Site icon Vistara News

Asia Cup 2023 Final: ಲಂಕಾ-ಭಾರತ ಫೈನಲ್​ ಪಂದ್ಯಕ್ಕೆ ಮಳೆ ಭೀತಿ; ಮೀಸಲು ದಿನ ಇದೆಯೇ?

Asia Cup 2023 final

ಕೊಲಂಬೊ: ಭಾನುವಾರ ಕೊಲಂಬೊದ(Colombo) ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ(R Premadasa International stadium) ಏಷ್ಯಾ ಕಪ್ 2023ರ ಫೈನಲ್‌ನಲ್ಲಿ(Asia Cup 2023 Final) ಭಾರತ ಮತ್ತು ಶ್ರೀಲಂಕಾ(IND vs SL) ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಭಾರಿ ಮಳೆಯಾಗುವ(Colombo Weather) ಸೂಚನೆ ಇದ್ದು ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ. ಕಳೆದ ಭಾನುವಾರ ಭಾರತ ಮತ್ತು ಪಾಕ್​ ನಡುವಿನ ಸೂಪರ್​ 4 ಪಂದ್ಯವವೂ ಮಳೆಯಿಂದ ರದ್ದುಗೊಂಡು ಮೀಸಲು ದಿನಕ್ಕೆ ಮುಂದೂಡಲ್ಪಟ್ಟಿತ್ತು.

ಹವಾಮಾನ ವರದಿಯಲ್ಲೇನಿದೆ

ಕಳೆದ ಕೆಲವು ದಿನಗಳಲ್ಲಿ ಕೊಲಂಬೊದಲ್ಲಿ ಸಾಧಾರಣ ಮಳೆಯಾಗಿದೆ. ಶುಕ್ರವಾರ ನಡೆದ ಭಾರತ ಮತ್ತು ಬಾಂಗ್ಲಾ ನಡುವಿನ ಪಂದ್ಯವನ್ನು ಹೊರತುಪಡಿಸಿ ಉಳಿದ ಎಲ್ಲ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಸದ್ಯ ಹವಾಮಾನ ಇಲಾಖೆ ನೀಡಿದ ವರದಿಯ ಪ್ರಕಾರ ಭಾನುವಾರ ಶೇ.90ರಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ. ಹೀಗಾಗಿ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗುವುದು ಖಚಿತ ಎನ್ನಲಡ್ಡಿಯಿಲ್ಲ. ಡಕ್​ವರ್ತ್​ ಲೂಯಿಸ್ ನಿಯಮ ಜಾರಿಗೆ ಬಂದರೆ ಚೇಸಿಂಗ್​ ನಡೆಸುವುದು ಕಷ್ಟಕರ ಹೀಗಾಗಿ ಟಾಸ್​ ಗೆದ್ದ ತಂಡ ಬ್ಯಾಟಿಂಗ್​ ಆಯ್ದುಕೊಳ್ಳಬಹುದು.

ಮೀಸಲು ದಿನ ಇದೆಯೇ?

ಸೆಪ್ಟೆಂಬರ್​ 10ರಂದು ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ಪೈಪೋಟಿಗೆ ಮಾತ್ರ ಮೀಸಲು ದಿನ ನಿಗದಿಪಡಿಸಲಾಗಿತ್ತು. ಇದು ಬಾರಿ ಚರ್ಚೆಗೂ ಕಾರಣವಾಗಿತ್ತು. ಇದನ್ನು ಶ್ರೀಲಂಕಾ ಮತ್ತು ಬಾಂಗ್ಲಾದೇಶ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಫೈನಲ್​ ಪಂದ್ಯಕ್ಕೂ ಮೀಸಲು ದಿನ ನಿಗದಿಯಾಗಿದೆ. ಒಂದೊಮ್ಮೆ ಮಳೆ ಬಂದರೆ ಪಂದ್ಯ ಮೀಸಲು ದಿನದಂದು ನಡೆಯಲಿದೆ. ಸೋಮವಾರ ಮೀಸಲು ದಿನವಾಗಿದೆ.

ಮೀಸಲು ದಿನ ಬಳಕೆ ಹೇಗೆ

ಮಳೆಯಿಂದಾಗಿ ಭಾನುವಾರ ಪಂದ್ಯ ನಡೆಯದೇ ಹೋದರೆ, ಅಂದರೆ ಮೊದಲ ಇನಿಂಗ್ಸ್​ ಮುಗಿದು ದ್ವಿತೀಯ ಇನಿಂಗ್ಸ್​ನಲ್ಲಿ ಕನಿಷ್ಠ 20 ಓವರ್‌ ಆಟವೂ ಸಾಧ್ಯವಾಗದೆ ಇದ್ದರೆ ಆಗ ಮೀಸಲು ದಿನವನ್ನು ಬಳಕೆ ಮಾಡಲಾಗುತ್ತದೆ. ಪಂದ್ಯ ಯಾವ ಹಂತದಲ್ಲಿ ಸ್ಥಗಿತಗೊಂಡಿರುತ್ತದೆಯೋ ಅಲ್ಲಿಂದಲೇ ಸೋಮವಾರದಂದು ಪಂದ್ಯ ಮುಂದುವರಿಯಲಿದೆ. ಇದಲ್ಲದೆ ಭಾನುವಾರದ ಪಂದ್ಯ ಮೀಸಲು ದಿನಕ್ಕೆ ಹೋದರೆ ಆಗ ಅಭಿಮಾನಿಗಳು ಬೇರೆ ಟಿಕೆಟ್‌ ಪಡೆಯುವ ಅವಶ್ಯಕತೆ ಇಲ್ಲ. ಬದಲಾಗಿ ಹಳೆಯ ಟಿಕೆಟ್​ ಬಳಸಿ ಕ್ರೀಡಾಂಗಣಕ್ಕೆ ಆಗಮಿಸಬಹುದು ಎಂದು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ತಿಳಿಸಿದೆ.

ಇದನ್ನೂ ಓದಿ IND vs SL: ಭಾರತ-ಲಂಕಾ ಫೈನಲ್​ ಫೈಟ್​; ಉಭಯ ತಂಡಗಳ ಏಷ್ಯಾಕಪ್​ ಇತಿಹಾಸ ಬಲು ರೋಚಕ!

8 ಬಾರಿ ಫೈನಲ್​ ಮುಖಾಮುಖಿ

ಕಳೆದ 15 ಆವೃತ್ತಿಯ ಇತಿಹಾಸದಲ್ಲಿ(Asia Cup history) ಭಾರತ ತಂಡವೇ ಪಾರುಪತ್ಯ ಸಾಧಿಸಿದೆ. ಒಟ್ಟು 7 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಶ್ರೀಲಂಕಾ 6 ಬಾರಿ ಗೆದ್ದಿದೆ. ಉಭಯ ತಂಡಗಳು ಏಷ್ಯಾಕಪ್​ ಇತಿಹಾಸದಲ್ಲಿ ಒಟ್ಟು 8 ಬಾರಿ ಫೈನಲ್​ ಮುಖಾಮುಖಿಯಾಗಿವೆ. ಭಾರತ 5 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದರೆ. ಶ್ರೀಲಂಕಾ 3 ಬಾರಿ ಗೆದ್ದು ಬೀಗಿದೆ. ಭಾರತ ಚೊಚ್ಚಲ ಏಷ್ಯಾಕಪ್​ ಗೆದ್ದಿದ್ದು ಕೂಡ ಲಂಕಾ ವಿರುದ್ಧವೇ. ಯುಎಇಯಲ್ಲಿ ನಡೆದ 1984ರ ಈ ಫೈನಲ್​ನಲ್ಲಿ ಭಾರತ ಸುನೀಲ್‌ ಗಾವಸ್ಕರ್‌ ನಾಯಕತ್ವದಲ್ಲಿ ಕಪ್​ ಗೆದ್ದಿತ್ತು.

Exit mobile version