ಮುಂಬಯಿ: ಆಸ್ಟ್ರೇಲಿಯಾದ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸೋಲು ಕಂಡ ಭಾರತ ತಂಡ ಮುಂದಿನ ತಿಂಗಳು ಜುಲೈ 12 ರಿಂದ ವೆಸ್ಟ್ ಇಂಡೀಸ್(IND vs WI) ವಿರುದ್ಧ ಮೂರು ಮಾದರಿಯ ಕ್ರಿಕೆಟ್ ಸರಣಿಯನ್ನು ಆಡಲಿದೆ. ಬಹುಕಾಲದಿಂದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿರುವ ಭಾರತ ತಂಡದಲ್ಲಿ ಮೇಜರ್ ಸರ್ಜರಿ ನಡೆಸಲು ಬಿಸಿಸಿಐ(BCCI) ಮುಂದಾಗಿದ್ದು ವಿಂಡೀಸ್ ಸರಣಿಯಿಂದಲೇ ಇದು ಜಾರಿಯಾಗುವ ಸಾಧ್ಯತೆಯೊಂದು ಎದ್ದು ಕಾಣುತ್ತಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು.
ದ್ವಿಪಕ್ಷಿಯ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಭಾರತ ಐಸಿಸಿ ಮಹತ್ವದ ಪಂದ್ಯದ ವೇಳೆ ಮಾತ್ರ ತೀರಾ ಕಳಪೆ ಪ್ರದರ್ಶನ ತೋರುವ ಮೂಲಕ ಕಪ್ ಗೆಲ್ಲಿವಲ್ಲಿ ವಿಫಲವಾಗುತ್ತಿದೆ. ಇನ್ನು ತಂಡದಲ್ಲಿ ಹೆಚ್ಚಾಗಿ ಹಿರಿಯ ಆಟಗಾರರೇ ತುಂಬಿಕೊಂಡಿದ್ದಾರೆ. ಯುವ ಪಡೆಗಳ ಸಂಖ್ಯೆ ಕಡಿಮೆ ಇದೆ. ಇದೀಗ ಭವಿಷ್ಯದ ತಂಡವನ್ನು ರೂಪಿಸಲು ಮುಂದಾಗಿರುವ ಬಿಸಿಸಿಐ ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದೆ ಎಂದು ವರದಿಯಾಗಿದೆ. ವಿಂಡೀಸ್ ಸರಣಿಯಲ್ಲಿ ಹೆಚ್ಚು ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.
ಟಿ20 ಸರಣಿಯಲ್ಲಿ ಐಪಿಎಲ್ನಲ್ಲಿ ಮಿಂಚಿದ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ತಿಲಕ್ ವರ್ಮ, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಸೇರಿ ಹಲವು ಯುವ ಆಟಗಾರರು ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. ರೋಹಿತ್, ಕೊಹ್ಲಿ, ಶಮಿ ಅವರನ್ನು ಈ ತಂಡದಿಂದ ಕೈ ಬಿಡುವುದು ಬಹುತೇಕ ಖಚಿತ ಎ.ದು ತಿಳಿದುಬಂದಿದೆ.
ಇದನ್ನೂ ಓದಿ Team India Cricket Schedule 2023: ಟೀಮ್ ಇಂಡಿಯಾ ಕ್ರಿಕೆಟ್ ಸರಣಿಯ ಸಂಪೂರ್ಣ ವೇಳಾಪಟ್ಟಿ
ಟೆಸ್ಟ್ ಸರಣಿಯಲ್ಲಿ ದೇಶಿಯ ಕ್ರಿಕೆಟ್ ಟೂರ್ನಿ ರಣಜಿಯಲ್ಲಿ ಶತಕ, ದ್ವಿಶತಕ ಬಾರಿಸಿ ಗಮನಸೆಳೆದಿದ್ದ ಮುಂಬೈಯ ಆಟಗಾರ ಸರ್ಫರಾಜ್ ಖಾನ್, ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ಸಿಗುವುದು ಪಕ್ಕಾ ಎನ್ನಲಾಗಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಚೇತೇಶ್ವರ್ ಪೂಜಾರ ಹಾಗೂ ಉಮೇಶ್ ಯಾದವ್ ಅವರನ್ನು ಈ ಸರಣಿಯಿಂದ ಹೊರಗಿಡುವ ಸಾಧ್ಯತೆ ಅಧಿಕವಾಗಿದೆ. ಒಟ್ಟಾರೆಯಾಗಿ ಬಿಸಿಸಿ ಸೈಲೆಂಟಾಗಿ ಇಂಡೀಸ್ ಪ್ರವಾಸದಲ್ಲಿ ಮೇಜರ್ ಸರ್ಜರಿ ನಡೆಸಲು ಮುಂದಾಗಿರುವುದು ಖಚಿತ ಎನ್ನಲಡ್ಡಿಯಿಲ್ಲ.