ಲಾಡರ್ಹಿಲ್: ಯಶಸ್ವಿ ಜೈಸ್ವಾಲ್ ಅವರ ಅಜೇಯ 84 ರನ್ ಹಾಗೂ ಶುಭ್ಮನ್ ಗಿಲ್ (77) ಅವರ ಅರ್ಧ ಶತಕದ ನೆರವು ಪಡೆದ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸದ ಟಿ20 ಸರಣಿಯ (ind vs wi) ನಾಲ್ಕನೇ ಪಂದ್ಯದಲ್ಲಿ 9 ವಿಕೆಟ್ ಸುಲಭ ಜಯ ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2-2 ಎರಡೂ ತಂಡಗಳು ಸಮಬಲದ ಸಾಧನೆ ಮಾಡಿದೆ. ಹೀಗಾಗಿ ಐದನೇ ಹಾಗೂ ಕೊನೇ ಪಂದ್ಯ ಕೌತುಕ ಮೂಡಿಸಿದೆ.
ಇಲ್ಲಿನ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ 18 ಎಸೆತಗಳು ಬಾಕಿ ಇರುವಂತೆಯೇ ಕೇವಲ 1 ವಿಕೆಟ್ ನಷ್ಟಕ್ಕೆ 179 ರನ್ ಬಾರಿಸಿ ಗೆಲುವು ಸಾಧಿಸಿತು.
ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಮೂಲಕ ಉತ್ತಮ ಆರಂಭ ಪಡೆಯಿತು. ಈ ಯುವ ಜೋಡಿ ವಿಂಡೀಸ್ ಬೌಲರ್ಗಳನ್ನು ಚೆಂಡಾಡುತ್ತಾ ಮೊದಲ ವಿಕೆಟ್ಗೆ 165 ರನ್ ಬಾರಿಸಿತು. ಜೈಸ್ವಾಲ್ 51 ಎಸೆತಗಳಲ್ಲಿ 11 ಫೋರ್ ಹಾಗೂ 3 ಸಿಕ್ಸರ್ ಸಮೇತ 84 ರನ್ ಬಾರಿಸಿ ಅಜೇಯರಾಗಿ ಉಳಿದರೆ, ಶುಭ್ಮನ್ ಗಿಲ್ 47 ಎಸೆತಗಳಲ್ಲಿ 3 ಫೋರ್ ಹಾಗೂ 5 ಸಿಕ್ಸರ್ ಬಾರಿಸಿ ಮಿಂಚಿದರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವೂ ದೊಡ್ಡ ಮೊತ್ತದ ಗುರಿಯೊಂದಿಗೆ ಆಡಿತು. ಕೈಲ್ ಮೇಯರ್ಸ್ 17, ಬ್ರೆಂಡನ್ ಕಿಂಗ್ 18, ಶಾಯ್ ಹೋಪ್ 45 ರನ್ ಬಾರಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮಾಯರ್ 61 ರನ್ ಬಾರಿಸುವ ಮೂಲಕ ದೊಡ್ಡ ಮೊತ್ತ ಪೇರಿಸಲು ನೆರವಾದರು. ಅತಿ ವೇಗದಲ್ಲಿ ಆಡುತ್ತಿದ್ದ ವಿಂಡೀಸ್ ತಂಡಕ್ಕೆ ಅರ್ಶ್ ದೀಪ್ ಸಿಂಗ್ 3 ವಿಕೆಟ್ ಹಾಗೂ ಕುಲ್ದೀಪ್ ಯಾದವ್ 2 ವಿಕೆಟ್ ಪಡೆಯುವ ಮೂಲಕ ಕಡಿವಾಣ ಹಾಕಿದರು.
ಭಾನುವಾರ (ಆಗಸ್ಟ್ 13ರಂದು) ಇತ್ತಂಡಗಳ ನಡುವಿನ ಸರಣಿಯ ಕೊನೇ ಪಂದ್ಯ ನಡೆಯಲಿದೆ. ಇದು ಸರಣಿ ನಿರ್ಣಾಯಕ ಪಂದ್ಯವಾಗಿದೆ.