Site icon Vistara News

IND vs WI T20 | ವಿಂಡೀಸ್‌ ವಿರುದ್ಧ ಭಾರತಕ್ಕೆ 68 ರನ್‌ ಭರ್ಜರಿ ಜಯ

IND vs ENG T20

ತರೊಬಾ (ವೆಸ್ಟ್‌ ಇಂಡೀಸ್‌) : ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪ್ರವಾಸಿ ಭಾರತ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ೨೦ ಸರಣಿಯ (IND vs WI) ಮೊದಲ ಪಂದ್ಯದಲ್ಲಿ 68 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿದೆ. ಅತ್ತ ಏಕದಿನ ಸರಣಿಯಲ್ಲಿ ವೈಟ್‌ವಾಷ್‌ ಮಾಡಿಸಿಕೊಂಡಿದ್ದ ವಿಂಡೀಸ್‌ ಬಳಗ ಟಿ೨೦ ಸರಣಿಯಲ್ಲೂ ಪ್ರತಿರೋಧ ಒಡ್ಡಲಿಲ್ಲ.

ತರೊಬಾದ ಬ್ರಿಯಾನ್‌ ಲಾರಾ ಸ್ಟೇಡಿಯಮ್‌ನಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೯೦ ರನ್‌ ಬಾರಿಸಿದರೆ, ವಿಂಡೀಸ್‌ ತಂಡ ತನ್ನ ಪಾಲಿನ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೨೨ ರನ್‌ ಬಾರಿಸಿ ಸೋಲೊಪ್ಪಿಕೊಂಡಿತು.

ಅಮೋಘ ಬ್ಯಾಟಿಂಗ್‌

ಟಾಸ್‌ ಜಯಿಸಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ರೋಹಿತ್‌ ಶರ್ಮ (೬೪) ಅವರ ಅಮೋಘ ಅರ್ಧ ಶತಕದ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಬಡ್ತಿ ಪಡೆದ ಸೂರ್ಯಕುಮಾರ್‌ ಯಾದವ್‌ (೨೪) ಕೂಡ ಉತ್ತಮ ನೆರವು ಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ ೪೪ ರನ್ ಬಾರಿಸಿತು. ಆದರೆ, ಶ್ರೇಯಸ್‌ ಅಯ್ಯರ್‌ (೦), ರಿಷಭ್‌ ಪಂತ್‌ (೧೪) ಹಾಗೂ ಹಾರ್ದಿಕ್‌ ಪಾಂಡ್ಯ (೧) ಬೇಗ ವಿಕೆಟ್‌ ಒಪ್ಪಿಸುವ ಮೂಲಕ ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ಹಿನ್ನಡೆ ಉಂಟಾಯಿತು. ಆದರೆ, ಕೊನೆಯಲ್ಲಿ ಫಿನಿಶರ್‌ ದಿನೇಶ್‌ ಕಾರ್ತಿಕ್‌ (೧೯ ಎಸೆತಗಳಲ್ಲಿ ೪೧ ರನ್‌) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಸವಾಲಿನ ಮೊತ್ತ ಪೇರಿಸಲು ನೆರವಾದರು. ರವೀಂದ್ರ ಜಡೇಜಾ (೧೬) ಹಾಗೂ ಆರ್. ಅಶ್ವಿನ್ (೧೩) ತಮ್ಮ ಕೊಡುಗೆಗಳನ್ನು ಕೊಟ್ಟರು. ವಿಂಡೀಸ್ ಬೌಲಿಂಗ್ ಪರ ಅಲ್ಜಾರಿ ಜೋಸೆಫ್‌ ೪೬ ರನ್‌ಗಳಿಗೆ ೨ ವಿಕೆಟ್‌ ಪಡೆದರು.

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಿದ ವಿಂಡೀಸ್‌ ತಂಡ ಭಾರತದ ಬೌಲರ್‌ಗಳ ನಿಖರ ದಾಳಿಗೆ ಪತರಗುಟ್ಟಿತು. ಲಗುಬಗನೆ ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಭಾರತ ಪರ ಅರ್ಶ್‌ದೀಪ್‌ ಸಿಂಗ್‌, ರವಿ ಬಿಷ್ಣೋಯಿ ಹಾಗೂ ಆರ್‌. ಅಶ್ವಿನ್‌ ತಲಾ ಎರಡು ವಿಕೆಟ್‌ ಪಡೆದರು.

ಸ್ಕೋರ್‌ ವಿವರ

ಭಾರತ : ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೯೦ (ರೋಹಿತ್‌ ಶರ್ಮ ೬೪, ದಿನೇಶ್‌ ಕಾರ್ತಿಕ್‌ ೪೧; ಅಲ್ಜಾರಿ ಜೋಸೆಫ್‌ ೪೬ಕ್ಕೆ ೨)

ವೆಸ್ಟ್‌ ಇಂಡೀಸ್‌: ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೨೨ (ಶಮ್ರಾ ಬ್ರೂಕ್ಸ್‌ ೨೦, ಅರ್ಶ್‌ದೀಪ್‌ ಸಿಂಗ್‌ ೨೪ಕ್ಕೆ೨, ರವಿ ಬಿಷ್ಣೋಯಿ೨೬ಕ್ಕೆ೨, ರವಿಚಂದ್ರನ್‌ ಅಶ್ವಿನ್‌೨೨ಕ್ಕೆ೨).

ಇದನ್ನೂ ಓದಿ | Ind vs WI ODI | ಸರಣಿ ಕ್ಲೀನ್‌ ಸ್ವೀಪ್ ಮಾಡಿದ ಭಾರತ, ವೆಸ್ಟ್‌ ಇಂಡೀಸ್‌ಗೆ 119 ರನ್‌ಗಳ ಸೋಲು

Exit mobile version