ಬಾರ್ಬಡೋಸ್: ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋಲುವ ಮೂಲಕ ವೆಸ್ಟ್ ಇಂಡೀಸ್ ತಂಡ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವ ರೇಸ್‌ನಿಂದ ಹೊರಬಿದ್ದಿತ್ತು. ಈ ಮೂಲಕ 1975 ಮತ್ತು 1979ರ ಚಾಂಪಿಯನ್ ವಿಂಡೀಸ್ 48 ವರ್ಷಗಳ ಪಂದ್ಯಾವಳಿಯ ಇತಿಹಾಸದಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಗ್ರ 10 ತಂಡಗಳಲ್ಲಿ ಕಾಣಿಸಿಕೊಳ್ಳದ ಸಂಕಟಕ್ಕೆ ಸಿಲುಕಿತ್ತು. ಇದೀಗ ಈ ನೋವಿನಲ್ಲೇ ಭಾರತ ವಿರುದ್ಧ ಏಕದಿನ ಸರಣಿಯನ್ನು ಆಡಲು ಸಜ್ಜಾಗಿದೆ. ಉಭಯ ತಂಡಗಳ ಏಕದಿನ ಕ್ರಿಕೆಟ್ ಸರಣಿಯ(India vs West Indies ODI Records) ಇತಿಹಾಸದ ಮೆಲುಕು ನೋಟ ಇಂತಿದೆ.
ಮೊದಲ ಏಕದಿನ ಸರಣಿ
ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಸರಣಿ ನಡೆದದ್ದು 1982/83ರಲ್ಲಿ. 3 ಪಂದ್ಯಗಳ ಸರಣಿ ಇದಾಗಿತ್ತು. ಇಲ್ಲಿ ವಿಂಡೀಸ್ 2-1 ಅಂತರದಿಂದ ಭಾರತಕ್ಕೆ ಆಘಾತವಿಕ್ಕಿತು. ಇದಾದ ಬಳಿಕ ನಾಲ್ಕು ಏಕದಿನ ಸರಣಿ ನಡೆದಿತ್ತು. ಎಲ್ಲ ಸರಣಿಯಲ್ಲೂ ವಿಂಡೀಸ್ ಗೆಲುವು ದಾಖಲಿಸಿತ್ತು. ಭಾರತ ತಂಡ ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಮೊದಲ ವಿಜಯ ಪತಾಕೆ ಹಾರಿಸಿದ್ದು 1994 ರಲ್ಲಿ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ (4-1)ಅಂತರದಲ್ಲಿ ಗೆದ್ದು ಬೀಗಿತ್ತು. ಇದಾದ ಬಳಿಕ ಭಾರತ ತನ್ನ ಗೆಲುವಿನ ಓಟ ಮುಂದುವರಿಸಿ ಪ್ರಾಬಲ್ಯ ಮರೆಯಿತು. 2006ರಲ್ಲಿ ಭಾರತ ವಿರುದ್ಧ ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ ಏಕದಿನ ಸರಣಿ ಗೆಲುವು ಸಾಧಿಸಿತ್ತು. ಇಲ್ಲಿಂದ ಮೇಲೆ ಒಂದೂ ಸರಣಿಯನ್ನು ಗೆದ್ದಿಲ್ಲ.
ಇದನ್ನೂ ಓದಿ IND vs WI ODI: ಭಾರತ-ವಿಂಡೀಸ್ ಏಕದಿನ ಪಂದ್ಯದ ಪಿಚ್ ರಿಪೋರ್ಟ್,ಹವಾಮಾನ ವರದಿ, ಸಂಭಾವ್ಯ ತಂಡ
ಮುಖಾಮುಖಿ
ವೆಸ್ಟ್ ಇಂಡೀಸ್ ಮತ್ತು ಭಾರತ ಇದುವರೆಗೆ 23 ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿವೆ. ಭಾರತ 15 ಸರಣಿಯಲ್ಲಿ ಗೆಲುವು ಸಾಧಿಸಿದರೆ, ವೆಸ್ಟ್ ಇಂಡೀಸ್ 8 ಸರಣಿಯಲ್ಲಿ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವೆ ಕಳೆದ ವರ್ಷ ಮೂರು ಪಂದ್ಯಗಳ ಸರಣಿಯಲ್ಲಿ ವಿಂಡೀಸ್ ಕ್ಲೀನ್ಸ್ವಿಪ್ ಮುಖಭಂಗ ಎದುರಿಸಿತ್ತು. ಈ ಬಾರಿ ತವರಿನಲ್ಲಿ ಗೆಲುವು ಸಾಧಿಸಿತೇ ಎಂದು ಕಾದು ನೋಡಬೇಕಿದೆ.
ಯಾವತ್ತು ಭಾರತ ತಂಡ 1983ರಲ್ಲಿ ವಿಂಡೀಸ್ ತಂಡವನ್ನು ವಿಶ್ವ ಕಪ್ ಫೈನಲ್ನಲ್ಲಿ ಮಣಿಸಿ ಕಪ್ ಎತ್ತಿತ್ತೋ ಅಲ್ಲಿಂದ ವಿಂಡೀಸ್ ಪತನವೂ ಆರಂಭವಾಯಿತು. ಅಲ್ಲಿಂದ ಮೇಲೆ ವಿಂಡೀಸ್ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಚಾರ್ಮ್ ಕಳೆದುಕೊಳ್ಳುತ್ತಲೇ ಸಾಗಿತು.