Site icon Vistara News

IND vs WI ODI | ಮೊದಲ ಪಂದ್ಯದ ಗೆಲುವಿಗೆ ಶಿಖರ್‌ ಧವನ್‌ ಬಳಗದ ರಣತಂತ್ರ ರೆಡಿ

IND VS WI ODI

ಪೋರ್ಟ್‌ ಆಫ್‌ ಸ್ಪೇನ್‌: ಪ್ರವಾಸಿ ಭಾರತ ತಂಡ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ (IND vs WI ODI) ಏಕದಿನ ಸರಣಿಯ ಮೊದಲ ಪಂದ್ಯ ಪೋರ್ಟ್‌ ಆಫ್‌ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ ಸ್ಟೇಡಿಯಮ್‌ನಲ್ಲಿ ಭಾರತೀಯ ಕಾಲಮಾನ ಪ್ರಕಾರ ಶುಕ್ರವಾರ ಸಂಜೆ ೭ ಗಂಟೆಗೆ ಆರಂಭವಾಗಲಿದೆ.

ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಷಭ್‌ ಪಂತ್‌ ಸೇರಿದಂತೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಒರೆಗೆ ಹಚ್ಚಲು ಇದೊಂದು ಉತ್ತಮ ಅವಕಾಶ. ಕೇವಲ ಏಕದಿನ ಮಾದರಿಗೆ ಮಾತ್ರ ಸೀಮಿತಗೊಂಡಿರುವ ಹಿರಿಯ ಆಟಗಾರ ಶಿಖರ್‌ ಧವನ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಅವರು ಪ್ರಸಕ್ತ ಆವೃತ್ತಿಯಲ್ಲಿ ಭಾರತ ತಂಡದ ನೇತೃತ್ವ ವಹಿಸಿಕೊಂಡ ಏಳನೇ ನಾಯಕ.

ಭಾರತವೇ ಬಲಿಷ್ಠ

ಹಿರಿಯ ಆಟಗಾರರ ಇಲ್ಲದಿರುವ ಹೊರತಾಗಿಯೂ ಸರಣಿಯಲ್ಲಿ ಭಾರತವೇ ಬಲಿಷ್ಠ ತಂಡ ಎನಿಸಿಕೊಂಡಿದೆ. ಟೀಮ್‌ ಇಂಡಿಯಾದ ಬೆಂಚ್‌ ಸ್ಟ್ರೆಂಥ್‌ ಉತ್ತಮವಾಗಿರುವ ಕಾರಣ ಕೆರಿಬಿಯನ್‌ ಆಟಗಾರರಿಗೆ ಸವಾಲೊಡ್ಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಶಾನ್‌ ಕಿಶನ್‌, ರುತುರಾಜ್‌ ಗಾಯಕ್ವಾಡ್‌, ಶುಬ್ಮನ್‌ ಗಿಲ್‌, ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌ ಮತ್ತು ದೀಪಕ್‌ ಹೂಡಾ ತಮ್ಮ ಶಕ್ತಿ ಹಾಗೂ ಏಕದಿನ ಮಾದರಿಯಲ್ಲಿ ಆಡುವ ತಮ್ಮ ಚಾಕಚಕ್ಯತೆ ಪ್ರದರ್ಶಿಸಲಿದ್ದಾರೆ.

ದುರ್ಬಲ ವಿಂಡೀಸ್‌ ಬ್ಯಾಟಿಂಗ್‌

ವೆಸ್ಟ್‌ ಇಂಡೀಸ್‌ ತಂಡದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿದೆ. ರವೀಂದ್ರ ಜಡೇಜಾ ತಂಡದ ಉಪನಾಯಕನ ಹೊಣೆಗಾರಿಕೆ ವಹಿಸಿಕೊಳ್ಳುವ ಜತೆಗೆ ಸ್ಪಿನ್‌ ಬೌಲಿಂಗ್‌ ನೇತೃತ್ವ ವಹಿಸಿಕೊಳ್ಳಬಹುದು. ಯಜ್ವೇಂದ್ರ ಚಹಲ್‌ ಅವರೊಂದಿಗೆ ಸೇರಿಕೊಳ್ಳುವ ಸಾಧ್ಯತೆಗಳಿವೆ. ಮೊಹಮ್ಮದ್‌ ಶಮಿ ಪ್ರಮಖ ವೇಗಿ. ಹಾರ್ದಿಕ್‌ ಅನುಪಸ್ಥಿತಿಯಲ್ಲಿ ಶಾರ್ದುಲ್‌ ಠಾಕೂರ್‌ಗೆ ಸಿಗಬಹುದು ಚಾನ್ಸ್‌. ಅಂತೆಯೆ ಆವೇಶ್‌ ಖಾನ್‌, ಪ್ರಸಿದ್ಧ್‌ ಕೃಷ್ಣ ಬೌಲಿಂಗ್‌ ನಿಖರ ಬೌಲಿಂಗ್‌ ಮೂಲಕ ದುರ್ಬಲ ವಿಂಡೀಸ್‌ ಬ್ಯಾಟಿಂಗ್‌ ವಿಭಾಗಕ್ಕೆ ಸಡ್ಡು ಹೊಡೆಯಲಿದ್ದಾರೆ.

ವೆಸ್ಟ್‌ ಇಂಡೀಸ್ ಏಕದಿನ ತಂಡದ ಪರಿಸ್ಥಿತಿ ಹೀನಾಯವಾಗಿದೆ. ಇತ್ತೀಚೆಗ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ೩-೦ ಕ್ಲೀನ್‌ ಸ್ವೀಪ್‌ ಮಾಡಿಸಿಕೊಂಡಿತ್ತು. ಆದಾಗ್ಯೂ ಆಲ್‌ರೌಂಡರ್‌ ಜೇಸನ್‌ ಹೋಲ್ಡರ್ ಅವರ ಎಂಟ್ರಿಯಿಂದ ತಂಡಕ್ಕೆ ಬಲ ಬಂದಿದೆ.

ಭಾರತ ತಂಡ: ಶಿಖರ್‌ ಧವನ್‌ (ನಾಯಕ), ರುತುರಾಜ್‌ ಗಾಯಕ್ವಾಡ್‌, ಶುಬ್ಮನ್‌ ಗಿಲ್‌, ದೀಪಕ್ ಹೂಡಾ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ (ವಿಕೆಟ್‌ಕೀಪರ್‌), ಸಂಜು ಸ್ಯಾಮ್ಸನ್‌, ರವೀಂದ್ರ ಜಡೇಜಾ, ಶಾರ್ದುಲ್‌ ಠಾಕೂರ್‌, ಯಜ್ವೇಂದ್ರ ಚಹಲ್, ಅಕ್ಷರ್ ಪಟೇಲ್‌, ಆವೇಶ್‌ ಖಾನ್‌, ಪ್ರಸಿದ್ಧ್‌ ಕೃಷ್ಣ, ಮೊಹಮ್ಮದ್ ಸಿರಾಜ್‌, ಅರ್ಶ್‌ದೀಪ್‌ ಸಿಂಗ್‌.

ವೆಸ್ಟ್​ ಇಂಡೀಸ್​ ತಂಡ

ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಕೆಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್​ಹೊಸೈನ್, ಶಮ್ರಾ ಬ್ರೂಕ್ಸ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್​, ಗುಡಕೇಶ್ ಮೋತಿ, ಕೀಮೋ ಪಾಲ್, ರೋವ್ಮನ್​ ಪೊವೆಲ್ ಮತ್ತು ಜೇಡನ್ ಸೀಲ್ಸ್.

ಪಂದ್ಯ ನಡೆಯುವುದು ಎಲ್ಲಿ?

ಟ್ರಿನಿಡಾಡ್ ದ್ವೀಪದ ಪೋರ್ಟ್‌ ಆಫ್‌ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ನಲ್ಲಿ ಪಂದ್ಯ ನಡೆಯಲಿದೆ.

ಪಂದ್ಯದ ಸಮಯ?

ಭಾರತೀಯ ಕಾಲಮಾನ ರಾತ್ರಿ ೭ ಗಂಟೆಗೆ ಆರಂಭವಾಗಲಿದೆ

ನೇರ ಪ್ರಸಾರ ಎಲ್ಲಿ?

ಭಾರತದಲ್ಲಿ ಯಾವುದೇ ಚಾನೆಲ್‌ಗಳು ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಏಕದಿನ ಸರಣಿಯ ಪಂದ್ಯಗಳನ್ನು ನೇರ ಪ್ರಸಾರ ಮಾಡುವುದಿಲ್ಲ.

ಲೈವ್ ಸ್ಟ್ರೀಮಿಂಗ್ ಎಲ್ಲಿ?

Fancode website ಮತ್ತು app ನಲ್ಲಿ ಲೈವ್‌ ಸ್ಟ್ರೀಮಿಂಗ್‌ನ ಲೈವ್‌ ವೀಕ್ಷಿಸಬಹುದು.

ಇದನ್ನೂ ಓದಿ | the 6ixty: ಹೊಸ ಮಾದರಿಯ ಕ್ರಿಕೆಟ್‌ ಲೀಗ್‌ ಜಾರಿಗೆ ತಂದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ

Exit mobile version