ಮುಂಬಯಿ: ಶ್ರೀಲಂಕಾ(IND vs SL) ವಿರುದ್ಧದ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿ 5 ವಿಕೆಟ್ ಕಿತ್ತು ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮೊಹಮ್ಮದ್ ಶಮಿ(Mohammed Shami) ಅವರು ವಿಶ್ವಕಪ್ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಭಾರತ ಪರ ವಿಶ್ವಕಪ್ನಲ್ಲಿ ಅತ್ಯಧಿಕ ವಿಕಟ್ ಕಿತ್ತ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
33 ವರ್ಷದ ಶಮಿ ಅವರು ಕಳೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 7 ಓವರ್ ಬೌಲಿಂಗ್ ನಡೆಸಿ 2 ಮೇಡನ್ ಸಹಿತ ಕೇವಲ 22 ರನ್ ವೆಚ್ಚದಲ್ಲಿ ಪ್ರಮುಖ 4 ವಿಕೆಟ್ ಉಡಾಯಿಸಿದ್ದರು. ಗುರುವಾರ ನಡೆದ ಲಂಕಾ ವಿರುದ್ಧದ ಪಂದ್ಯದಲ್ಲಿ 5 ಓವರ್ ಎಸೆದು ಒಂದು ಮೇಡನ್ ಸಹಿತ 5 ಕಿತ್ತು ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ ಜಂಟಿ 44 ವಿಕೆಟ್ಗಳ ದಾಖಲೆಯನ್ನು ಮುರಿದರು. ಸದ್ಯ ಶಮಿ 14 ಪಂದ್ಯಗಳನ್ನು ಆಡಿ 45* ವಿಕೆಟ್ ಪಡೆದಿದ್ದಾರೆ. ಒಟ್ಟಾರೆಯಾಗಿ ಅತ್ಯಧಿಕ ವಿಶ್ವಕಪ್ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IND vs SL: ಲಂಕಾ ದಹನ ಮಾಡಿ ಸೆಮಿಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ
ಕಳೆದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿಯೂ ಉತ್ತಮ ಬೌಲಿಂಗ್ ಸಂಘಟಿಸಿದ್ದ ಶಮಿ 5 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅಲ್ಲದೆ ಭಾರತ ಪರ ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದ್ದರು.
ಬುಮ್ರಾಗೆ 4ನೇ ಸ್ಥಾನ
16 ವಿಶ್ವಕಪ್ ಪಂದ್ಯಗಳನ್ನು ಆಡಿ 33 ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾ ಭಾರತೀಯ ಸಾಧಕ ಪೈಕಿ 4ನೇ ಸ್ಥಾನದಲ್ಲಿದ್ದಾರೆ. 31 ವಿಕೆಟ್ ಪಡೆದಿರುವ ಮಾಜಿ ಆಟಗಾರ ಅನಿಲ್ ಕುಂಬ್ಳೆ 5ನೇ ಸ್ಥಾನದಲ್ಲಿದ್ದಾರೆ. ಕುಂಬ್ಳೆ ಅವರ ದಾಖಲೆಯನ್ನು ಬುಮ್ರಾ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಕೀಳುವ ಮೂಲಕ ಹಿಂದಿಕ್ಕಿದ್ದರು.
ಗ್ಲೆನ್ ಮೆಕ್ಗ್ರಾತ್ಗೆ ಮೊದಲ ಸ್ಥಾನ
ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾತ್(Glenn McGrath) ಅವರು ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿದ್ದಾರೆ. 1996-2007ರ ತನಕ ವಿಶ್ವಕಪ್ ಆಡಿದ ಸಾಧನೆ ಇವರದ್ದು. ಅಲ್ಲದೆ ಮೂರು ಬಾರಿಯ ವಿಶ್ವಕಪ್ ವಿಜೇತ ತಂಡದ ಸದಸ್ಯ ಎಂಬ ಹಿರಿಮೆಯೂ ಇವರ ಪಾಲಿಗಿದೆ. 39 ವಿಶ್ವಕಪ್ ಪಂದ್ಯ ಆಡಿರುವ ಅವರು 1955 ಬಾಲ್ ಎಸೆದು 71 ವಿಕೆಟ್ ಕೆಡವಿದ್ದಾರೆ. 42 ಮೇಡನ್ ಒಳಗೊಂಡಿದೆ. 15 ರನ್ಗೆ 7 ವಿಕೆಟ್ ಕಿತ್ತದ್ದು ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.
ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮುರಳೀಧರನ್ 1996-2011ರ ವರೆಗೆ ವಿಶ್ವಕಪ್ ಆಡಿ 68 ವಿಕೆಟ್ ಪಡೆದಿದ್ದಾರೆ. ಸ್ಟಾರ್ಕ್ ಅವರು ಇನ್ನು 13 ವಿಕೆಟ್ ಕಿತ್ತರೆ ಮುರಳೀಧರನ್ ದಾಝಲೆಯನ್ನು ಮುರಿಯಬಹುದು. ಮುರಳೀಧರನ್ ಅವರು 17 ಬಾರಿ ಬೌಲ್ಡ್ ಮೂಲಕ ವಿಕೆಟ್ ಕಿತ್ತಿದ್ದಾರೆ. 56 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರು ಮೂರನೇ ಸ್ಥಾನದಲ್ಲಿದ್ದಾರೆ.