Site icon Vistara News

ICC World Cup 2023 : ಅಂಕಪಟ್ಟಿಯಲ್ಲಿ ಈಗ ಭಾರತವೇ ನಂಬರ್​ ಒನ್​

Team India

ಅಹಮದಾಬಾದ್: ಭಾರತ ಕ್ರಿಕೆಟ್​ ತಂಡ ಹಾಲಿ ವಿಶ್ವ ಕಪ್​ನಲ್ಲಿ ಭರ್ಜರಿ ಅಭಿಯಾನ ನಡೆಯುತ್ತಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಏಳು ವಿಕೆಟ್​ ಜಯ ಸಾಧಿಸುವ ಜತೆಗೆ ಭಾರತ ಆರಂಭಿಕ ಮೂರು ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ಭಾರತ ತಂಡ ವಿಶ್ವ ಕಪ್​ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈ ಪಂದ್ಯಕ್ಕೂ ಮೊದಲು ಅಗ್ರ ಸ್ಥಾನ ಪಡೆದುಕೊಂಡಿದ್ದ ನ್ಯೂಜಿಲ್ಯಾಂಡ್​ ತಂಡವನ್ನು ಕೆಳಕ್ಕೆ ತಳ್ಳಿರುವ ಭಾರತ ನಂಬರ್ ಒನ್​ ಸ್ಥಾನಕ್ಕೇರಿದೆ.

ರೋಹಿತ್​ ಶರ್ಮಾ ಬಳಗ ಈಗ ಒಟ್ಟು ಮೂರು ಪಂದ್ಯಗಳ ಗೆಲುವಿನೊಂದಿಗೆ ಒಟ್ಟು ಆರು ಅಂಕಗಳನ್ನು ಪಡೆದುಕೊಂಡಿದೆ. ನ್ಯೂಜಿಲ್ಯಾಂಡ್​ ತಂಡವೂ ಮೊದಲ ಮೂರು ಹಣಾಹಣಿಗಳಲ್ಲಿ ಗೆಲ್ಲುವ ಮೂಲಕ ಅಷ್ಟೇ ಅಂಕಗಳನ್ನು ಪಡೆದುಕೊಂಡಿದೆ. ಆದರೆ, ಭಾರತದ ನೆಟ್​ರನ್​ರೇಟ್​ 1.821 ಇದ್ದರೆ ನ್ಯೂಜಿಲ್ಯಾಂಡ್​ 1.604 ಹೊಂದಿದೆ. ಈ ಮೂಲಕ ಕಿವೀಸ್​ ತಂಡವನ್ನು ಹಿಂದಕ್ಕೆ ತಳ್ಳಿದೆ.

ಇದನ್ನೂ ಓದಿ : Rohit Sharma : ಸಿಕ್ಸರ್​ಗಳನ್ನು ಬಾರಿಸಿ ನೂತನ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​​

ಆಡಿರುವ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಗೆದ್ದಿರುವ ದಕ್ಷಿಣ ಆಫ್ರಿಕಾ 4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದರೆ, ಆಡಿರುವ ಮೂರರಲ್ಲಿ ಎರಡು ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಪಾಕ್​ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್​ ಜಯ

ಬೌಲರ್​ಗಳ ಸಂಘಟಿತ ಹೋರಾಟ ನಾಯಕ ರೋಹಿತ್​ ಶರ್ಮಾ (86) ಅವರ ಅಬ್ಬರದ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Ind vs Pak) ವಿರುದ್ಧದ ವಿಶ್ವ ಕಪ್​ (ICC World Cup 2023) ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತವರೂರು ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿತು. ಪಂದ್ಯ ನಡೆದ ಸ್ಟೇಡಿಯಮ್​ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕಾರಣ ಚರ್ಚೆ ಯೂ ಜೋರಾಗಿತ್ತು. ಆದರೆ ಭಾರತ ಬಳಗ ಪಾಕ್​ ತಂಡವನ್ನು ಕ್ಯಾರೇ ಎನ್ನದೇ ಗೆಲುವು ಸಾಧಿಸಿತು.

ಇದರೊಂದಿಗೆ ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡ ಅತ್ಯುತ್ತಮ ಆರಂಭ ಪಡೆದಿದ್ದು ಹ್ಯಾಟ್ರಿಕ್​ ಜಯ ಭಾರತದ ಪಾಲಾಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಭಾರತ ತಂಡ ನಂತರದ ಪಂದ್ಯದಲ್ಲಿ ಅಪಘಾನಿಸ್ತಾನ ತಂಡದ ವಿರುದ್ಧ ಸವಾರಿ ಮಾಡಿತ್ತು. ಇದೀಗ ಪಾಕ್ ವಿರುದ್ಧವೂ ನಿರಾಯಾಸ ಗೆಲುವು ತನ್ನದಾಗಿಸಿಕೊಂಡಿದೆ. ಈ ವಿಜಯದೊಂದಿಗೆ ಪಾಕ್​ ವಿರುದ್ಧ ವಿಶ್ವ ಕಪ್​ ಇತಿಹಾಸದಲ್ಲಿನ ತನ್ನ ಮುನ್ನಡೆಯನ್ನು 8-0 ಅಂತರಕ್ಕೆ ಮುಂದುವರಿಸಿಕೊಂಡಿತು ಟೀಮ್ ಇಂಡಿಯಾ.

ಜಸ್​ಪ್ರಿತ್​ ಬುಮ್ರಾ, ಮೊಹಮ್ಮದ್ ಸಿರಾಜ್​, ಹಾರ್ದಿಕ್ ಪಾಂಡ್ಯ, ಕುಲ್ದೀಪ್​ ಯಾದವ್​, ರವೀಂದ್ರ ಜಡೇಜಾ ತಲಾ 2 ವಿಕೆಟ್​ ಪಡೆಯುವ ಮೂಲಕ ಭಾರತ ತಂಡಕ್ಕೆ ಮುನ್ನಡೆಗೆ ಕಾರಣರಾದರು. ಪಾಕ್​ ವಿರುದ್ಧದ ಗೆಲುವಿನಲ್ಲಿ ಬೌಲರ್​ಗಳ ಪಾಲು ದೊಡ್ಡದಿದೆ. ಪ್ರಮುಖ ಬ್ಯಾಟರ್​ಗಳನ್ನು ಔಟ್​ ಮಾಡುವ ಮೂಲಕ ಸಣ್ಣ ಮೊತ್ತದ ಸವಾಲು ಎದುರಾಗುವಂತೆ ನೋಡಿಕೊಂಡರು. ಇನಿಂಗ್ಸ್​​ ಉದ್ದಕ್ಕೂ ಭಾರತದ ಬೌಲರ್​ಗಳು ಹಾಗೂ ಫೀಲ್ಡರ್​ಗಳು ಮೆರೆದಾಡಿದರು. ಪಾಕ್​ ಬ್ಯಾಟರ್​ಗಳು ಅಕ್ಷರಶಃ ಪರದಾಡಿದರು.

ಇದು ಭಾರತ ತಂಡಕ್ಕೆ ಪಾಕಿಸ್ತಾನ ವಿರುದ್ಧ ಏಕ ದಿನ ಮಾದರಿಯಲ್ಲಿ ಸಿಗುತ್ತಿರುವ ಸತತ ಎರಡನೇ ವಿಜಯ. ಸೆಪ್ಟೆಂಬರ್​ 4ರಂದು ನಡೆದಿದ್ದ ಏಷ್ಯಾ ಕಪ್​ ಸೂಪರ್ ಸಿಕ್ಸ್ ಹಣಾಹಣಿಯಲ್ಲಿ ಪಾಕ್ ವಿರುದ್ಧ​ 228 ರನ್​ಗಳ ಬೃಹತ್ ಅಂತರದ ಗೆಲುವು ದಾಖಲಿಸಿತ್ತು ಭಾರತ.

Exit mobile version