ರೊಸೇಯೂ (ಡೊಮಿನಿಕಾ): ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ಶತಕ ಮತ್ತು ರೋಹಿತ್ ಶರ್ಮ ಅವರ ಆಕರ್ಷಕ ಶತಕದ ನೆರವಿನಿಂದ ವಿಂಡೀಸ್(IND vs WI) ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಭಾರತ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದೆ. ಜೈಸ್ವಾಲ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 17ನೇ ಆಟಗಾರ ಎನಿಸಿಕೊಂಡರು.
ಮೊದಲ ದಿನದ ಅಂತ್ಯಕ್ಕೆ 80 ರನ್ ಗಳಿಸಿದ್ದಲ್ಲಿಂದ ದ್ವಿತೀಯ ದಿನದ ಆಟ ಮುಂದುವರಿಸಿದ ಭಾರತ ಉತ್ತಮ ಪ್ರದರ್ಶನವನ್ನೇ ತೋರಿತು. ರೋಹಿತ್ ಮತ್ತು ಜೈಸ್ವಾಲ್ ಸೇರಿಕೊಂಡು ವಿಕೆಟ್ ನಷ್ಟವಿಲ್ಲದೆ ವಿಂಡೀಸ್ನ 150 ರನ್ಗಳನ್ನು ಬೆನ್ನಟ್ಟಿ ತಂಡಕ್ಕೆ ಆಸರೆಯಾದರು. ಬುಧವಾರ 30 ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದರು. ದ್ವಿತೀಯ ದಿನದಾಟದಲ್ಲಿ ತಾಳ್ಮೆಯುತ ಬ್ಯಾಟಿಂಗ್ ಮೂಲಕ ವಿಕೆಟ್ ನಷ್ಟವಿಲ್ಲದೆ 200 ರನ್ ಜತೆಯಾಟ ನಡೆಸಿ ಗಮನಸೆಳೆದರು.
ಕಳೆದ ಹಲವು ಸರಣಿಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ರೋಹಿತ್ ವಿಂಡೀಸ್ ವಿರುದ್ಧ ತಮ್ಮ ಬ್ಯಾಟಿಂಗ್ ಲಯವನ್ನು ಕಂಡುಕೊಂಡರು. ಏಕದಿನ ವಿಶ್ವಕಪ್ಗೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇರುವಾಗಲೇ ರೋಹಿತ್ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡದ್ದು ಟೀಮ್ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದೆ.
ಇದನ್ನೂ ಓದಿ IND vs WI: ವಿವ್ ರಿಚರ್ಡ್ಸ್ ದಾಖಲೆ ಮುರಿಯುವ ಸನಿಹದಲ್ಲಿ ಕಿಂಗ್ ಕೊಹ್ಲಿ
ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸಿದ ಜೈಸ್ವಾಲ್
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಜೈಸ್ವಾಲ್ ಭಾರತ ಪರ ದಾಖಲೆಯೊಂದನ್ನು ಬರೆದರು. ಪದಾರ್ಪಣ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ 17ನೇ ಆಟಗಾರ ಎನಿಸಿಕೊಂಡರು. ಲಾಲಾ ಅಮರ್ನಾಥ್ ಅವರು ಭಾರತ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರನಾಗಿದ್ದಾರೆ. ಅವರು 1933ರಲ್ಲಿ ಇಂಗ್ಲೆಂಡ್ ವಿರುದ್ಧ 118 ರನ್ ಬಾರಿಸಿದ್ದರು. ರೋಹಿತ್ ಶರ್ಮ(177) ಮತ್ತು ಪೃಥ್ವಿ ಶಾ(134) ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ವಿಂಡೀಸ್ ವಿರುದ್ಧ ಶತಕ ಬಾರಿಸಿದ್ದರು. ಇದೀಗ ಜೈಸ್ವಾಲ್ ಕೂಡ ವಿಂಡೀಸ್ ವಿರುದ್ಧವೇ ಈ ಸಾಧನೆ ಮಾಡಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹಿರಿಮೆಗೂ ಜೈಸ್ವಾಲ್(21 ವರ್ಷ 196ದಿನ) ಪಾತ್ರರಾದರು. ಪೃಥ್ವಿ ಶಾ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 18 ವರ್ಷ 329 ದಿನ ದಲ್ಲಿ ಶತಕ ಬಾರಿಸಿದ್ದರು.