Site icon Vistara News

IND vs WI T20 | ಇಂದೇ ನಡೆಯಲಿದೆ ಮೂರನೇ ಪಂದ್ಯ, ತಡವಾಗಿ ಆರಂಭವಾಗಲಿದೆ ಹಣಾಹಣಿ

IND vs Wi t20

ಸೇಂಟ್‌ ಕಿಟ್ಸ್‌ : ಸಾಮಾನ್ಯವಾಗಿ ದ್ವಿ ಪಕ್ಷೀಯ ಕ್ರಿಕೆಟ್ ಸರಣಿಯ ವೇಳೆ ಒಂದು ಪಂದ್ಯ ಮುಕ್ತಾಯಗೊಂಡ ಬಳಿಕ ಕನಿಷ್ಠ ಪಕ್ಷ ಒಂದು ದಿನ ಬಿಡುವು ಕೊಟ್ಟು ಮತ್ತೊಂದು ಪಂದ್ಯ ನಡೆಯುತ್ತದೆ. ಆದರೆ, ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ೨೯ ಸರಣಿಯ (IND vs WI T20) ಮೂರನೇ ಪಂದ್ಯಕ್ಕೆ ಕೆಲವೇ ಗಂಟೆಗಳ ಬಿಡುವು ಮಾತ್ರ ನೀಡಲಾಗಿದೆ. ಸೋಮವಾರವಷ್ಟೇ ಎರಡನೇ ಪಂದ್ಯ ನಡೆದಿದ್ದು, ಮಂಗಳವಾರ ರಾತ್ರಿ ಮೂರನೇ ಪಂದ್ಯ ಆಯೋಜನೆಗೊಂಡಿದೆ. ಹೀಗಾಗಿ ಭಾರತ ತಂಡ ಕಡಿಮೆ ಅವಧಿಯಲ್ಲಿ ಮತ್ತೊಂದು ಹಣಾಹಣಿಗೆ ಸಿದ್ಧಗೊಳ್ಳಬೇಕಾಗಿದೆ.

ಮಂಗಳವಾರ ಪಂದ್ಯ ನಡೆದ ಸೇಂಟ್‌ ಕಿಟ್ಸ್‌ನ ವಾರ್ನರ್‌ ಪಾರ್ಕ್‌ ಸ್ಟೇಡಿಯಮ್‌ನಲ್ಲೇ ಮೂರನೇ ಪಂದ್ಯ ನಡೆಯಲಿದೆ. ಆದರೆ, ಸಮಯ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಪಂದ್ಯದ ಪೂರ್ವನಿಯೋಜಿತ ಅವಧಿ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ ೮ ಗಂಟೆಗೆ. ಆದರೆ, ಮಂಗಳವಾರದ ಪಂದ್ಯವನ್ನು ೯.೩೦ಕ್ಕೆ ಆಯೋಜಿಸಲಾಗಿದೆ.

ಸುಧಾರಿತ ಪ್ರದರ್ಶನ ಅಗತ್ಯ

ಮೊದಲ ಪಂದ್ಯವನ್ನು ಗೆದ್ದಿರುವ ರೋಹಿತ್ ಶರ್ಮ ಬಳಗ ಎರಡನೇ ಹಣಾಹಣಿಯಲ್ಲಿ ತೀವ್ರ ವೈಫಲ್ಯ ಕಂಡಿತ್ತು. ಅದರಲ್ಲೂ ಭಾರತ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿದ್ದರು. ಒಬೆದ್‌ ಮೆಕಾಯ್‌ (೧೭ ರನ್‌ಗಳಿಗೆ ೬ ವಿಕೆಟ್) ಅವರ ಬೌಲಿಂಗ್‌ಗೆ ತತ್ತರಿಸಿ ಹೋಗಿತ್ತು. ಅಂತೆಯೇ ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ 138 ರನ್​ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 19.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್​ ಬಾರಿಸಿ ಭರ್ಜರಿ ಜಯ ಸಾಧಿಸಿತು. ಕೊನೇ ಓವರ್‌ನಲ್ಲಿ ಎದುರಾಳಿ ತಂಡಕ್ಕೆ ೧೦ ರನ್ ಬೇಕಾಗಿತ್ತು. ಆದರೆ, ಭಾರತ ತಂಡ ಎರಡೆ ಎಸೆತಗಳಲ್ಲಿ ರನ್‌ ಬಿಟ್ಟುಕೊಟ್ಟಿತ್ತು.

ವಾರ್ನರ್‌ ಪಾರ್ಕ್‌ ಪಿಚ್‌ ಬೌಲಿಂಗ್‌ಗೆ ಅನುಕೂಲಕರ .ಹೀಗಾಗಿ ಇಲ್ಲಿ ದೊಡ್ಡ ಮೊತ್ತದ ರನ್ ಪೇರಿಸುವುದು ಕಷ್ಟ. ಹೀಗಾಗಿ ಮಂಗಳವಾರದ ಪಂದ್ಯವೂ ಕುತೂಹಲ ಮೂಡಿಸಿದೆ. ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮೇಲುಗೈ ಸಾಧಿಸಲು ಇತ್ತಂಡಗಳೂ ಪ್ರಯತ್ನಿಸಲಿದೆ.

ಪಂದ್ಯ ವಿಳಂಬ ಯಾಕೆ? ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನಿಗದಿಯಾಗಿತ್ತು. ಆದರೆ 2ನೇ ಪಂದ್ಯವು ತಡವಾಗಿ ಆರಂಭವಾಗಿದ್ದ ಕಾರಣ, ಆಟಗಾರರಿಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಮೂರನೇ ಪಂದ್ಯದ ಸಮಯ ಬದಲಾವಣೆ ಮಾಡಲಾಗಿದೆ. ನಿಗದಿತ ಅವಧಿಗಿಂತ ಒಂದೂವಗೆ ಗಂಟೆ ತಡವಾಗಿ ಅಂದರೆ ೯.೩೦ಕ್ಕೆ ಆರಂಭವಾಗಲಿದೆ.

ಪಿಚ್‌ ಗುಣ : ಪಿಚ್‌ ಬೌಲಿಂಗ್‌ಗೆ ಪೂರಕವಾಗಿದೆ. ಅದರಲ್ಲೂ ವೇಗಿಗಳ ಅಬ್ಬರ ಹೆಚ್ಚಿರುತ್ತದೆ. ಟಾಸ್‌ ಗೆದ್ದವರು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಮಳೆಯ ಸಂಭವವಿಲ್ಲ.w

ತಂಡಗಳು

ವೆಸ್ಟ್ ಇಂಡೀಸ್ ತಂಡ: ನಿಕೋಲಸ್ ಪೂರನ್ (ನಾಯಕ) , ಡೆವೊನ್ ಥಾಮಸ್ (ವಿಕೆಟ್ ಕೀಪರ್) , ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್ , ಶಿಮ್ರೊನ್‌ ಹೆಟ್ಮಾಯರ್‌ , ರೋವ್ಮನ್‌ ಪೊವೆಲ್ , ಒಡೆನ್ ಸ್ಮಿತ್ , ಜೇಸನ್ ಹೋಲ್ಡರ್ , ಅಕೆಲ್ ಹೊಸೈನ್‌ , ಅಲ್ಜಾರಿ ಜೋಸೆಫ್ , ಓಬೆದ್‌ ಮಕಾಯ್.

ಭಾರತ ಟಿ20 ತಂಡ: ರೋಹಿತ್ ಶರ್ಮ (ನಾಯಕ) , ರಿಷಭ್‌ ಪಂತ್ ( ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಶ್ರೇಯಸ್ ಅಯ್ಯರ್ , ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ , ದಿನೇಶ್ ಕಾರ್ತಿಕ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಅವೇಶ್ ಖಾನ್ , ಅರ್ಷದೀಪ್​ ಸಿಂಗ್.

ಪಂದ್ಯದ ವಿವರ

ಎಲ್ಲಿ ಪಂದ್ಯ | ವಾರ್ನರ್ ಪಾರ್ಕ್‌ ಸ್ಟೇಡಿಯಮ್ ಸೇಂಟ್ ಕಿಟ್ಸ್‌

ಆರಂಭ | ರಾತ್ರಿ ೯.೩೦ಕ್ಕೆ

ನೇರ ಪ್ರಸಾರ : ಫ್ಯಾನ್‌ಕೋಡ್‌ ಆಪ್‌ ಮತ್ತು ವೆಬ್‌ಸೈಟ್‌

Exit mobile version