ ಸರ್ವಪತನ ಕಂಡು ಸೋಲು ಕಂಡಿತ್ತು.


ಮೊದಲ ಗೆಲುವು

ಭಾರತ ತಂಡ ಲಂಕಾ ವಿರುದ್ಧ ವಿಶ್ವಕಪ್​ನಲ್ಲಿ ಮೊದಲ ಗೆಲುವು ಸಾಧಿಸಿದ್ದು 1999ರಲ್ಲಿ. ಈ ಪಂದ್ಯವನ್ನು ಭಾರತ ಭರ್ಜರಿ 157ರನ್​ಗಳಿಂದ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ರಾಹುಲ್​ ದ್ರಾವಿಡ್​ ಮತ್ತು ಸೌರವ್​ ಗಂಗೂಲಿ ಪ್ರಚಂಡ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿ ಸಂಭ್ರಮಿಸಿದ್ದರು. ದ್ರಾವಿಡ್​ 145 ರನ್​ ಬಾರಿಸಿದರೆ, ಗಂಗೂಲಿ 183 ರನ್​ ಬಾರಿಸಿದ್ದರು.


2011ರಲ್ಲಿ ಫೈನಲ್ ಮುಖಾಮುಖಿ

2011ರ ವಿಶ್ವಕಪ್​ ಫೈನಲ್​ನಲ್ಲಿ ಟೀಮ್​ ಇಂಡಿಯಾ ಮತ್ತು ಶ್ರೀಲಂಕಾ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ಭಾರತ ಆರು ವಿಕೆಟ್​ಗಳ ಅಂತರದಿಂದ ಗೆದ್ದು 28 ವರ್ಷಗಳ ಬಳಿಕ ಮತ್ತೊಂದು ವಿಶ್ವಕಪ್​ ಗೆದ್ದ ಸಾಧನೆ ಮಾಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ನಾಯಕ ಮಹೇಲಾ ಜಯವರ್ಧನೆ ಅವರ ಶತಕದ ನೆರವಿನಿಂದ 275 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡ ಗೌತಮ್ ಗಂಭೀರ್(gautam gambhir) ಅವರ 97 ರನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 91 ರನ್ ನೆರವಿನಿಂದ ಜಯಭೇರಿ ಬಾರಿಸಿ ಇತಿಹಾಸ ನಿರ್ಮಿಸಿತ್ತು. 

ಇದನ್ನೂ ಓದಿ ಲಂಕಾ ಪಂದ್ಯಕ್ಕೂ ಮುನ್ನ ತಂಡ ಸೇರಲಿದ್ದಾರೆ ಹಾರ್ದಿಕ್​ ಪಾಂಡ್ಯ ಆದರೆ…

ಸಚಿನ್‌ಗೆ ಅರ್ಪಣೆ

ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರಿಗೆ ಈ ಪ್ರಶಸ್ತಿಯನ್ನು ಆಟಗಾರರೆಲ್ಲ ಸೇರಿ ಅರ್ಪಿಸಿದ್ದರು. ಅವರನ್ನು ಹೆಗಲ ಮೇಲೆ ಹೊತ್ತು ಮೈದಾನಕ್ಕೆ ಸುತ್ತು ಬಂದಿದ್ದರು. ಇಲ್ಲಿಗೆ ಸಚಿನ್​ ಅವರ ವರ್ಣರಂಜಿತ ಕ್ರಿಕೆಟ್‌ ಬದುಕು ಸಾರ್ಥಕವಾಯಿತು. ಸಚಿನ್‌ 6ನೇ ಹಾಗೂ ಕೊನೆಯ ವಿಶ್ವಕಪ್‌ ಆಡಲಿಳಿದಿದ್ದರು. ಪಾಕ್‌ ಎದುರಿನ ಸೆಮಿಫೈನಲ್‌ನಲ್ಲಿ 85 ರನ್‌ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.


ಏಕದಿನ ಮುಖಾಮುಖಿ

ಉಭಯ ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ ಒಟ್ಟು 167 ಪಂದ್ಯಗಳಲ್ಲಿ ಸೆಣಸಾಡಿವೆ. ಇದರಲ್ಲಿ ಭಾರತ 98 ಪಂದ್ಯಗಳನ್ನು ಗೆದ್ದಿವೆ. ಶ್ರೀಲಂಕಾ 57 ಪಂದ್ಯಗಳಲ್ಲಿ ಗೆಲುವು ಕಂಡಿದೆ. 11 ಪಂದ್ಯಗಳು ಟೈನಲ್ಲಿ ಅಂತ್ಯ ಕಂಡಿದೆ. 1 ಪಂದ್ಯ ರದ್ದು ಗೊಂಡಿದೆ. ಇನ್ನು ತವರಿನಲ್ಲಿ ಭಾರತ 39 ಪಂದ್ಯಗಳನ್ನು ಗೆದ್ದರೆ, ಲಂಕಾ 28 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

Exit mobile version