ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ತಂಡದ ವಿರುದ್ದದ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಹೋಗಿರುವ ಭಾರತ ತಂಡಕ್ಕೆ ಬಾರ್ಬಡೋಸ್ನಲ್ಲಿ 5 ದಿನಗಳ ಶಿಬಿರ ನಡೆಸಲಾಗಿದೆ. ಇದೀಗ ಜುಲೈ 12ರಿಂದ ವಿಂಡ್ಸರ್ ಪಾರ್ಕ್ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್ ಪಂದ್ಯಕ್ಕೆ ಮೊದಲು ಅಂತಿಮ ಸಿದ್ಧತೆಗಳನ್ನು ನಡೆಸಲಿದೆ. ಅದಕ್ಕಾಗಿ ಟೀಮ್ ಇಂಡಿಯಾ ಡೊಮಿನಿಕಾಕ್ಕೆ ತೆರಳಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಸೇರಿದಂತೆ ಆಟಗಾರರು ಒಟ್ಟಾಗಿ ಪ್ರಯಾಣ ನಡೆಸಿದ್ದಾರೆ. ಏತನ್ಮಧ್ಯೆ ಪ್ರಯಾಣದ ನಡುವೆ ಆಟಗಾರರು ಧರಿಸಿದ್ದ ಜೆರ್ಸಿ ಅಭಿಮಾನಿಗಳ ಗಮನ ಸೆಳೆದಿದೆ. ಕಪ್ಪು ಬಣ್ಣದ ಅವರ ಟಿ ಶರ್ಟ್ ಬಗ್ಗೆ ಮೆಚ್ಚುಗೆಗಳು ವ್ಯಕ್ತಗೊಂಡಿವೆ.
ಭಾರತ ತಂಡದ ಜೆರ್ಸಿ ಪ್ರಾಯೋಜಕ ಕಂಪನಿ ಇತ್ತೀಚೆಗೆ ಬದಲಾಗಿದೆ. ಹಿಂದೆ ನೈಕಿ ಕಂಪನಿಯು ಭಾರತಕ್ಕೆ ಜೆರ್ಸಿಯನ್ನು ನೀಡುತ್ತಿತ್ತು. ಈಗ ಅಡಿಡಾಸ್ ಸಂಸ್ಥೇ ನೀಡುತ್ತಿದೆ. ನೈಕಿ ಸಂಸ್ಥೆ ನೀಲಿ ಬಣ್ಣದ ಜೆರ್ಸಿಯನ್ನೇ ಭಾರತ ತಂಡದ ಆಟಗಾರರಿಗೆ ನೀಡುತ್ತಿತ್ತು. ಆದರೆ, ಅಡಿಡಾಸ್ ಕಪ್ಪು ಬಣ್ಣದ ಜೆರ್ಸಿ ಕೊಟ್ಟಿದ್ದಾರೆ. ಅದನ್ನು ಹಾಕಿಕೊಂಡು ಆಟಗಾರರು ಮಿರಮಿರ ಮಿಂಚಿದ್ದಾರೆ.
Preps in Barbados done ✅#TeamIndia off to Dominica next to begin training for the 1st Test against West Indies 👌👌#WIvIND pic.twitter.com/Ky5HSQcxR6
— BCCI (@BCCI) July 7, 2023
ಬಾರ್ಬಡೋಸ್ ಶಿಬಿರದ ಪ್ರಾಥಮಿಕ ಗುರಿಯೇ ತಂಡದ ದೌರ್ಬಲ್ಯಗಳನ್ನು ಸರಿಪಡಿಸುವುದು. ಜತೆಗೆ ಯುವ ಆಟಗಾರರನ್ನು ಮೌಲ್ಯಮಾಪನ ಮಾಡುವುದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರಿಗೆ ಅಭ್ಯಾಸಕ್ಕೆ ಅವಕಾಶ ಮಾಡಿಕೊಡುವುದಾಗಿದೆ.
ಯಶಸ್ವಿ ಜೈಸ್ವಾಲ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳುವುದು ತಂಡ ರೂಪ ಬದಲಾಗುವ ಸೂಚನೆಯಾಗಿದೆ. ಅವರು ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡಿದ್ದು, 76 ಎಸೆತಗಳಲ್ಲಿ 54 ರನ್ ಗಳಿಸಿದ್ದಾರೆ. ಈಗ ಆರಂಭಿಕ ಸ್ಥಾನವನ್ನು ಅಲಂಕರಿಸಲು ಸಜ್ಜಾಗಿದ್ದಾರೆ.
ಅಭ್ಯಾಸ ಪಂದ್ಯ ಮತ್ತು ನೆಟ್ ಸೆಷನ್ಗಳಲ್ಲಿ ಜೈಸ್ವಾಲ್ ಅವರು ತೋರಿದ ಪ್ರದರ್ಶನದಿಂದಾಗಿ ಕೋಚ್ ರಾಹುಲ್ ದ್ರಾವಿಡ್ ಪ್ರಭಾವಿತರಾಗಿದ್ದಾರೆ ಅಭ್ಯಾಸದ ವೇಳೆ ದ್ರಾವಿಡ್ ಜೈಸ್ವಾಲ್ ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಜಯದೇವ್ ಉನಾದ್ಕಟ್ ಅವರ ಬೌಲಿಂಗ್ ಎದುರಿಸುವ ವೇಳೆ ವಿಶೇಷ ತರಬೇತಿ ನೀಡುತ್ತಿದ್ದರು. ಆರಾಮವಾಗಿ ಆಡುವಂತೆ ಪ್ರೇರೇಪಿಸಿದ್ದರು.
ಇದನ್ನೂ ಓದಿ : Afghanistan Cricket : ವಿಷ ಹಾಕಿ ಅಫಘಾನಿಸ್ತಾನ ಕ್ರಿಕೆಟಿಗನ ಕೊಲೆ ಯತ್ನ!
ಜೈಸ್ವಾಲ್ ಆರಂಭದಲ್ಲಿ ಇಂತಹ ಸ್ವಿಂಗ್ ಎಸೆತಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಏಕೆಂದರೆ ವಿಂಡೀಸ್ನಲ್ಲಿ ಟೆಸ್ಟ್ಗೆ ಬಳಸುವ ಡ್ಯೂಕ್ಸ್ ಚೆಂಡು ಹೆಚ್ಚು ತಿರುವು ಪಡೆಯುತ್ತಿರುತ್ತವೆ. ವಿಂಡ್ಸರ್ ಪಾರ್ಕ್ನಲ್ಲಿನ ಮೈದಾನವು ಬಹುಶಃ ಒಣಗಿರುವ ಸಾಧ್ಯತೆಗಳಿವೆ. ಹೀಗಾಗಿ ಹೆಚ್ಚಾಗಿ ಸ್ವಿಂಗ್ ಮಾಡುವ ಅವಕಾಶ ಬೌಲರ್ಗಳಿಗೆ ನೀಡುತ್ತದೆ. ಹೀಗಾಗಿ ಭಾರತ ತಂಡದ ಬ್ಯಾಟರ್ಗಳು ಹೆಚ್ಚು ಜತನದಿಂದ ಆಡುವ ಸಾಧ್ಯತೆಗಳಿವೆ.
ಚೇತೇಶ್ವರ್ ಪೂಜಾರ ಅವರ 3ನೇ ಕ್ರಮಾಂಕದ ಸ್ಥಾನವನ್ನು ತುಂಬಲು ಶುಬ್ಮನ್ ಗಿಲ್ ಸಜ್ಜಾಗಿದ್ದು, ಕನಿಷ್ಠ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಹೊಸ ಆರಂಭಿಕ ಆಟಗಾರನನ್ನು ಹೊಂದಲಿದೆ. ಜೈಸ್ವಾಲ್ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.
ಭಾರತ-ವಿಂಡೀಸ್ ಟೆಸ್ಟ್ ಸರಣಿ ವೇಳಾಪಟ್ಟಿ
ಜುಲೈ 12-16: ಮೊದಲ ಟೆಸ್ಟ್ ಪಂದ್ಯ, ವಿಂಡ್ಸರ್ ಪಾರ್ಕ್, ಡೊಮಿನಿಕಾ
ಜುಲೈ 20-24: ಎರಡನೇ ಟೆಸ್ಟ್ ಪಂದ್ಯ, ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್