ನ್ಯೂಯಾರ್ಕ್: ಅಮೆರಿಕ(IND vs USA) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದನ್ನು ನೋಡಿ ನಾನ್ ಸ್ಟ್ರೈಕ್ನಲ್ಲಿ ನಾಯಕ ರೋಹಿತ್ ಶರ್ಮ(Rohit Sharma) ಒಂದು ಕ್ಷಣ ದಂಗಾದರು. ಈ ವಿಡಿಯೊ ವೈರಲ್ ಆಗಿದೆ. ಭಾರತೀಯ ಮೂಲದ, ಅಂಡರ್-19 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಎಡಗೈ ವೇಗಿ ಸೌರಭ್ ನೇತ್ರವಲ್ಕರ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲಿ ಕೊಹ್ಲಿ ವಿಕೆಟ್ ಪತನಗೊಂಡಿತು. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ನೇತ್ರವಲ್ಕರ್ ತಾವೆಸೆದ ಮೊದಲ ಎಸೆತದಲ್ಲೇ ಮೊಹಮ್ಮದ್ ರಿಜ್ವಾನ್ ವಿಕೆಟ್ ಕಿತ್ತಿದ್ದರು. 2 ವಿಕೆಟ್ ಪತನದ ವಿಡಿಯೊವನ್ನು ಕೊಲಾಜ್ ಮಾಡಿ ಐಸಿಸಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಗೋಲ್ಡನ್ ಡಕ್(Virat Kohli Golden Duck) ಆಗುವ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಗೋಲ್ಡನ್ ಡಕ್ ಆಗ ಅವಮಾನಕ್ಕೆ ಸಿಲುಕಿದರು. 2012ರಿಂದ ಟಿ20 ವಿಶ್ವಕಪ್ ಆಡಲು ಆರಂಭಿಸಿದ ವಿರಾಟ್ ಒಮ್ಮೆಯೂ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿರಲಿಲ್ಲ. ಕನಿಷ್ಠ ಒಂದು ರನ್ ಆದರೂ ಗಳಿಸಿದ್ದರು. ಕೊಹ್ಲಿ ಒಟ್ಟು 28 ಟಿ20 ವಿಶ್ವಕಪ್ ಇನಿಂಗ್ಸ್ ಆಡಿ 1146 ರನ್ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್ ಗಳಿಸಿ ಟೂರ್ನಿಯಲ್ಲೇ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದ ಕೊಹ್ಲಿಯ ಮೇಲೆ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಭಾರೀ ನಿರೀಕ್ಷೆ ಇಡಲಾಗಿತ್ತು. ಆದರೆ ಕೊಹ್ಲಿ ಕಳಪೆ ಬ್ಯಾಟಿಂಗ್ ಮೂಲಕ ಈ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. 1, 4,0 ಇದು ಕೊಹ್ಲಿಯ ಈ ಬಾರಿಯ ಸ್ಕೋರ್ ಆಗಿದೆ.
ಇದನ್ನೂ ಓದಿ IND vs USA: ಬೆಸ್ಟ್ ಫೀಲ್ಡಿಂಗ್ಗೆ 2ನೇ ಚಿನ್ನದ ಪದಕ ಗೆದ್ದ ಮೊಹಮ್ಮದ್ ಸಿರಾಜ್
ಟಿ20 ವಿಶ್ವಕಪ್ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್ ಪಿಚ್ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.
ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್ ಬಾಲ್ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್ ಕಂಡಿರುವುದು. ಹೀಗಾಗಿ ಮುಂದಿನ ಪಂದ್ಯದಲ್ಲಿ ಅವರನ್ನು ಎಂದಿನಂತೆ ದ್ವಿತೀಯ ಕ್ರಮಾಂಕದಲ್ಲಿಯೇ ಆಡಿಸುವುದು ಸೂಕ್ತ ಎನ್ನುವಂತಿದೆ.