ಮುಂಬಯಿ: ಶ್ರೀಲಂಕಾ ವಿರುದ್ಧ ದಾಖಲೆಯ 302 ರನ್ಗಳ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇನ್ನುಳಿದ ಮೂರು ಸ್ಥಾನಕ್ಕೆ ಕನಿಷ್ಠ 5 ತಂಡಗಳು ಪೈಪೋಟಿ ನಡೆಸಲಿದೆ. ಇತ್ತಂಡಗಳ ಈ ಪಂದ್ಯ ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಷ್ಯಾಕಪ್ ಫೈನಲ್ ಪಂದ್ಯದ ಮುಂದುವರಿದ ಭಾಗದಂತೆ ಕಂಡು ಬಂತು. ಆ ಪಂದ್ಯದಲ್ಲಿಯೂ ಲಂಕಾ ಇದೇ ರೀತಿಯ ಕಳಪೆ ಪ್ರದರ್ಶನ ತೋರಿ ಹೀನಾಯ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ಲಂಕಾ 50 ರನ್ಗೆ ಆಲೌಟ್ ಆಗಿತ್ತು. ವಿಶ್ವಕಪ್ನಲ್ಲಿ 55 ರನ್ಗೆ ಸರ್ವಪತನ ಕಂಡಿತು.
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ, ವಿರಾಟ್ ಕೊಹ್ಲಿ (88), ಶುಭಮನ್ ಗಿಲ್(92) ಮತ್ತು ಶ್ರೇಯಸ್ ಅಯ್ಯರ್(82) ಅವರು ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಬೃಹತ್ ಮೊತ್ತವನ್ನು ಕಂಡು ಆರಂಭದಲ್ಲೇ ಬೆದರಿದ ಲಂಕಾ ನಾಟಕೀಯ ಕುಸಿತ ಕಂಡು 19.4 ಓವರ್ಗಳಲ್ಲಿ 55 ರನ್ಗೆ ಆಲೌಟ್ ಆಗಿ ಹೀನಾಯ ಸೋಲಿಗೆ ತುತ್ತಾಯಿತು. ಭಾರತ ತಂಡ ಈ ಗೆಲುವಿನೊಂದಿಗೆ ಅಜೇಯ 7 ಗೆಲುವು ಸಾಧಿಸಿ 14 ಅಂಕದೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದೆ.
ಸಿರಾಜ್, ಶಮಿ ಘಾತಕ ದಾಳಿ
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಮೊದಲ ಎಸೆತದಲ್ಲೇ ಶಾಕ್ ನೀಡಿದರು. ಪಾಥುಮ್ ನಿಸ್ಸಾಂಕ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಮುಂದಿನ ಓವರ್ನಲ್ಲಿ ಸಿರಾಜ್ ಅವರು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತು ಭಾರತಕ್ಕೆ ಮುನ್ನಡೆ ತಂದು ಕೊಟ್ಟರು. ಏಷ್ಯಾಕಪ್ ಫೈನಲ್ನಲ್ಲಿಯೂ ಸಿರಾಜ್ ಇದೇ ರೀತಿ ಲಂಕಾ ಆಟಗಾರರ ವಿಕೆಟ್ ಕಿತ್ತು ಮಿಂಚಿದ್ದರು. ಆದರೆ ವಿಶ್ವಕಪ್ನಲ್ಲಿ ಇದುವರೆಗೆ ಹೇಳಿಕೊಳ್ಳುವಂತ ಪ್ರದರ್ಶನ ತೋರ್ಪಡಿಸಿರಲಿಲ್ಲ. ಇದೀಗ ಲಂಕಾ ವಿರುದ್ಧವೇ ಮತ್ತೆ ಫಾರ್ಮ್ ಕಂಡುಕೊಂಡರು.
9 ಓವರ್ ತನ ಬೌಲಿಂಗ್ ಅವಕಾಶ ಪಡೆಯದ ಮೊಹಮ್ಮದ್ ಶಮಿ ಅವರು 10ನೇ ಓವರ್ನಲ್ಲಿ ಕಣಕ್ಕಿಳಿದರು. ಈ ಓವರ್ನಲ್ಲಿ ಸತತ ಎರಡು ವಿಕಟ್ ಕಿತ್ತು ತಾನು ಕೂಡ ವಿಕೆಟ್ ಕೀಳುವುದರಲ್ಲಿ ಸಮರ್ಥನಿದ್ದೇನೆ ಎಂಬ ಸಂದೇಶವನ್ನು ನೀಡಿದರು. ಲಂಕಾ 10 ಓವರ್ಗೆ 14 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಸಿರಾಜ್ ಅವರು ಏಷ್ಯಾಕಪ್ ಫೈನಲ್ನಲ್ಲಿ ಲಂಕಾ ವಿರುದ್ಧ 21 ರನ್ಗೆ 6 ವಿಕೆಟ್ ಕಿತ್ತಿದ್ದರು. ಈ ಪಂದ್ಯದಲ್ಲಿ ಮೂರು ವಿಕೆಟ್ ಕಿತ್ತರು.
ಕೆಟ್ಟ ದಾಖಲೆಯಿಂದ ಪಾರಾದ ಲಂಕಾ
ಶ್ರೀಲಂಕಾ ಈ ತಂಡದಲ್ಲಿ ಸೋಲು ಕಂಡರೂ ಕೆಟ್ಟ ದಾಖಲೆಯಿಂದ ಪಾರಾಗಿದೆ. ವಿಶ್ವಕಪ್ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ದಾಖಲೆ ಕೆನಡಾ ಹೆಸರಿನಲ್ಲಿದೆ. 2003ರಲ್ಲಿ ನಡೆದಿದ್ದ ಪಂದ್ಯದಲ್ಲಿ ಲಂಕಾ ವಿರುದ್ಧ 36 ರನ್ಗೆ ಆಲೌಟ್ ಆಗಿತ್ತು. ಸದ್ಯ ಲಂಕಾ 55 ರನ್ ಗಳಿಸಿ ಈ ಅನಗತ್ಯ ದಾಖಲೆಯಿಂದ ಪಾರಾಯಿತು.
ಜಹೀರ್,ಶ್ರೀನಾಥ್ ದಾಖಲೆ ಪತನ
33 ವರ್ಷದ ಶಮಿ ಅವರು ಕಳೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 7 ಓವರ್ ಬೌಲಿಂಗ್ ನಡೆಸಿ 2 ಮೇಡನ್ ಸಹಿತ ಕೇವಲ 22 ರನ್ ವೆಚ್ಚದಲ್ಲಿ ಪ್ರಮುಖ 4 ವಿಕೆಟ್ ಉಡಾಯಿಸಿದ್ದರು. ಈ ಪಂದ್ಯದಲ್ಲಿ ವಿಕಟ್ 5 ಕಿತ್ತು ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ 44 ವಿಕೆಟ್ಗಳ ದಾಖಲೆಯನ್ನು ಮುರಿದರು. ಸದ್ಯ ಶಮಿ 45 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ ಕೊಹ್ಲಿ,ಗಿಲ್, ಅಯ್ಯರ್ ಅರ್ಧಶತಕ; ಬೃಹತ್ ಮೊತ್ತ ಪೇರಿಸಿದ ಭಾರತ
ಮಿಂಚಿದ ಗಿಲ್-ಕೊಹ್ಲಿ
ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ರೋಹಿತ್ ಅವರು ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರೂ ಈ ಜೋಶ್ ಹೆಚ್ಚು ಕಾಲ ಉಳಿಯಲಿಲ್ಲ. ಮುಂದಿನ ಎಸೆತದಲ್ಲೇ ದಿಲ್ಶನ್ ಮಧುಶಂಕ ಅವರು ರೋಹಿತ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆದರೆ ಆ ಬಳಿಕ ಬಂದ ವಿರಾಟ್ ಕೊಹ್ಲಿ ಅವರು ತಾಳ್ಮೆಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಗಿಲ್ ಕೂಡ ಆರಂಭಿಕ ಹಂತದಲ್ಲಿ ನಿಧಾನಗತಿಯ ಬ್ಯಾಟಿಂಗ್ಗೆ ಒತ್ತು ನೀಡಿದರು. ಇದೇ ವೇಳೆ ಕೊಹ್ಲಿ ಮತ್ತು ಗಿಲ್ ತಲಾ ಒಂದು ಜೀವದಾನ ಪಡೆದರು. ಕೊಹ್ಲಿ 10 ರನ್ ಗಳಿಸಿದ ವೇಳೆ ಕ್ಯಾಚ್ನಿಂದ ಪಾರಾದರೆ, ಗಿಲ್ 8 ರನ್ ವೇಳೆ ಜೀವದಾನ ಪಡೆದರು. ಉಭಯ ಆಟಗಾರರು ಈ ಲಾಭವನ್ನೆತ್ತಿ ಅರ್ಧಶತಕ ಬಾರಿಸಿ ಮಿಂಚಿದರು.
ಬೃಹತ್ ಮೊತ್ತದ ಜತೆಯಾಟ
4 ರನ್ಗಳಿಂದ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಉತ್ತಮ ಜತೆಯಾಟ ನಿಭಾಯಿಸುವ ಮೂಲಕ ದ್ವಿತೀಯ ವಿಕೆಟ್ಗೆ ಬರೋಬ್ಬರಿ 189 ರನ್ ಒಟ್ಟು ಸೇರಿಸಿದರು. ವಿರಾಟ್ ಕೊಹ್ಲಿ ಅವರು 34 ರನ್ ಗಳಿಸುತ್ತಿದ್ದಂತೆ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಪೂರ್ತಿಗೊಳಿಸಿದರು. ಇದೇ ವೇಳೆ ಸಚಿನ್ ಅವರ ದಾಖಲೆಯನ್ನು ಮುರಿದರು. ಸಚಿನ್ ಅವರು ಒಟ್ಟು ಕ್ಯಾಲೆಂಡರ್ ವರ್ಷದಲ್ಲಿ 7 ಬಾರಿ ಸಾವಿರ ರನ್ ಬಾರಿಸಿದ್ದರು. ಇದೀಗ ವಿರಾಟ್ ಅವರು 8 ಬಾರಿ ಈ ಸಾಧನೆ ಮಾಡಿ ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಮೂರು ರನ್ ಅಂತರದಲ್ಲಿ ಕೊಹ್ಲಿ-ಗಿಲ್ ಔಟ್
ಶತಕ ಬಾರಿಸಲು ಜಿದ್ದಿಗೆ ಬಿದ್ದು ತಾ ಮುಂದು, ನಾ ಮುಂದು ಎಂದು ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಶುಭಮನ್ ಗಿಲ್ ಅವರು 92 ರನ್ ಗಳಿಸಿ ಸುಲಭ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ಕೇವಲ 8 ರನ್ಗಳ ಅಂತರದಿಂದ ಶತಕ ವಂಚಿತರಾದರು. ಗಿಲ್ ವಿಕೆಟ್ ಪತನಗೊಂಡ 3 ರನ್ ಅಂತರದಲ್ಲಿ ವಿರಾಟ್ ಕೊಹ್ಲಿ ಕೂಡ ವಿಕೆಟ್ ಕೈಚೆಲ್ಲಿದರು. ಉಭಯ ಆಟಗಾರರ ವಿಕೆಟ್ ಕೂಡ ದಿಲ್ಶನ್ ಮಧುಶಂಕ ಪಾಲಾಯಿತು. ಅಲ್ಲಿಗೆ ಆರಂಭಿಕ ಮೂರು ವಿಕೆಟ್ ಕೂಡ ಮಧುಶಂಕ ಖಾತೆಗೆ ಸೇರಿತು.
ಮತ್ತೊಮ್ಮೆ ಎಡವಿದ ವಿರಾಟ್
ಅತ್ಯಂತ ತಾಳ್ಮೆಯಿಂದ ಬ್ಯಾಟಿಂಗ್ ನಡೆಸುತ್ತಿದ್ದ ಕೊಹ್ಲಿ ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್ನ 49 ಶತಕವನ್ನು ಸರಿದೂಗಿಸಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಕೊಹ್ಲಿ 88 ರನ್ ಗಳಿಸಿದ ವೇಳೆ ಕವರ್ ಪಾಯಿಂಟ್ನಲ್ಲಿ ನಿಂತಿದ್ದ ಪಾತುಂಮ್ ನಿಸ್ಸಾಂಕ ಅವರಿಗೆ ಸುಲಭ ಕ್ಯಾಚ್ ನೀಡಿ ಔಟಾದರು. ವಿರಾಟ್ ಅವರ ವಿಕೆಟ್ ಬೀಳುತ್ತಿದ್ದಂತೆ ಒಂದು ಕ್ಷಣ ವಾಂಖೆಡೆ ಸ್ಟೇಡಿಯಂ ನಿಶ್ಯಬ್ದವಾಯಿತು.
ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ಅಯ್ಯರ್
ಶುಭಮನ್ ಗಿಲ್ ವಿಕೆಟ್ ಪತನದ ಬಳಿಕ ಆಡಲಿಳಿದ ಶ್ರೇಯಸ್ ಅಯ್ಯರ್ ಅವರು ಆರಂಭದಿಂದಲೇ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನಸೆಳೆದರು. ತವರಿನ ಮೈದಾನದಲ್ಲಿ ಆಡಿದ ಎಲ್ಲ ಅನುಭವವನ್ನು ಇಲ್ಲಿ ಹೊರ ಹಾಕಿದರು. ಲಂಕಾ ಬೌಲರ್ಗಳ ಮೇಲೆರಗಿದ ಅವರು ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಸುರಿಸಿದರು. ಆದರೆ ಇವರು ಕೂಡ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. 56 ಎಸೆತಗಳಿಂದ 3 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿ 82 ರನ್ಗೆ ವಿಕೆಟ್ ಒಪ್ಪಿಸಿದರು. ಸಿಕ್ಸರ್ ಬಾರಿಸುವ ಯತ್ನದಲ್ಲಿ ಎಡವಿ ತೀಕ್ಷಣ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಕಳೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಿಡಿದಿದ್ದ ಸೂರ್ಯಕುಮಾರ್ ಈ ಪಂದ್ಯದಲ್ಲಿ 12 ರನ್ಗೆ ಆಟ ಮುಗಿಸಿದರು. ಕನ್ನಡಿಗ ರಾಹುಲ್ 19 ಎಸತ ಎದುರಿಸಿ 2 ಬೌಂಡರಿ ನೆರವಿನಿಂದ 21 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಜಡೇಜ 35 ರನ್ ಗಳಿಸಿದರು. ಇವರ ಈ ಬ್ಯಾಟಿಂಗ್ ಸಾಹಸದಿಂದ ಭಾರತ 350ರ ಗಡಿ ದಾಟಿತು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 80 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತರು.