Site icon Vistara News

IND vs WI T20 | ಮೆಕಾಯ್‌, ಕಿಂಗ್‌ ಭರ್ಜರಿ ಆಟ, ಭಾರತದ ವಿರುದ್ಧ ವೆಸ್ಟ್‌ಇಂಡೀಸ್‌ಗೆ 5 ವಿಕೆಟ್‌ ಜಯ

cricket

ಸೇಂಟ್‌ ಕಿಟ್ಸ್‌: ಒಬೆಡ್‌ ಮೆಕಾಯ್‌ ಅವರ ಜೀವನಶ್ರೇಷ್ಠ ಬೌಲಿಂಗ್‌ (೧೭ ರನ್‌ ನೀಡಿ ಆರು ವಿಕೆಟ್‌) ಮತ್ತು ಬ್ರಾಂಡನ್‌ ಕಿಂಗ್‌ ಅವರ ಸ್ಫೋಟಕ ಬ್ಯಾಟಿಂಗ್‌ (೫೨ ಎಸೆತಗಳಲ್ಲಿ ೬೮) ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡವು ಎರಡನೇ ಟಿ೨೦ ಪಂದ್ಯದಲ್ಲಿ (IND vs WI T20) ಟೀಮ್‌ ಇಂಟಿಯಾವನ್ನು ಐದು ವಿಕೆಟ್‌ಗಳಿಂದ ಸೋಲಿಸಿದೆ. ಭಾರತದ ೧೩೮ ರನ್‌ಗಳನ್ನು ಬೆನ್ನಟ್ಟಿದ ಕೆರೆಬಿಯನ್‌ ಟೀಮ್‌ ೧೯.೨ ಓವರ್‌ಗಳಲ್ಲಿ ೧೪೧ ರನ್‌ ಸಿಡಿಸಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದಂತಾಗಿದೆ. ಭಾರತ ಮೊದಲ ಟಿ೨೦ಯನ್ನು ಗೆದ್ದುಕೊಂಡಿತ್ತು.

೫೨ ಎಸೆತಗಳಿಗೆ ಸ್ಫೋಟಕ ೬೮ ರನ್‌ಗಳನ್ನು ಸಿಡಿಸಿದ ಬ್ರಾಂಡನ್‌ ಕಿಂಗ್‌ ಅವರು ವಿಂಡೀಸ್‌ ಗೆಲುವಿನ ರೂವಾರಿಯಾದರೆ, ಕೊನೆಯಲ್ಲಿ ಆಟವಾಡಿದ ಡೇವೊನ್‌ ಥಾಮಸ್‌ ೧೯ ಎಸೆತಗಳಿಗೆ ಅಜೇಯ ೩೧ ರನ್‌ ಬಾರಿಸಿ ವಿಜಯಲಕ್ಷ್ಮಿಯನ್ನು ತಮ್ಮ ತಂಡಕ್ಕೆ ತಂದು ಕೂರಿಸಿದರು. ಕೊನೆಯ ಓವರ್‌ನಲ್ಲಿ ವೆಸ್ಟ್‌ಇಂಡೀಸ್‌ಗೆ ಗೆಲ್ಲಲು ೧೦ ರನ್‌ ಅಗತ್ಯವಿತ್ತು. ಫ್ರೀ ಹಿಟ್‌ ಒಂದರಲ್ಲಿ ಥಾಮಸ್‌ ಸಿಕ್ಸರ್‌ ಸಿಡಿಸಿದರೆ, ಎರಡನೇ ಬಾಲ್‌ ಬೌಂಡರಿ ಗೆರೆಯನ್ನು ದಾಟಿತ್ತು. ಅಲ್ಲಿಗೆ ತಂಡದ ಮೊತ್ತ ೧೪೧. ಭಾರತ ೧೯.೪ ಓವರ್‌ಗಳಲ್ಲಿ ಆಲೌಟ್‌ ಆಗಿದ್ದರೆ ವಿಂಡೀಸ್‌ ೧೯.೨ ಓವರ್‌ನಲ್ಲಿ ಗೆಲುವು ಸಾಧಿಸಿತ್ತು. ಡೆವೋನ್‌ ಥಾಮಸ್‌ ಆಟ ಹೇಗಿತ್ತೆಂದರೆ, ಒಂದು ಹಂತದಲ್ಲಿ ೧೩ ಎಸೆತಕ್ಕೆ ೧೧ ರನ್‌ ಗಳಿಸಿದ್ದ ಅವರು, ಮುಂದಿನ ಆರು ಎಸೆತಗಳಲ್ಲಿ ೧೮ ರನ್‌ ಗಳಿಸಿದರು.

ರೋಹಿತ್‌ ಶರ್ಮಾ(೦), ಸೂರ್ಯಕುಮಾರ್‌ ಯಾದವ್‌(೧೧), ರವೀಂದ್ರ ಜಡೇಜಾ(೨೭), ದಿನೇಶ್‌ ಕಾರ್ತಿಕ್‌(೭), ಆರ್‌. ಅಶ್ವಿನ್‌ (೧೦), ಭುವನೇಶ್ವರ್‌ ಕುಮಾರ್‌ (೧) ಇವರು ಮೆಕಾಯ್‌ಗೆ ಬಲಿಯಾದ ಭಾರತದ ದಾಂಡಿಗರು. ೩೧ ರನ್‌ ಗಳಿಸಿದ ಹಾರ್ದಿಕ್‌ ಪಾಂಡ್ಯ ಅವರು ಗಳಿಸಿದ ೩೧ ರನ್‌ ಭಾರತದ ಗರಿಷ್ಠ ಸ್ಕೋರ್‌. ಅಂತಿಮವಾಗಿ ೧೯.೪ ಓವರ್‌ಗೆ ಭಾರತ ತನ್ನ ಇನ್ನಿಂಗ್ಸ್‌ ಮುಗಿಸಿತು.

ಮೆಕಾಯ್‌ ಮಾಸ್ಟರ್‌ ಸ್ಟ್ರೋಕ್
ಟ್ರಿನಿಡಾಡ್‌ ಮತ್ತು ಟೊಬ್ಯಾಗೋದಿಂದ ಬ್ಯಾಗೇಜ್‌ ಬಂದಿಲ್ಲ ಎಂಬ ಕಾರಣಕ್ಕೆ ಸುಮಾರು ಮೂರು ಗಂಟೆಗಳಷ್ಟು ವಿಳಂಬವಾದ ಈ ಪಂದ್ಯದಲ್ಲಿ ಭಾರತವನ್ನು ಬಿಟ್ಟೂ ಬಿಡದಂತೆ ಕಾಡಿದವರು ಒಬೆಡ್‌ ಮೆಕಾಯ್‌. ತಮ್ಮ ಮೊದಲ ಎಸೆತದಲ್ಲೇ ರೋಹಿತ್‌ ಶರ್ಮಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ ಇವರು ಅಂತಿಮವಾಗಿ ಆರು ಮಂದಿ ಭಾರತೀಯರ ವಿಕೆಟ್‌ಗಳನ್ನು ಉರುಳಿಸಿದರು. ಕೊಟ್ಟಿದ್ದು ಕೇವಲ ೧೭ ರನ್‌. ಅವರ ಫೈನಲ್‌ ಬೌಲಿಂಗ್‌ ಫಿಗರ್‌ ೪-೧-೧೭-೬. ಯಾವುದೇ ಟಿ೨೦ ಪಂದ್ಯದಲ್ಲಿ ಒಬ್ಬ ಬೌಲರ್‌ ಪಡೆದಿರುವ ಗರಿಷ್ಠ ವಿಕೆಟ್‌ ಎಂದರೆ ಆರು. ಆ ದಾಖಲೆಯನ್ನು ಮೆಕಾಯ್‌ ಸರಿಗಟ್ಟಿದರು.

ಕಿಂಗ್‌ ಆದ ಬ್ರಾಂಡನ್‌
೧೩೯ ರನ್‌ಗಳನ್ನು ಬೆನ್ನಟ್ಟಿದ ವಿಂಡೀಸ್‌ಗೆ ಆರಂಭದಿಂದಲೇ ಆಸರೆಯಾದ ಬ್ರಾಂಡನ್‌ ಕಿಂಗ್‌ ಕೇವಲ ೫೨ ಓವರ್‌ಗಳಲ್ಲಿ ೬೮ ರನ್‌ ಸಿಡಿಸಿ ದೊಡ್ಡ ಅಡಿಪಾಯ ಹಾಕಿದರು. ಮುಂದೆ ಯಾರೂ ದೊಡ್ಡ ಮೊತ್ತದ ಆಟ ಆಡಲಿಲ್ಲ. ಗುರಿಯೇ ಕಡಿಮೆ ಇದ್ದುದರಿಂದ ಅದೇನೂ ಸಮಸ್ಯೆ ಆಗಲಿಲ್ಲ. ಕೈಲ್‌ ಮೇಯರ್ಸ್‌ (೮), ನಿಕೋಲಸ್‌ ಪೂರನ್‌ (೧೪), ಶಿಮ್ರಾನ್‌ ಹೆಟ್ಮೇರ್‌ (೬), ರೋಮನ್‌ ಪಾವೆಲ್‌(೫) ಔಟಾದ ಬಳಿಕ ಅಂತಿಮವಾಗಿ ಡೆವಾನ್‌ ಥಾಮಸ್‌ ರಾಕ್ಷಸ ಆಟ ಆಡಿ ವಿಂಡೀಸನ್ನು ಗೆಲ್ಲಿಸಿದರು. ೧೯ ಎಸೆತಗಳಲ್ಲಿ ೩೧ ರನ್‌ ಗಳಿಸಿದ ಅವರ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌, ಒಂದು ಬೌಂಡರಿ ಇತ್ತು. ಭಾರತದ ಪರವಾಗಿ ಅರ್ಶದೀಪ್‌ ಸಿಂಗ್‌, ಜಡೇಜಾ, ಆರ್‌.ಅಶ್ವಿನ್‌, ಹಾರ್ದಿಕ್‌ ಪಾಂಡ್ಯ, ಆವೇಶ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌
ಭಾರತ-೧೩೮/೧೦(೧೯.೪ ಓವರ್‌)
ಹಾರ್ದಿಕ್‌ ಪಾಂಡ್ಯ ೩೧, ರವೀಂದ್ರ ಜಡೇಜಾ(೨೭)
ಓಬೆಡ್‌ ಮೆಕಾಯ್‌ ೬/೧೭, ಜೇಸನ್‌ ಹೋಲ್ಡರ್‌ ೨/೨೩
ವೆಸ್ಟ್‌ ಇಂಡೀಸ್‌-೧೪೧/೫ (೧೯.೨ ಓವರ್‌)
ಬ್ರಾಂಡನ್‌ ಕಿಂಗ್‌ ೬೮, ಒಬೆಡ್‌ ಥಾಮಸ್‌ ೩೧
ರವೀಂದ್ರ ಜಡೇಜಾ ೧/೧೬, ಪಾಂಡ್ಯ ೨೨/೧

Exit mobile version