ಕೋಲ್ಕೊತಾ: ಭಾರತದ ಬಿಗು ಬೌಲಿಂಗ್ ದಾಳಿಗೆ ನಲುಗಿದ ಪ್ರವಾಸಿ ಶ್ರೀಲಂಕಾ(IND VS SL) ದ್ವಿತೀಯ ಏಕದಿನ ಪಂದ್ಯದಲ್ಲಿ 215 ರನ್ಗೆ ಕುಸಿದಿದೆ. ಎದುರಾಳಿ ಭಾರತ 216 ಗೆಲುವಿಗೆ ರನ್ ಪೇರಿಸಬೇಕಿದೆ. ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 300 ರನ್ ಬಿಟ್ಟುಕೊಟ್ಟಿದ್ದ ಭಾರತದ ಬೌಲರ್ಗಳು ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್ ಪ್ರದರ್ಶನ ತೋರಿದರು.
ಕೋಲ್ಕೊತಾದ ಈಡನ್ ಗಾರ್ಡನ್ಸ್ನಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 39.4 ಓವರ್ಗಳಲ್ಲಿ 215 ರನ್ ಗಳಿಸಿದೆ. ಭಾರತ ಪರ ಕುಲ್ದೀಪ್ ಯಾದವ್(3), ಉಮ್ರಾನ್ ಮಲಿಕ್(2) ಮತ್ತು ಮೊಹಮ್ಮದ್ ಸಿರಾಜ್(3) ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು.
ನಾಟಕೀಯ ಕುಸಿತ ಕಂಡ ಲಂಕಾ
ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿದ ಲಂಕಾ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಆವಿಷ್ಕ ಪೆರ್ನಾಂಡೋ(20), ನುವಾನಿಡು ಫೆರ್ನಾಂಡೋ(50) ಅರ್ಧಶತಕ ಬಾರಿಸಿ ಉತ್ತಮ ಆರಂಭ ನೀಡಿದರು. ಇವರ ಆಟವನ್ನು ಗಮನಿಸಿದಾಗ ಲಂಕಾ ಬೃಹತ್ ಮೊತ್ತ ದಾಖಲಿಸುವ ಸೂಚನೆ ನೀಡಿತ್ತು. ಆದರೆ ಈ ಇಬ್ಬರು ಆಟಗಾರರ ವಿಕೆಟ್ ಪತನದ ಬಳಿಕ ಲಂಕಾ ನಾಟಕೀಯ ಕುಸಿತ ಕಂಡಿತು.
ವಿಕೆಟ್ ಕೀಪರ್ ಕುಸಲ್ ಮೆಂಡಿಸ್(34) ಹಾಗೂ ಕಳೆದ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ನಾಯಕ ದಸುನ್ ಶನಕ ಈ ಪಂದ್ಯದಲ್ಲಿ 2 ರನ್ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ಉಳಿದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ತಂಡದ ಮೊತ್ತ 150 ರನ್ ದಾಟುವ ಮುನ್ನ ಪ್ರಮುಖ 7 ವಿಕೆಟ್ ಕಳೆದುಕೊಂಡು ತೀರಾ ಸಂಕಷ್ಟಕ್ಕೆ ಸಿಲುಕಿತು.
ಅಂತಿಮ ಹಂತದಲ್ಲಿ ಬಾಲಂಗೋಚಿಗಳಾದ ವನಿಂದು ಹಸರಂಗ(21), ಚಾಮಿಕ ಕರುಣರತ್ನೆ(14) ದುನಿತ್ ವೆಲ್ಲಲಗೆ(32) ಸಣ್ಣ ಪ್ರಮಾಣದ ಹೋರಾಟ ನಡೆಸಿದ ಪರಿಣಾಮ ತಂಡ 200ರ ಗಡಿ ದಾಟಿತು. ಉಳಿದಂತೆ ಲಂಕಾ ಆಟಗಾರರು ಯಾವುದೇ ಹಂತದಲ್ಲಿಯೂ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲುವಲ್ಲಿ ಯಶಸ್ಸಿಯಾಗಲಿಲ್ಲ.
ಕುಲ್ದೀಪ್ ಸ್ಪಿನ್ ಮೋಡಿಗೆ ಬೆದರಿದ ಲಂಕಾ
ಗಾಯಾಳು ಯಜುವೇಂದ್ರ ಚಹಲ್ ಬದಲಿಗೆ ಆಡುವ ಅವಕಾಶ ಪಡೆದ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯದವ್ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಉಪಯುಕ್ತವಾಗಿ ಬಳಸಿಕೊಂಡರು. ಅವರ ಸ್ಪಿನ್ ಮೋಡಿಗೆ ಲಂಕಾ ಆಟಗಾರರು ತರಗೆಲೆಯಂತೆ ಉದುರಿಹೋದರು. ಚೆಂಡನ್ನು ಬುಗುರಿಯಂತೆ ತಿರುಗಿಸಿದ ಅವರು 10 ಓವರ್ ಬೌಲಿಂಗ್ ನಡೆಸಿ 51 ರನ್ಗೆ 3 ವಿಕೆಟ್ ಉರುಳಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್(3), ಯುವ ವೇಗಿ ಉಮ್ರಾನ್ ಮಲಿಕ್(2) ವಿಕೆಟ್ ಕಿತ್ತ ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 39.4 ಓವರ್ಗಳಲ್ಲಿ 215 ಆಲೌಟ್(ನುವಾನಿಡು ಫೆರ್ನಾಂಡೋ 50, ಕುಸಲ್ ಮೆಂಡಿಸ್ 34, ಕುಲ್ದೀಪ್ ಯಾದವ್ 51ಕ್ಕೆ 3, ಮೊಹಮ್ಮದ್ ಸಿರಾಜ್ 30ಕ್ಕೆ 3, ಉಮ್ರಾನ್ ಮಲಿಕ್ 48ಕ್ಕೆ2)
ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಶತಕ ಬಾರಿಸಿ ಸಚಿನ್ ದಾಖಲೆ ಮುರಿಯಲಿದ್ದಾರಾ ವಿರಾಟ್ ಕೊಹ್ಲಿ!