Site icon Vistara News

ಭಾರತ ತಂಡದ ನಾಯಕ ರೋಹಿತ್​ ಶರ್ಮ ವಿರುದ್ಧ ಟಾಸ್​ ಫಿಕ್ಸಿಂಗ್ ಆರೋಪ!

rohit sharma toss

ಮುಂಬಯಿ: ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತಿನಂತೆ ಹಾಲಿ ವಿಶ್ವಕಪ್​ ಟೂರ್ನಿಯಲ್ಲಿ ಹೀನಾಯವಾಗಿ ಸೋಲು ಕಂಡರೂ ಪಾಕಿಸ್ತಾನದ ತಕರಾರು ಮಾತ್ರ ಇನ್ನೂ ಮುಗಿದಿಲ್ಲ. ಒಂದಲ್ಲ ಒಂದು ವಿಚಾರದಲ್ಲಿ ಭಾರತದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಲೇ ಇದೆ. ಇದೀಗ ಹೊಸ ಸೇರ್ಪಡೆ ಎಂಬಂತೆ ರೋಹಿತ್​ ಶರ್ಮ(Rohit Sharma) ಅವರು ಟಾಸ್​ ಫಿಕ್ಸಿಂಗ್​(Rohit Sharma fixing toss) ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗಿ ಸಿಕಂದರ್ ಬಖ್ತ್(Sikandar Bakht) ಆರೋಪಿಸಿದ್ದಾರೆ.

ಪಾಕಿಸ್ತಾನದಲ್ಲಿ ನಡೆದ ಕ್ರಿಕೆಟ್​ ಚರ್ಚೆಯ ಕಾರ್ಯಕ್ರಮದಲ್ಲಿ ಸಿಕಂದರ್ ಬಖ್ತ್ ಈ ಆರೋಪ ಮಾಡಿದ್ದಾರೆ. “ಐಸಿಸಿ ಮತ್ತು ಬಿಸಿಸಿಐ ಜತೆ ಸೇರಿಕೊಂಡು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಫಿಕ್ಸ್ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೊ ವೈರಲ್ ಆಗಿದೆ.

“ರೋಹಿತ್​ ಅವರು ಬುಧವಾರದ ಸೆಮಿಫೈನಲ್​ ಪಂದ್ಯದ ವೇಳೆ ಟಾಸ್ ಹಾರಿಸಿದ್ದನ್ನು ಗಮನಿಸುವಾಗ ಫಿಕ್ಸಿಂಗ್​ ನಡೆದಿರುವುದು ತಿಳಿಯುತ್ತದೆ. ರೋಹಿತ್​ ಎದುರಾಳಿ ನಾಯಕನಿಂದ ಬಹಳ ಅಂತರ ಕಾಯ್ದುಕೊಂಡು ಟಾಸ್​ ಹಾರಿಸಿದ್ದಾರೆ. ಇದರಿಂದ ಎದುರಾಳಿ ತಂಡದ ನಾಯಕನಿಗೆ ಸರಿಯಾಗಿ ಕಾಯಿನ್​ ಪರೀಕ್ಷಿಸಲು ಸಾಧ್ಯವಾಗುದಿಲ್ಲ. ಮ್ಯಾಚ್​ ರೆಫ್ರಿ ಹೇಳಿದ್ದೇ ಇಲ್ಲಿ ಫೈನಲ್ ಆಗುತ್ತದೆ. ಇದಲ್ಲವೂ ಪೂರ್ವಯೋಜಿತ ಸಿದ್ಧತೆ. ಹೀಗಾಗಿ ರೋಹಿತ್​ ದೂರಕ್ಕೆ ಟಾಸ್​ ಕಾಯಿನ್​ ಹಾರಿಸಿ ಫಿಕ್ಸಿಂಗ್​ ಮಾಡಿದ್ದಾರೆ” ಎಂದು ಸಿಕಂದರ್ ಬಖ್ತ್ ಹೇಳಿದ್ದಾರೆ.

ಯಾರು ಈ ಸಿಕಂದರ್ ಬಖ್ತ್

66 ವರ್ಷದ ಸಿಕಂದರ್ ಬಖ್ತ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ. ಪಾಕಿಸ್ತಾನ ಪರ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಒಂದು ಕಾಲದಲ್ಲಿ ಶ್ರೇಷ್ಠ ಬೌಲರ್​ ಆಗಿದ್ದರು. 50 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 100ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದಿದ್ದಾರೆ. 1976ರಲ್ಲಿ ಟೆಸ್ಟ್‌ ಆಡುವ ಮೂಲಕ ಪಾಕ್ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 1989 ರಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು.

ಇದನ್ನೂ ಓದಿ IND vs NZ: ಹಾಟ್​​ಸ್ಟಾರ್​ನಲ್ಲಿ ದಾಖಲೆ ಬರೆದ ಭಾರತ-ನ್ಯೂಜಿಲ್ಯಾಂಡ್​ ಸೆಮಿ ಪಂದ್ಯ

ಕೆಲ ದಿನಗಳ ಹಿಂದೆ ಹಸನ್​ ರಾಝಾ ಅವರು ಭಾರತ ತಂಡಕ್ಕೆ ಐಸಿಸಿ ಮತ್ತು ಬಿಸಿಸಿಐ(ICC And BCCI) ಸೇರಿಕೊಂಡು ವಿಶೇಷ ಚೆಂಡನ್ನು ನೀಡುತ್ತಿದೆ. ಹೀಗಾಗಿ ಶಮಿ ಮತ್ತು ಉಳಿದ ಬೌಲರ್​ಗಳು ವಿಕೆಟ್​ ಈ ರೀತಿ ವಿಕೆಟ್​ ಕೀಳುತ್ತಿದ್ದಾರೆ ಎಂದು ಹೇಳಿದ್ದರು. ಅಲ್ಲದೆ ಆಸ್ಟ್ರೇಲಿಯಾ ಮತ್ತು ಅಫಘಾನಿಸ್ತಾನ ನಡುವಣ ಪಂದ್ಯದ ಬಳಿಕವೂ ನಾಲಗ ಹರಿಬಿಟ್ಟಿದ್ದ ರಾಝಾ, ಭಾರತಕ್ಕೆ ನೀಡಿದ್ದ ಚೆಂಡನ್ನು ಅಫಘಾನಿಸ್ತಾನಕ್ಕೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು.

ಹಸನ್​ ರಾಝಾಗೆ ಚಳಿ ಬಿಡಿಸಿದ್ದ ವಾಸಿಂ ಅಕ್ರಮ್​

ಭಾರತ ವಿರುದ್ಧ ಆರೋಪ ಮಾಡಿದ್ದ ರಾಝಾ ಅವರ ಹೇಳಿಕೆಗೆ ಪ್ರತಿಕ್ರಿಕೆ ನೀಡಿದ್ದ ಪಾಕಿಸ್ತಾನ ದಿಗ್ಗಜ ಆಟಗಾರ ವಾಸಿಂ ಅಕ್ರಮ್​ ಅವರು, “ಅಸಂಬದ್ದ ಹೇಳಿಕೆ ನೀಡುವುದರಿಂದ ನಿಮ್ಮಗೆ ಮಾತ್ರವಲ್ಲದೆ ನಮಗೂ ಮುಜುಗರವನ್ನುಂಟು ಮಾಡುತ್ತಿದ್ದೀರಿ” ಎಂದು ಬಹಿರಂಗವಾಗಿಯೇ ಟಿವಿ ಸಂದರ್ಶನದಲ್ಲಿ ರಾಝಾ ಹೇಳಿಕೆಯನ್ನು ಕಡ್ಡಿ ಮುರಿದಂತೆ ಖಂಡಿಸಿದ್ದರು.

Exit mobile version