ಪ್ಯಾರಿಸ್‌ನಲ್ಲಿ ಆರಂಭವಾಗಿರುವ ಒಲಿಂಪಿಕ್ಸ್‌ನಲ್ಲಿ (paris olympics 2024) ಸರಬ್ಜೋತ್ ಸಿಂಗ್ (Bronze Medalist Sarabjot Singh), ಮನು ಭಾಕರ್ (Bronze Medalist Manu Bhaker) ಮತ್ತು ಸ್ವಪ್ನಿಲ್ ಈಗಾಗಲೇ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಹಾಗೆ ನೋಡಿದರೆ ಸ್ವಾತಂತ್ರ್ಯ ಪೂರ್ವವೇ ನಮ್ಮ ಕ್ರೀಡಾಪಟುಗಳು ಬಂಗಾರದ ಸಾಧನೆ ಮಾಡಿದ್ದರು. ಸ್ವತಂತ್ರ ಭಾರತದಲ್ಲಿ (Independence Day 2024) ನಮ್ಮ ಕ್ರೀಡಾಪಟುಗಳ ಸಾಧನೆಯೂ ಗಮನಾರ್ಹ. ಆದರೆ ತೀರಾ ಆಶಾದಾಯಕವೇನೂ ಅಲ್ಲ. ಭಾರತ ಒಲಿಂಪಿಕ್ ಇತಿಹಾಸದಲ್ಲಿ ಇದುವರೆಗೆ 10 ಚಿನ್ನದ ಪದಕಗಳು ಸೇರಿ ಒಟ್ಟು 35 ಪದಕಗಳನ್ನು ಗೆದ್ದಿದೆ. ಆ ಸುವರ್ಣ ಕ್ಷಣ ಯಾವುದು, ಹೇಗಿತ್ತು ಎನ್ನುವ ಕುರಿತು ಮಾಹಿತಿ ಇಲ್ಲಿದೆ. ವಿಶೇಷವೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ, ಹಾಲಿ ಹಾಕಿ ಚಾಂಪಿಯನ್ ಆಗಿದ್ದ ಗ್ರೇಟ್ ಬ್ರಿಟನ್ 1928, 1932 ಮತ್ತು 1936ರಲ್ಲಿ ಧ್ಯಾನ್ ಚಂದ್ ನೇತೃತ್ವದ ಭಾರತೀಯ ಹಾಕಿ ತಂಡದ ಎದುರು ಸೋತು ಅವಮಾನ ಅನುಭವಿಸುವ ಭಯದಿಂದ ತನ್ನ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಲಿಲ್ಲ! ತನ್ನ ವಸಾಹತು ದೇಶವಾದ ಭಾರತದ ಎದುರು ಸೋತರೆ ಪ್ರತಿಷ್ಠೆಗೆ ಧಕ್ಕೆ ಆಗುತ್ತದೆ ಎನ್ನುವುದು ಬ್ರಿಟಿಷರ ಲೆಕ್ಕಾಚಾರವಾಗಿತ್ತು. ಕೊನೆಗೆ 1948ರ ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ಭಾರತದ ಎದುರು ಬ್ರಿಟನ್ ತನ್ನ ತಂಡವನ್ನು ಕಳುಹಿಸಿತು. ಆದರೆ ಈ ಕೂಟದಲ್ಲಿ ಭಾರತೀಯ ತಂಡವು ಗ್ರೇಟ್ ಬ್ರಿಟನ್ ತಂಡವನ್ನು ಹೀನಾಯವಾಗಿ ಸೋಲಿಸಿ ಚಾಂಪಿಯನ್ ಆಯಿತು! 1928ರಲ್ಲಿ ಮೊದಲ ಬಾರಿ ಭಾರತೀಯ ಹಾಕಿ ತಂಡ ಮೊದಲ ಬಾರಿ ಒಲಿಂಪಿಕ್ಸ್ ಪ್ರವೇಶಿಸಿತ್ತು. ಗಮನಾರ್ಹ ಸಂಗತಿ ಎಂದರೆ ಈಗ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯ ಹಾಕಿ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‌ನನ್ನು ರೋಚಕವಾಗಿ ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಹಾಕಿದೆ.
ಜಾಗತಿಕ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೂ ಹೆಚ್ಚಿನ ಪದಕ ಗೆದ್ದಿಲ್ಲ. ಆದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆಯನ್ನು ಭಾರತ ತಂಡ ಇನ್ನೂ ಉಳಿಸಿಕೊಂಡಿದೆ.
1928ರಲ್ಲಿ ಮೊದಲ ಚಿನ್ನ
1928ರಲ್ಲಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಹಾಕಿ ಸ್ವರ್ಣ ಯುಗ ಆರಂಭವಾಯಿತು. ಮುಂದೆ ಮೂರು ದಶಕಗಳ ಕಾಲ ಇದು ಮುಂದುವರಿಯಿತು. ಹಾಲೆಂಡ್ ತಂಡವನ್ನು 6-0 ಅಂತರದಿಂದ ಸೋಲಿಸುವ ಮೂಲಕ ಭಾರತೀಯರು ಹಾಕಿಯಲ್ಲಿ ಚೊಚ್ಚಲ ಒಲಿಂಪಿಕ್ ಚಿನ್ನ ಗೆದ್ದರು. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತ ಬಾರಿಸಿದ 29 ಗೋಲುಗಳಲ್ಲಿ 14 ಗೋಲುಗಳನ್ನು ಧ್ಯಾನ್ ಚಂದ್ ಅವರೇ ಹೊಡೆದಿದ್ದರು. ಈ ಒಲಿಂಪಿಕ್‌ಗೆ ಗ್ರೇಟ್ ಬ್ರಿಟನ್ ತನ್ನ ಹಾಕಿ ತಂಡವನ್ನು ಕಳುಹಿಸರಲಿಲ್ಲ. ಏಕೆಂದರೆ ಒಲಿಂಪಿಕ್ಸ್‌ಗೆ ಸ್ವಲ್ಪ ಮೊದಲು ಗ್ರೇಟ್ ಬ್ರಿಟನ್ ಭಾರತದ ಎದುರು 4-0 ಅಂತರದಿಂದ ಸೋಲಿಸಲ್ಪಟ್ಟಿತು. ಇದು ‘ವಸಾಹತುಶಾಹಿಗಳು’ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ‘ವಸಾಹತು’ವನ್ನು ಕಳೆದುಕೊಳ್ಳುವ ಭಯದಲ್ಲಿದೆ ಎಂಬ ಚರ್ಚೆ ಹುಟ್ಟು ಹಾಕಿತ್ತು. ಈ ಮುಜುಗರವೇ ಬೇಡ ಎಂದು ಗ್ರೇಟ್ ಬ್ರಿಟನ್ ಹಾಕಿ ತಂಡವನ್ನೇ ಕಳುಹಿಸಿರಲಿಲ್ಲ ಎನ್ನಲಾಗುತ್ತದೆ!
1932ರಲ್ಲಿ ಎರಡನೇ ಪದಕ
1928ರಲ್ಲಿ ಭಾರತ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಮಾತ್ರ ಲಾಸ್ ಏಂಜಲೀಸ್ ಕ್ರೀಡಾಕೂಟದಲ್ಲಿ ಹಾಕಿ ಗೌರವಕ್ಕಾಗಿ ಪ್ರವೇಶ ಪಡೆಯಿತು. ಇದರಲ್ಲಿ ಭಾರತೀಯರು ಜಪಾನ್ ಅನ್ನು 11- 1ರಿಂದ ಸೋಲಿಸಿ ಬಳಿಕ ಯುನೈಟೆಡ್ ಸ್ಟೇಟ್ ಅನ್ನು 24- 1ರಿಂದ ಪರಾಭವಗೊಳಿಸಿ ಮತ್ತೊಂದು ಚಿನ್ನದ ಪದಕವನ್ನು ಮಡಿಲಿಗೆ ಹಾಕಿಕೊಂಡಿತ್ತು.
1936ರಲ್ಲಿ ಗೋಲ್ಡನ್ ಹ್ಯಾಟ್ರಿಕ್
1928 ಮತ್ತು 1932ರಲ್ಲಿ ಹಾಕಿ ಜಗತ್ತನ್ನು ಭಾರತ ಸಮಗ್ರವಾಗಿ ಗೆದ್ದಿದ್ದರೂ, 1936ರಲ್ಲಿ ಬರ್ಲಿನ್ ಕ್ರೀಡಾಕೂಟ ವಿಶೇಷವಾಗಿತ್ತು. ಧ್ಯಾನ್ ಚಂದ್ ನೇತೃತ್ವದಲ್ಲಿ ಭಾರತೀಯರು ಆ ಬಾರಿಯೂ ಸವಾಲನ್ನು ಎದುರಿಸಿದರು. ಜರ್ಮನಿಯನ್ನು 8-1ರಿಂದ ಸೋಲಿಸಿ ಸತತ ಮೂರನೇ ಒಲಿಂಪಿಕ್ ಚಿನ್ನವನ್ನು ಗೆದ್ದರು.
1948ರಲ್ಲಿ ಸ್ವತಂತ್ರ ಭಾರತದ ಮೊದಲ ಚಿನ್ನ
ಭಾರತವು ವಸಾಹತುಶಾಹಿಯಾಗಿ ಉಳಿಯುವವರೆಗೂ ಒಲಿಂಪಿಕ್ ಹಾಕಿಯಿಂದ ದೂರ ಉಳಿದಿದ್ದ ಗ್ರೇಟ್ ಬ್ರಿಟನ್ ಸ್ವತಂತ್ರ ಭಾರತವನ್ನು ಎದುರಿಸಲು ಸಜ್ಜಾಯಿತು. ಈ ಸಂದರ್ಭದಲ್ಲೂ ಭಾರತವು ಬ್ರಿಟಿಷರನ್ನು 4-0 ಗೋಲುಗಳಿಂದ ಸೋಲಿಸಿ ಹಾಕಿ ಯುದ್ಧವನ್ನು ಗೆದ್ದಿತು. ಕೆಸರುಮಯವಾದ ಟರ್ಫ್ ಮತ್ತು ಹಗುರವಾದ ಮಳೆಯ ಕಾರಣದಿಂದ ಈ ಆಟ ಸಾಕಷ್ಟು ಕಠಿಣ ಸವಾಲನ್ನು ಒಡ್ಡಿತ್ತು. ಆದರೂ ಭಾರತೀಯರು ತಮ್ಮ ಅತ್ಯುತ್ತಮ ಚೆಂಡಿನ ನಿಯಂತ್ರಣ, ನಿಖರವಾದ ಪಾಸಿಂಗ್ ಮತ್ತು ಬುದ್ಧಿವಂತ ಆಟದಿಂದ ಬ್ರಿಟಿಷ್ ತಂಡವನ್ನು ಸೋಲಿಸಿ ಚಾರಿತ್ರಿಕ ಜಯ ದಾಖಲಿಸಿತು.
1952ರಲ್ಲಿ ಬಲ್ಬೀರ್ ಮ್ಯಾಜಿಕ್
ಹಾಲೆಂಡ್ ವಿರುದ್ಧದ 1952ರ ಹಾಕಿ ಫೈನಲ್ ಎರಡು ಕಾರಣಗಳಿಗಾಗಿ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಮೊದಲನೆಯದಾಗಿ ಮಳೆಯು ನೆಲವನ್ನು ತೇವಗೊಳಿಸಿದ್ದು ಮಾತ್ರವಲ್ಲ ಹೆಚ್ಚು ಜಾರುವಂತೆ ಮಾಡಿತ್ತು. ಪರಿಸ್ಥಿತಿಗಳು ಭಾರತೀಯರಿಗಿಂತ ಡಚ್ಚರಿಗೆ ಹೆಚ್ಚು ಅನುಕೂಲಕರವೆಂದು ನಿರೀಕ್ಷಿಸಲಾಗಿತ್ತು. ಎರಡನೆಯದಾಗಿ ಭಾರತೀಯರು ಬಲ್ಬೀರ್ ಸಿಂಗ್ ಸೀನಿಯರ್ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಆದರೆ ಭಾರತೀಯರು ಫೈನಲ್‌ನಲ್ಲಿ 3- 1ರಿಂದ ಹಾಲೆಂಡ್ ಅನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಬಲ್ಬೀರ್ ಸಿಂಗ್ ಸೀನಿಯರ್ ಮತ್ತೊಮ್ಮೆ ತಾರೆಯಾದರು. 13 ಭಾರತೀಯ ಗೋಲುಗಳಲ್ಲಿ 9 ಗೋಲುಗಳನ್ನು ಅವರೇ ಹೊಡೆದಿದ್ದರು.
ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಪದಕ ಜಯಿಸಿದ್ದು 1952ರಲ್ಲಿ. ಮಹಾರಾಷ್ಟ್ರದ ಖಾಸಾಬಾ ದಾದಾ ಸಾಹೆಬ್ ಜಾಧವ್ ಕುಸ್ತಿಯ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಗೆದ್ದ ಮೊದಲ ಪದಕ ಇದಾಗಿತ್ತು.
1956ರಲ್ಲಿ ಐದನೇ ಚಿನ್ನ
ಮೆಲ್ಬೋರ್ನ್‌ನಲ್ಲಿ ನಡೆದ ಫೈನಲ್ ಪಂದ್ಯವು ಪಾಕಿಸ್ತಾನದ ವಿರುದ್ಧ ಒಲಿಂಪಿಕ್ ಹಂತದಲ್ಲಿ ಭಾರತದ ಮೊದಲ ಕೂಟವಾಗಿತ್ತು. ಎರಡೂ ತಂಡಗಳ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಯ ತೂಗುಕತ್ತಿ ತೂಗುತ್ತಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಬೆಳ್ಳಿ ಪದಕ ಗೆದ್ದು ಬೀಗಿದರೆ, ಭಾರತವು 1-0 ಗೋಲುಗಳ ಕಿರಿದಾದ ಅಂತರದಿಂದ ಚಿನ್ನವನ್ನು ಗೆದ್ದುಕೊಂಡಿತ್ತು.
1964ರಲ್ಲಿ ಮರಳಿ ಚಿನ್ನ
ಭಾರತವು ಪಾಕಿಸ್ತಾನವನ್ನು 1-0 ಗೋಲುಗಳಿಂದ ಸೋಲಿಸುವ ಮೂಲಕ ವಿಶ್ವ ಹಾಕಿಯಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಿತು. ಎರಡು ಉತ್ತಮ ತಂಡಗಳು ಗೆಲ್ಲಲು ಸಾಕಷ್ಟು ಪರಿಶ್ರಮ ಪಟ್ಟಿತು. ಭಾರತವು ಅಂತಿಮವಾಗಿ ಕಡಿಮೆ ಅಂತರದಿಂದ ವಿಜಯಿಯಾಯಿತು.
1980ರಲ್ಲಿ ಕೊನೆಯ ಹಾಕಿ ಚಿನ್ನ
ಭಾರತ 16 ವರ್ಷಗಳ ಅನಂತರ ಮಾಸ್ಕೋದಲ್ಲಿ 4– 3 ಗೋಲುಗಳಿಂದ ಸ್ಪೇನ್ ಅನ್ನು ಸೋಲಿಸಿ ಚಿನ್ನವನ್ನು ಗೆದ್ದುಕೊಂಡಿತು. ಆದರೆ ಇದು ಒಲಂಪಿಕ್ ಹಾಕಿಯಲ್ಲಿ ಭಾರತದ ಕೊನೆಯ ಚಿನ್ನದ ಪದಕವಾಯಿತು.
1996ರಲ್ಲಿ ಟೆನಿಸ್ನಲ್ಲಿ ಮೊದಲ ಪದಕ
1996ರಲ್ಲಿ ಅಮೆರಿಕದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಏಕೈಕ ಕಂಚಿನ ಪದಕ ಜಯಿಸಿತ್ತು. ಲಿಯಾಂಡರ್ ಪೇಸ್ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಕಂಚು ಜಯಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ 44 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಪದಕ ಇದಾಗಿತ್ತು. ಇಲ್ಲಿ ಲಿಯಾಂಡರ್ ಪೇಸ್ ಬ್ರೆಜಿಲ್‌ನ ಫೆರ್ನಾಂಡೊ ಮೆಲಿಗಿನಿ ಅವರನ್ನು ಮಣಿಸಿ ಪದಕಕ್ಕೆ ಕೊರಳೊಡ್ಡಿದ್ದರು.
2000ರಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ
2000ದಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಂಧ್ರ ಪ್ರದೇಶ ಮೂಲದ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು. 69 ಕೆಜಿ ವಿಭಾಗದಲ್ಲಿ ಮಲ್ಲೇಶ್ವರಿ ಈ ಸಾಧನೆ ಮಾಡಿದ್ದರು.
2004ರಲ್ಲಿ ಒಂದು ಪದಕ
2004ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಏಕೈಕ ಪದಕ ಮಾತ್ರ ಲಭಿಸಿತು. ರಾಜಸ್ಥಾನದ ಶೂಟರ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಪುರುಷರ ಡಬಲ್ ಟ್ರಾಯಪ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಗುರಿ ಇರಿಸಿ ಈ ಪದಕ ತಂದುಕೊಟ್ಟಿದ್ದರು. ಈ ಸಾಧನೆಯೊಂದಿಗೆ ವೈಯಕ್ತಿಕ ವಿಭಾಗದಲ್ಲಿ ರಜತ ಗೆದ್ದ ಮೊದಲ ಭಾರತೀಯರೆನಿಸಿದರು.
2008ರಲ್ಲಿ ಮೊದಲ ವೈಯಕ್ತಿಕ ಚಿನ್ನ
ಖಾಸಾಬಾ ದಾದಾ ಸಾಹೇಬ್ ಜಾಧವ್ ಬಳಿಕ 2008ರ ಚೀನದ ಬೀಜಿಂಗ್ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ವೈಯಕ್ತಿಕ ಚಿನ್ನದ ಕನಸು ನನಸು ಮಾಡಿದರು. ಬಿಂದ್ರಾ ಅವರ ಸಾಧನೆ ರಾತ್ರೋರಾತ್ರಿ ಅವರನ್ನು ದೇಶಾದ್ಯಂತ ಪ್ರಸಿದ್ಧರನ್ನಾಗಿ ಮಾಡಿತು.
ಒಲಿಂಪಿಕ್ಸ್ ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಕೂಟ ಇದಾಗಿದೆ. ಸ್ವತಂತ್ರ ಭಾರತದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ವರ್ಣ ಸಾಧನೆ ಮಾಡಿದ್ದು ಇದೇ ಕೂಟದಲ್ಲಿ. ಅಲ್ಲದೆ ಮೊಟ್ಟ ಮೊದಲ ಬಾರಿಗೆ ಒಂದೇ ಕೂಟದಲ್ಲಿ 3 ಪದಕಗಳು ಭಾರತದ ಪಾಲಾಗಿದ್ದವು.
ಅಭಿನವ್ ಬಿಂದ್ರ 10 ಮೀ. ಏರ್ ರೈಫಲ್‌ನಲ್ಲಿ ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ್ದರು. ಕುಸ್ತಿಪಟು ಸುಸೀಲ್ ಕುಮಾರ್ ಪುರುಷರ ಕುಸ್ತಿಯ 75 ಕೆಜಿ ವಿಭಾಗದಲ್ಲಿ ಕಂಚು ಗೆದ್ದರೆಮ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್ 66 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು.
2012ರಲ್ಲಿ ಆರು ಪದಕ
ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಅಮೋಘ ಸಾಧನೆಯೊಂದನ್ನು ಮಾಡಿತು. ಶೂಟಿಂಗ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಕ್ಷೇತ್ರಕ್ಕೆ ಹೊಸ ಆಯಾಮ ಸೃಷ್ಟಿಸಿದ ಕೂಟ ಇದಾಗಿತ್ತು. 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಭಾರತದ ಪಾಲಾದವು. ಶೂಟಿಂಗ್‌ನಲ್ಲಿ ವಿಜಯ್ ಕುಮಾರ್ 25 ಮೀ. ರ್ಯಾಪಿಟ್ ಫೈರ್ ಪಿಸ್ತೂಲ್‌ನಲ್ಲಿ ಬೆಳ್ಳಿ ಗೆದ್ದರೆ, ಸುಶೀಲ್ ಕುಮಾರ್ ಪುರುಷರ 66 ಕೆಜಿ ಫ್ರೀ ಸ್ಟೈಲ್‌ನಲ್ಲಿ ರಜತ ಸಾಧನೆಯೊಂದಿಗೆ ಸತತ 2ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದರು. ಮತ್ತೊಬ್ಬ ಶೂಟರ್ ಗಗನ್ ನಾರಂಗ್ (10 ಮೀ ಏರ್ ರೈಫಲ್), ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಬಾಕ್ಸರ್ ಮೇರಿ ಕೋಮ್ ಹಾಗೂ ಮತ್ತೊಬ್ಬ ಕುಸ್ತಿಪಟು ಯೋಗೇಶ್ವರ್ ದತ್ ಕಂಚಿನ ಪದಕ ಜಯಿಸಿದರು.
2016ರಲ್ಲಿ ಬೆಳ್ಳಿ, ಕಂಚು
ಲಂಡನ್‌ನಲ್ಲಿ ಅರ್ಧ ಡಜನ್ ಪದಕ ಗೆದ್ದಿದ್ದ ಭಾರತದ ಕ್ರೀಡಾಪಟುಗಳ ಮೇಲೆ ರಿಯೋ ಒಲಿಂಪಿಕ್ಸ್‌ನಲ್ಲಿ ಅಪಾರ ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಎಲ್ಲ ನಿರೀಕ್ಷೆ ಹುಸಿಗೊಂಡಿತು.
ಭಾರತ ಕೇವಲ 2 ಪದಕಕ್ಕೆ ಮಾತ್ರ ಸೀಮಿತವಾಯಿತು. ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಕೊನೆಯ ಹಂತದಲ್ಲಿ ಎಡವಿ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಆದರೆ, ಸಿಂಧು ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಶಟ್ಲರ್ ಎನಿಸಿಕೊಂಡರು. ಇತ್ತೀಚೆಗೆ ಕುಸ್ತಿಗೆ ನಿವೃತ್ತಿ ಹೇಳಿದ್ದ ಸಾಕ್ಷಿ ಮಲಿಕ್ ಕೂಡ ಈ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.
2021ರಲ್ಲಿ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಚಿನ್ನ
ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಹಲವು ಕಟ್ಟುಪಾಡುಗಳ ನಡುವೆ ಜಪಾನ್ನ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಕ್ರೀಡಾ ಕೂಟದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು.
ಇದನ್ನೂ ಓದಿ: Manu Bhaker: ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್
ಪಿ ವಿ ಸಿಂಧು ಕಂಚಿನ ಪದಕ ಜಯಿಸಿ ಸತತವಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದರು. ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು 1980ರ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿತ್ತು.
ಬಾಕ್ಸರ್ ಲವ್ಲೀನಾ ಬೋರ್ಗೊಹೈನ್ ಕಂಚು ಗೆದ್ದರೆ, ಮೀರಾಬಾಯಿ ಚಾನು ಬೆಳ್ಳಿಯೊಂದಿಗೆ ಮಿನುಗಿದರು. ಕುಸ್ತಿಪಟು ರವಿ ದಹಿಯಾ ಬೆಳ್ಳಿ, ಬಜರಂಗ್ ಪೂನಿಯಾ ಕಂಚು ಗೆದ್ದರು.