ರೊಸೇಯೂ (ಡೊಮಿನಿಕಾ): ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್ ಜಗತ್ತನ್ನು ಆಳಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇಂದು ಪಾತಾಳಕ್ಕೆ ಕುಸಿದಿದೆ. ಏಕದಿನ ವಿಶ್ವ ಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಟೂರ್ನಿಗೆ ಅರ್ಹತೆ ಸಂಪಾದಿಸದ ಅವಮಾನಕ್ಕೆ ಸಿಲುಕಿದೆ. ಈ ಆಘಾತದ ಮಧ್ಯೆಯೂ ವಿಂಡೀಸ್(IND vs WI) ತವರಿನಲ್ಲಿ ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಉಭಯ ತಂಡಗಳ ಟೆಸ್ಟ್ ಇತಿಹಾಸದ(India vs West Indies in Test Records) ಮಾಹಿತಿ ಇಂತಿದೆ.
ಕೆರಿಬಿಯನ್ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ಮೊದಲು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜುಲೈ 12-16) ಮತ್ತು ಪೋರ್ಟ್ ಆಫ್ ಸ್ಪೇನ್ (ಜುಲೈ. 20-24). ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್‌ಪಾರ್ಕ್ ಓವಲ್‌ನಲ್ಲಿ ನಡೆಯುವ 100ನೇ ಟೆಸ್ಟ್ ಪಂದ್ಯ ಇದೆಂಬುದು ವಿಂಡೀಸ್ ಕ್ರಿಕೆಟ್ ಪಾಲಿಗೆ ಸಂಭ್ರಮದ ಸಂಗತಿ. ಇದು ಭಾರತದ ಪಾಲಿಗೆ 3ನೇ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತದ ಮೊದಲ ಸರಣಿಯಾಗಲಿದೆ.
ಮೊದಲ ಮುಖಾಮುಖಿ
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇದುವರೆಗೆ 98 ಟೆಸ್ಟ್ ಪಂದ್ಯಗಳು(india vs west indies test history) ನಡೆದಿವೆ. ಇದರಲ್ಲಿ ವೆಸ್ಟ್ ಇಂಡೀಸ್ 30 ಪಂದ್ಯಗಳನ್ನು ಗೆದ್ದಿದೆ. ಭಾರತ 22 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. 46 ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿದೆ. ಬಲಾಬಲದ ಲೆಕ್ಕಾಚಾರದಲ್ಲಿ ವಿಂಡೀಸ್ ಮುಂದಿದ್ದರೂ ಈಗಿನ ಸ್ಥಿತಿಯಲ್ಲಿ ವಿಂಡೀಸ್ ತಂಡವನ್ನು ಯಾರು ಬೇಕಾದರೂ ಸೋಲಿಸುವಷ್ಟರ ಮಟ್ಟಿಗೆ ಈ ತಂಡ ಬಂದು ನಿಂತಿದೆ.
ಉಭಯ ತಂಡಗಳ ಮಧ್ಯೆ ಮೊದಲ ಟೆಸ್ಟ್ ಮುಖಾಮುಖಿ ನಡೆದದ್ದು 1948-49ರಲ್ಲಿ. ಐದು ಪಂದ್ಯಗಳ ಸರಣಿ ಇದಾಗಿತ್ತು. ಈ ಸರಣಿಯನ್ನು ವಿಂಡೀಸ್ 1-0 ಅಂತರದಿಂದ ಗೆದ್ದು ಬೀಗಿತ್ತು. ಈ ಸರಣಿಗೆ ಭಾರತ ಆತಿಥ್ಯ ವಹಿಸಿಕೊಂಡಿತ್ತು. ಭಾರತ ತಂಡ ವಿಂಡೀಸ್ ವಿರುದ್ಧ ಮೊತ್ತ ಮೊದಲ ಟೆಸ್ಟ್ ಸರಣಿ ಗೆದ್ದಿದ್ದು 1970ರಲ್ಲಿ, ವಿಂಡೀಸ್ ನೆಲದಲ್ಲೇ ಭಾರತ ಮೊದಲ ಗೆಲುವು ದಾಖಲಿಸಿತ್ತು. ಇದು ಕೂಡ 5 ಪಂದ್ಯಗಳ ಸರಣಿ ಆಗಿತ್ತು. ಭಾರತ 1-0 ಅಂತರದಿಂದ ಮೇಲುಗೈ ಸಾಧಿಸಿತ್ತು.
ಇದನ್ನೂ ಓದಿ IND vs WI: ವಿಶಿಷ್ಟ ರೀತಿಯ ಕಠಿಣ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ ಆಟಗಾರರು; ವಿಡಿಯೊ ವೈರಲ್
21 ವರ್ಷಗಳಿಂದ ಭಾರತ ಅಜೇಯ
2002ರಿಂದ ಭಾರತ ತಂಡ ವಿಂಡೀಸ್ ವಿರುದ್ಧ ಇದುವರೆಗೆ 8 ಟೆಸ್ಟ್ ಸರಣಿಯನ್ನು ಆಡಿದೆ. 8 ಸರಣಿಯಲ್ಲಿಯೂ ಭಾರತ ಗೆಲುವು ಸಾಧಿಸಿ ಕಳೆದ 21 ವರ್ಷಗಳಿಂದ ಅಜೇಯ ದಾಖಲೆ ಕಾಯ್ದುಕೊಂಡಿದೆ. 2019ರಲ್ಲಿ ಕೊನೆಯ ಬಾರಿ ಭಾರತ ತಂಡ ವಿಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸೆರಣಿ ಆಡಿತ್ತು. ಇದನ್ನು 2-0 ಅಂತರದಿಂದ ಭಾರತ ಗೆದ್ದಿತ್ತು.