ಬಾರ್ಬಡಾಸ್: ಸತತ ಸೋಲಿನಿಂದ ಕಂಗೆಟ್ಟಿದ್ದ ವೆಸ್ಟ್ ಇಂಡೀಸ್ ಗೆಲುವಿನ ಖಾತೆ ತೆರೆದಿದೆ. ಭಾರತ ವಿರುದ್ಧದ ದ್ವಿತೀಯ ಏಕದಿನ(West Indies vs India, 2nd ODI) ಪಂದ್ಯದಲ್ಲಿ 6 ವಿಕೆಟ್ಗಳ(West Indies won by 6 wkts) ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಅಂತಿಮ ಪಂದ್ಯ ಆಗಸ್ಟ್ 1 ಮಂಗಳವಾರ ನಡೆಯಲಿದೆ.
ಕೆನ್ನಿಂಗ್ಸ್ಟನ್ ಓವಲ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ 40.5 ಓವರ್ಗಳಲ್ಲಿ 181 ರನ್ಗೆ ಆಲೌಟಾಯಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ನಾಯಕ ಶೈ ಹೋಪ್ ಅವರ ಅಜೇಯ ಅರ್ಧಶತಕದ ನೆರವಿನಿಂದ 34.6 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 182 ರನ್ ಬಾರಿಸಿ ಗೆಲುವು ದಾಖಲಿಸಿತು.
ಸುಲಭ ಮೊತ್ತವನ್ನು ಚೇಸ್ ಮಾಡಿದ ವಿಂಡೀಸ್ಗೆ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರು ತ್ರಿವಳಿ ಆಘಾತವಿಕ್ಕಿದರು. ಒಂದೇ ಓವರ್ನಲ್ಲಿ ಆರಂಭಿಕರಾದ ಬ್ಯಾಂಡನ್ ಕಿಂಗ್(15) ಮತ್ತು ಕೈಲ್ ಮೇಯರ್ಸ್(36) ವಿಕೆಟ್ ಕಿತ್ತರು. ಇಲ್ಲಿಗೆ ಸುಮ್ಮನಾಗದ ಶಾರ್ದೂಲ್ ಮುಂದಿನ ಓವರ್ನಲ್ಲಿ ಅಲಿಕ್ ಅಥಾನಾಜ್(6)ಗೆ ಪೆವಿಲಿಯನ್ ದಾರಿ ತೋರಿಸಿದರು. ಆದರೆ ನಾಯಕ ಶೈ ಹೋಪ್ ಮತ್ತು ಕಾರ್ಟಿ ಅವರ ಅಜೇಯ ಜವಾಬ್ದಾರಿಯುತ ಆಟದ ನೆರವಿನಿಂದ ವಿಂಡೀಸ್ ಗೆಲುವು ಕಂಡಿತು. ಹೋಪ್ ಅಜೇಯ 63 ರನ್ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕಾರ್ಟಿ ಅಜೇಯ 48 ರನ್ ಬಾರಿಸಿದರು.
ಇದನ್ನೂ ಓದಿ Ind vs wi : 181 ರನ್ಗಳ ಅಲ್ಪ ಮೊತ್ತಕ್ಕೆ ಭಾರತ ತಂಡ ಆಲ್ಔಟ್
ಇಶಾನ್ ಕಿಶನ್ ಅರ್ಧಶತಕ ವ್ಯರ್ಥ
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಇಶಾನ್ ಕಿಶನ್ (55) ಮತ್ತು ಶುಭಮನ್ ಗಿಲ್(34) ಸೇರಿಕೊಂಡು ಮೊದಲ ವಿಕೆಟ್ಗೆ 90 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಉತ್ತಮ ಸ್ಥಿತಿಯಲ್ಲಿದ್ದ ಭಾರತ ಉಭಯ ಆಟಗಾರರ ವಿಕೆಟ್ ಪತನದ ಬಳಿಕ ದಿಢೀರ್ ಕುಸಿತ ಕಂಡಿತು. ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 9 ರನ್ಗೆ ಆಟ ಮುಗಿಸಿದರು. ಇದರ ಬೆನ್ನಗೆ ಅಕ್ಷರ್ ಪಟೇಲ್ 1, ನಾಯಕ ಹಾರ್ದಿಕ್ ಪಾಂಡ್ಯ 7 ರನ್ ಗಳಿಗೆ ನಿರ್ಗಮಿಸಿ ಒಂದಂಕಿ ದಾಟಲು ವಿಫಲವಾದರು.
ಸೂರ್ಯಕುಮಾರ್ ಯಾದವ್ 24, ರವೀಂದ್ರ ಜಡೇಜಾ 10, ಶಾರ್ದೂಲ್ ಠಾಕೂರ್16, ಕುಲದೀಪ್ ಯಾದವ್ ಔಟಾಗದೆ 8 , ಉಮ್ರಾನ್ ಮಲಿಕ್ ಶೂನ್ಯಕ್ಕೆ ಔಟಾದರು. ಮುಖೇಶ್ ಕುಮಾರ್ 6 ರನ್ ಗಳಿಸಿ ಔಟಾದರು.
ವಿಂಡೀಸ್ ಪರ ಬಿಗಿ ದಾಳಿ ನಡೆಸಿದ ರೊಮಾರಿಯೊ ಶೆಫರ್ಡ್ ಮತ್ತು ಗುಡಾಕೇಶ್ ಮೋಟಿ ತಲಾ 3 ವಿಕೆಟ್ ಪಡೆದರು. ಅಲ್ಜಾರಿ ಜೋಸೆಫ್ 2, ಜೇಡನ್ ಸೀಲ್ಸ್ ಮತ್ತು ಯಾನಿಕ್ ಕ್ಯಾರಿಯಾ ತಲಾ 1 ವಿಕೆಟ್ ಪಡೆದು ಭಾರತಕ್ಕೆ ಕಡಿವಾಣ ಹಾಕಿದರು.