Site icon Vistara News

IND VS ZIM | ರಾಹುಲ್​, ಸೂರ್ಯ ಬ್ಯಾಟಿಂಗ್​ ಪ್ರತಾಪ, ಜಿಂಬಾಬ್ವೆ ಗೆಲುವಿಗೆ 187 ರನ್​ ಸವಾಲು

t20

ಮೆಲ್ಬೋರ್ನ್​: ಕನ್ನಡಿಗ ಕೆ.ಎಲ್​. ರಾಹುಲ್​(51) ಮತ್ತು ಸೂರ್ಯಕುಮಾರ್​(ಅಜೇಯ 61 ) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಟಿ೨೦ ವಿಶ್ವ ಕಪ್‌ನ ಲೀಗ್​ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 186 ರನ್‌ ಬಾರಿಸಿದೆ. ಈ ಮೂಲಕ ಜಿಂಬಾಬ್ವೆ ತಂಡವು 187 ರನ್‌ಗಳ ಗೆಲುವಿನ ಗುರಿಯನ್ನು ಪಡೆದುಕೊಂಡಿದೆ.

ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 186 ರನ್​ ಪೇರಿಸಿ ಜಿಂಬಾಬ್ವೆ ತಂಡಕ್ಕೆ ಸವಾಲೊಡ್ಡಿದೆ. ಜಿಂಬಾಬ್ವೆ ಪರ ಸೇನ್​ ವಿಲಿಯಮ್ಸನ್​ 9 ರನ್​ಗೆ 2 ವಿಕೆಟ್​ ಕಿತ್ತು ಭಾರತೀಯ ಬ್ಯಾಟರ್​ಗಳನ್ನು ಕಾಡಿದರು.

ರಾಹುಲ್​ ಅರ್ಧಶತಕ

ಬಾಂಗ್ಲಾದೇಶದ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ್ದ ಕೆ.ಎಲ್​. ರಾಹುಲ್​ ಬ್ಯಾಟಿಂಗ್​ ಪ್ರದರ್ಶನ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಆರಂಭಿಕ ವಿಕೆಟ್​ಗೆ ನಾಯಕ ರೋಹಿತ್​ ಜತೆಗೂಡಿ ತಂಡಕ್ಕೆ 27 ರನ್​ ಒಟ್ಟುಗೂಡಿಸಿದ ಅವರು ಬಳಿಕ ವಿರಾಟ್​ ಕೊಹ್ಲಿ ಜತೆ ದ್ವಿತೀಯ ವಿಕೆಟ್​ಗೆ 60 ರನ್​ ಜತೆಯಾಟ ನಡೆಸಿ ತಂಡಕ್ಕೆ ನೆರವಾದರು. ಆರಂಭದಲ್ಲಿ ಕೊಂಚ ನಿಧಾನಗತಿಯ ಬ್ಯಾಟಿಂಗ್​ಗೆ ಮುಂದಾದ ರಾಹುಲ್​ ನಾಲ್ಕು ಎಸೆತದ ಬಳಿಕ ರನ್​ ಖಾತೆ ತೆರೆದರು. ಬಳಿಕ ಬಿರುಸಿನ ಆಟಕ್ಕೆ ಮುಂದಾಗಿ 35 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್​ ನೆರವಿನಿಂದ 51 ರನ್​ ಗಳಿಸಿದರು. ಉಳಿದಂತೆ ವಿರಾಟ್​ ಕೊಹ್ಲಿ 25 ಎಸೆತದಿಂದ 26 ರನ್​ ಬಾರಿಸಿದರು. ಕಳೆದ ಪಂದ್ಯಕ್ಕೆ ಹೋಲಿಕೆ ಮಾಡಿದರೆ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ನಿಧಾನ ಗತಿಯ ಆಟವಾಡಿದ್ದು ಕಂಡುಬಂತು. ಎಸೆತಕ್ಕೆ ಒಂದರಂತೆ ರನ್​ ಗಳಿಸಿದರು. ಒಟ್ಟಾರೆ ಕೊಹ್ಲಿ ಈ ಪಂದ್ಯದಲ್ಲಿ 2 ಬೌಂಡರಿ ಮಾತ್ರ ಸಿಡಿಸಿದರು.

ಸೂರ್ಯಕುಮಾರ್​ ಯಾದವ್​ ಪತ್ರಿ ಪಂದ್ಯದಂತೆ ಈ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ವಿರಾಟ್​ ಕೊಹ್ಲಿ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಬಂದ ಅವರು ಸಿಕ್ಸರ್​ ಮತ್ತು ಬೌಂಡರಿ ಮೂಲಕ ಜಿಂಬಾಬ್ಬೆ ಬೌಲರ್​ಗಳನ್ನು ಮನಬಂದಂತೆ ಡಂಡಿಸಿದರು. ಒಟ್ಟು 25 ಎಸೆತ ಎದುರಿಸಿ ಅಜೇಯ 61 ರನ್​ ಬಾರಿಸಿದರು. ಈ ಸೊಗಸಾದ ಇನಿಂಗ್ಸ್​ ವೇಳೆ 6 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಿತು. ಉಳಿದಂತೆ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ 18 ರನ್​ ಗಳಿಸಿದರು.

ರೋಹಿತ್​ ಮತ್ತೆ ವಿಫಲ

ಭಾರತ ತಂಡದ ನಾಯಕ ರೋಹಿತ್​ ಶರ್ಮ ಈ ಪಂದ್ಯದಲ್ಲಿಯೂ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದರು. 13 ಎಸೆತದಲ್ಲಿ 15 ರನ್​ಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಬ್ಲೆಸಿಂಗ್ ಮುಜರಬಾನಿ ಪಾಲಾಯಿತು. ದಿನೇಶ್​ ಕಾರ್ತಿಕ್​ ಬದಲು ಆಡಲಿಳಿದ ರಿಷಭ್​ ಪಂತ್​ ಕೇವಲ ಮೂರು ರನ್​ಗೆ ಔಟಾದರು. ಈ ಮೂಲಕ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು.

ಸಂಕ್ಷಿಪ್ತ ಸ್ಕೋರ್​:

ಭಾರತ: 20 ಓವರ್​ಗಳಲ್ಲಿ 5 ವಿಕೆಟ್​ಗೆ 186 (ರಾಹುಲ್​ 51, ಸೂರ್ಯಕುಮಾರ್​ ಅಜೇಯ 61, ವಿರಾಟ್​ ಕೊಹ್ಲಿ 26, ಸೇನ್​ ವಿಲಿಯಮ್ಸನ್​ 9ಕ್ಕೆ 2)

ಇದನ್ನೂ ಓದಿ | T20 World Cup | ನೆದರ್ಲೆಂಡ್ಸ್​ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸೋಲು; ಸೆಮಿಫೈನಲ್​ ಪ್ರವೇಶಿಸಿದ ಭಾರತ

Exit mobile version