Site icon Vistara News

IND vs USA: ಅಪಾಯಕಾರಿ ಅಮೆರಿಕ ಸವಾಲಿಗೆ ಸಡ್ಡು ಹೊಡೆದೀತೇ ಟೀಮ್​ ಇಂಡಿಯಾ?

IND vs USA

IND vs USA: Did Team India rise to the dangerous American challenge?

ನ್ಯೂಯಾರ್ಕ್​: ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಲೀಗ್​ ಹಂತದ ಪಂದ್ಯದಲ್ಲಿ ಸತತ 2 ಪಂದ್ಯಗಳನ್ನು ಗೆದ್ದು ಅಜೇಯ ಓಟ ಕಾಯ್ದುಕೊಂಡಿರುವ ಭಾರತ ಮತ್ತು ಅಮೆರಿಕ(IND vs USA) ನಾಳೆ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿವೆ. ಇತ್ತಂಡಗಳ ನಡುವಣ ಮೊದಲ ಕ್ರಿಕೆಟ್​ ಮುಖಾಮುಖಿ ಇದಾಗಿದೆ.

ಸವಾಲು ಸುಲಭದಲ್ಲ


ಅಮೆರಿಕ ತಂಡ ಕ್ರಿಕೆಟ್​ ಶಿಶು ಆಗಿದ್ದರೂ ಕೂಡ ತಂಡದಲ್ಲಿ ಆಡುವ ಆಟಗಾರರಿಗೆ ಕ್ರಿಕೆಟ್​ ಹೊಸದಲ್ಲ. ಎಲ್ಲರು ಅನುಭವಿ ಆಟಗಾರರು. ಈ ತಂಡದ ವಿಶೇಷವೆಂದರೆ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​, ಕೆನಡಾ ಸೇರಿ ಹಲವು ದೇಶಗಳ ಕ್ರಿಕೆಟಿಗರು ಈ ತಂಡದಲ್ಲಿ ಕಾಣಿಸಿಕೊಂಡಿರುವುದು. ಬಹುಪಾಲು ಭಾರತೀಯ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ನಾಯಕ ಮೊನಾಂಕ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ವಿಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಈಗಾಗಲೇ ಪಾಕಿಸ್ತಾನಕ್ಕೂ ಅಮೆರಿಕ ನೀರು ಕುಡಿಸಿದೆ. ಹೀಗಾಗಿ ಅತಿಯಾದ ಆತ್ಮವಿಶ್ವಾಸದಿಂದ ಈ ಸವಾಲನ್ನು ಹಗುರವಾಗಿ ಕಂಡೆರೆ ಭಾರತಕ್ಕೂ ಸೋಲು ಕಟ್ಟಿಟ್ಟ ಬುತ್ತಿ! ಎನ್ನಲಡ್ಡಿಯಿಲ್ಲ.

ಗೆದ್ದರೆ ಸೂಪರ್​-8 ಪ್ರವೇಶ


ಉಭಯ ತಂಡಗಳ ಪೈಕಿ ಯಾರೇ ಗೆದ್ದರೂ ಕೂಡ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ. ಈಗಾಗಲೇ ‘ಡಿ’ ವಿಭಾಗದಿಂದ ದಕ್ಷಿಣ ಆಫ್ರಿಕಾ ಸೂಪರ್​-8 ಹಂತಕ್ಕೆ ಪ್ರವೇಶ ಪಡೆದಿದೆ. ಒಂದು ಗ್ರೂಪ್​ನಿಂದ ಕೇವಲ 2 ತಂಡಗಳು ಮಾತ್ರ ಈ ಹಂತಕ್ಕೇರುತ್ತದೆ.

ಇದನ್ನೂ ಓದಿ IND vs PAK: ಟ್ರ್ಯಾಕ್ಟರ್ ಮಾರಿ ಭಾರತ-ಪಾಕ್​ ಪಂದ್ಯ ವೀಕ್ಷಿಸಿ ಕಣ್ಣೀರು ಹಾಕಿದ ಅಭಿಮಾನಿ

ಮಳೆ ಭೀತಿ


ಭಾನುವಾರ ಇಲ್ಲೇ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಇದೀಗ ನಾಳೆ ನಡೆಯುವ ಪಂದ್ಯಕ್ಕೂ ಮಳೆ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಮಧ್ಯಾಹ್ನದ ವೇಳೆ ಶೇ. 40 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ. ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ. ಒಂದೊಮ್ಮೆ ಭಾರತ ಮತ್ತು ಅಮೆರಿಕ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ಲೀಗ್​ನಿಂದ ಹೊರಬೀಳಲಿದೆ. ಈಗಾಗಲೇ 4 ಅಂಕಗಳಿಸಿರುವ ಭಾರತ ಮತ್ತು ಅಮೆರಿಕಗೆ ಈ ಒಂದು ಅಂಕದಿಂದ ಒಟ್ಟು ಅಂಕ 5 ಆಗಲಿದೆ. ಪಾಕ್​ ಮುಂದಿನ 2 ಪಂದ್ಯಗಳನ್ನು ಗೆದ್ದರೂ ಕೂಡ 4 ಅಂಕ ಮಾತ್ರ ಆಗಲಿದೆ. ಹೀಗಾಗಿ ಪಾಕ್​ ಹೊರಬೀಳಲಿದೆ.

ಪಿಚ್​ ರಿಪೋರ್ಟ್​


ಸಂಪೂರ್ಣ ಬೌಲಿಂಗ್​ ಟ್ರ್ಯಾಕ್ ಆಗಿರುವ ನಸ್ಸೌ ಪಿಚ್​ನಲ್ಲಿ ಬ್ಯಾಟಿಂಗ್​ ನಡೆಸುವುದು ಅಷ್ಟು ಸುಲಭವಲ್ಲ. 100 ರನ್​ ಬಾರಿಸಿದರೂ ಇದನ್ನು ತಡೆದು ನಿಲ್ಲಿಸುವ ಸಾಮರ್ಥ್ಯ ಬೌಲರ್​ಗಳಿಗಿದೆ. ಪಿಚ್​ನಲ್ಲಿ ಬಿರುಕು ಇರುವ ಕಾರಣ ಚೆಂಡಿನ ಚಲನೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ಬ್ಯಾಟರ್​ಗಳು ವಿಫಲರಾಗುತ್ತಿದ್ದಾರೆ. ಇದುವರೆಗೂ ಇಲ್ಲಿ ನಡೆದ ಪಂದ್ಯದಲ್ಲಿ 120 ರನ್​ಗಳ ಗಡಿ ದಾಟಿಲ್ಲ.

ಸಂಭಾವ್ಯ ತಂಡ


ಅಮೆರಿಕ:
ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

Exit mobile version