Site icon Vistara News

India at the Olympics: ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಸಾಧನೆಯ ಇಣುಕು ನೋಟ

India at the Olympics: Records galore, highest medal tally in 21st century

ಬೆಂಗಳೂರು: ಜಾಗತಿಕ ಕ್ರೀಡಾಕೂಟವಾದ ಒಲಿಂಪಿಕ್ಸ್​ನಲ್ಲಿ(India at the Olympics) ಭಾರತ ಇದುವರೆಗೂ ಹೆಚ್ಚಿನ ಪದಕ ಗೆಲ್ಲದಿದ್ದರೂ ಕೂಡ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾರತೀಯರು ಎಂದೂ ಹಿಂಜರಿಯಲಿಲ್ಲ. ಇತಿಹಾಸವನ್ನೊಮ್ಮೆ ಕೆದಕಿದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಭಾರತ ಉಳಿಸಿಕೊಂಡಿದೆ. ಈ ಬಾರಿ ಪ್ಯಾರಿಸ್​ಗೆ ತೆರಳುವ ಕ್ರೀಡಾಪಟುಗಳಿಗೆ ಹಿಂದೆಂದಿಗಿಂತ್ತಲೂ ದೊರೆಯದ ಬೆಂಬಲ ಸಿಕ್ಕಿದೆ. ಹಿಂದಿನ ಒಲಿಂಪಿಕ್ಸ್‌ನಲ್ಲಿ ಭಾರತೀಯರ ಪದಕ ಸಾಧನೆ ಹೇಗಿತ್ತು ಎನ್ನುವ ಇಣುಕು ನೋಟ ಇಲ್ಲಿದೆ.

1928ರಲ್ಲಿ ಮೊದಲ ಚಿನ್ನ


ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದ್ದು. 1928ರಲ್ಲಿ ನೆದರ್ಲೆಂಡ್‌ನ‌ ಆ್ಯಮ್‌ಸ್ಟರ್ಡಾಮ್‌ನಲ್ಲಿ ನಡೆದ ಒಲಿಂಪಿಕ್‌ನಲ್ಲಿ ಭಾರತ ಹಾಕಿ ತಂಡ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಇಲ್ಲಿಂದ ಭಾರತ ಹಾಕಿ ತಂಡದ ಸುವರ್ಣ ಯುಗಾರಂಭವಾಯಿತು. ಹೆಚ್ಚು ಕಡಿಮೆ ಅರ್ಧಶತಮಾನದವರೆಗೆ ಒಲಿಂಪಿಕ್‌ನಲ್ಲಿ ಭಾರತ ಹಾಕಿಯಲ್ಲಿ ಪಾರುಪತ್ಯ ಸಾಧಿಸಿತು. 1956ರವರೆಗೆ ಸತತ 6 ಬಾರಿ ಸ್ವರ್ಣ ಜಯಿಸಿತು. ಧ್ಯಾನ್‌ಚಂದ್‌ ಎಂಬ ಮಹಾನ್‌ ಪ್ರತಿಭೆ ವಿಶ್ವಕ್ಕೆ ಪರಿಚಯವಾಗಿದ್ದೂ ಕೂಡ ಇಲ್ಲಿಯೇ.


ಸ್ವತಂತ್ರ ಭಾರತ ಗೆದ್ದ ಮೊದಲ ಪದಕ

1948ರಂದು ಇಂಗ್ಲೆಂಡ್‌ ರಾಜಧಾನಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್​ ಭಾರತದ ಪಾಲಿಗೆ ವಿಶೇಷವಾಗಿತ್ತು. ಏಕೆಂದರೆ ಸ್ವತಂತ್ರ ಭಾರತ ಆಡಿದ ಮೊದಲ ಒಲಿಂಪಿಕ್ಸ್​ ಕೂಟ ಇದಾಗಿತ್ತು. ಒಂದು ಕಾಲದಲ್ಲಿ ತನ್ನನ್ನು ಆಳಿದ್ದ ಇಂಗ್ಲೆಂಡ್​ ತಂಡವನ್ನೇ ಭಾರತ ಫೈನಲ್‌ನಲ್ಲಿ ಸೋಲಿಸಿ ಚಿನ್ನ ಗೆದ್ದಿತು!. ಗೆಲುವಿನ ಅಂತರ 4-0 ಗೋಲುಗಳು. ಬ್ರಿಟಿಷರ ವಸಾಹತುಶಾಹಿ ಅಹಂಕಾರಕ್ಕೆ ಭಾರತ ಕೊಟ್ಟ ಭಾರೀ ತಿರುಗೇಟಿನಂತಿತ್ತು ಈ ಗೆಲುವು.

ವೈಯಕ್ತಿಕ ವಿಭಾಗದಲ್ಲಿ ಮೊದಲ ಪದಕ


ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಪದಕ ಜಯಿಸಿದ್ದು 1952ರಲ್ಲಿ. ಮಹಾರಾಷ್ಟ್ರದ ಖಾಸಾಬಾ ದಾದಾ ಸಾಹೆಬ್‌ ಜಾಧವ್‌ ಕುಸ್ತಿಯ ಫ್ರೀಸ್ಟೈಲ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದು ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಗೆದ್ದ ಮೊದಲ ಪದಕ ಇದಾಗಿತ್ತು.

ಇದನ್ನೂ ಓದಿ Paris Olympics 2024 : ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಡಿಮೆ ಪದಕಗಳು ಸಿಗುವುದು ಯಾಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ


ಟೆನಿಸ್​ನಲ್ಲಿ ಮೊದಲ ಪದಕ


1996ರಲ್ಲಿ ಅಮೆರಿಕದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಏಕೈಕ ಕಂಚಿನ ಪದಕ ಜಯಿಸಿತ್ತು. ಲಿಯಾಂಡರ್‌ ಪೇಸ್‌ ಟೆನಿಸ್‌ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ 44 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಪದಕ ಇದಾಗಿತ್ತು. ಇಲ್ಲಿ ಲಿಯಾಂಡರ್‌ ಪೇಸ್‌ ಬ್ರಝಿಲ್‌ನ ಫೆರ್ನಾಂಡೊ ಮೆಲಿಗಿನಿ ಅವರನ್ನು ಮಣಿಸಿ ಪದಕಕ್ಕೆ ಕೊರಳೊಡ್ಡಿದ್ದರು.

ಕರ್ಣ ಮಲ್ಲೇಶ್ವರಿ ಐತಿಹಾಸಿಕ ಸಾಧನೆ


2000ದಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಆಂಧ್ರ ಪ್ರದೇಶ ಮೂಲದವರಾದ ಕರ್ಣ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು. 69 ಕೆಜಿ ವಿಭಾಗದಲ್ಲಿ ಮಲ್ಲೇಶ್ವರಿ ಈ ಸಾಧನೆ ಮಾಡಿದ್ದರು.


2004ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಏಕೈಕ ಪದಕ ಮಾತ್ರ ಲಭಿಸಿತು. ರಾಜಸ್ಥಾನದ ಶೂಟರ್‌ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಪುರುಷರ ಡಬಲ್‌ ಟ್ರಾಯಪ್‌ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಗುರಿ ಇರಿಸಿ ಈ ಪದಕ ತಂದುಕೊಟ್ಟಿದ್ದರು. ಈ ಸಾಧನೆಯೊಂದಿಗೆ ವೈಯಕ್ತಿಕ ವಿಭಾಗದಲ್ಲಿ ರಜತ ಗೆದ್ದ ಮೊದಲ ಭಾರತೀಯರೆನಿಸಿದರು.

ಇದನ್ನೂ ಓದಿ Paris Olympics 2024: ಮೊಟ್ಟಮೊದಲ ಒಲಿಂಪಿಕ್ಸ್ ಕ್ರೀಡಾಕೂಟದ 10 ಕುತೂಹಲಕರ ಸಂಗತಿಗಳಿವು

ಚಿನ್ನ ಗೆದ್ದ ಅಭಿನವ್‌ ಬಿಂದ್ರ


ಚೀನದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಕೂಟವಾಗಿದೆ. ಸ್ವತಂತ್ರ ಭಾರತದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ವರ್ಣ ಸಾಧನೆ ಮಾಡಿದ್ದು ಇದೇ ಕೂಟದಲ್ಲಿ ಅಲ್ಲದೆ ಮೊಟ್ಟ ಮೊದಲ ಬಾರಿಗೆ ಒಂದೇ ಕೂಟದಲ್ಲಿ 3 ಪದಕಗಳು ಭಾರತದ ಪಾಲಾಗಿದ್ದವು. ಅಭಿನವ್‌ ಬಿಂದ್ರ 10 ಮೀ. ಏರ್‌ ರೈಫ‌ಲ್‌ನಲ್ಲಿ ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇತ್ತೀಚೆಗೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಕುಸ್ತಿಪಟು ಸುಸೀಲ್‌ ಕುಮಾರ್‌ ಪುರುಷರ ಕುಸ್ತಿಯ 75 ಕೆಜಿ ವಿಭಾಗದಲ್ಲಿ ಕಂಚು ಗೆದ್ದರೆ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ ಸಿಂಗ್‌ 66 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು.


ಲಂಡನ್​ನಲ್ಲಿ ಕಮಾಲ್​…

2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಅಮೋಘ ಸಧನೆಯೊಂದನ್ನು ಮಾಡಿತು. ಭಾರತಕ್ಕೆ ಅರ್ಧ ಡಜನ್‌ ಪದಕ ಒಲಿದು ಬಂದಿತ್ತು. ಭಾರತದ ಶೂಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಕ್ಷೇತ್ರಕ್ಕೆ ಹೊಸ ಆಯಾಮ ಸೃಷ್ಟಿಸಿದ ಕೂಟ ಇದಾಗಿತ್ತು. 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಭಾರತದ ಪಾಲಾದವು. ಶೂಟಿಂಗ್‌ನಲ್ಲಿ ವಿಜಯ್‌ ಕುಮಾರ್‌ 25 ಮೀ. ರ್ಯಾಪಿಟ್‌ ಫೈರ್‌ ಪಿಸ್ತೂಲ್‌ನಲ್ಲಿ ಬೆಳ್ಳಿ ಗೆದ್ದರೆ, ಸುಶೀಲ್‌ ಕುಮಾರ್‌ ಪುರುಷರ 66 ಕೆಜಿ ಫ್ರೀ ಸ್ಟೈಲ್‌ನಲ್ಲಿ ರಜತ ಸಾಧನೆಯೊಂದಿಗೆ ಸತತ 2ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದರು. ಮತೋರ್ವ ಶೂಟರ್‌ ಗಗನ್‌ ನಾರಂಗ್‌ (10 ಮೀ ಏರ್‌ ರೈಫ‌ಲ್‌), ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಬಾಕ್ಸರ್‌ ಮೇರಿ ಕೋಮ್‌ ಹಾಗೂ ಮತೋರ್ವ ಕುಸ್ತಿಪಟು ಯೋಗೇಶ್ವರ್‌ ದತ್‌ ಕಂಚಿನ ಪದಕ ಜಯಿಸಿದರು.

ಇದನ್ನೂ ಓದಿ Paris Olympics 2024 : ಒಲಿಂಪಿಕ್ಸ್​ ಕ್ರೀಡಾಕೂಟದ ಇತಿಹಾಸ ಏನು? ಇದನ್ನು ಆಯೋಜಿಸುವವರು ಯಾರು?


ರಿಯೋದಲ್ಲಿ ಕೇವಲ 2 ಪದಕ


ಲಂಡನ್‌ನಲ್ಲಿ ಅರ್ಧ ಡಜನ್‌ ಪದಕ ಗೆದ್ದಿದ್ದ ಭಾರತದ ಕ್ರೀಡಾಪಟುಗಳ ಮೇಲೆ ರಿಯೋ ಒಲಿಂಪಿಕ್ಸ್‌ನಲ್ಲಿ ಅಪಾರ ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಎಲ್ಲ ನಿರೀಕ್ಷೆ ಹುಸಿಗೊಂಡಿತು. ಭಾರತ ಕೇವಲ 2 ಪದಕಕ್ಕೆ ಮಾತ್ರ ಸೀಮಿತವಾಯಿತು. ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಕೊನೆಯ ಹಂತದಲ್ಲಿ ಎಡವಿ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಆದರೆ, ಸಿಂಧು ಬ್ಯಾಡ್ಮಿಂಟನ್‌ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಶಟ್ಲರ್‌ ಎನಿಸಿಕೊಂಡರು. ಇತ್ತೀಚೆಗೆ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಲೈಂಗಿಕ ಆರೋಪ ಹೊರಿಸಿ ಪ್ರತಿಭಟನೆ ನಡೆಸಿ ಕುಸ್ತಿಗೆ ನಿವೃತ್ತಿ ಹೇಳಿದ್ದ ಸಾಕ್ಷಿ ಮಲಿಕ್‌ ಕೂಡ ಈ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದರು.


ಚಿನ್ನ ಗೆದ್ದ ನೀರಜ್​ ಚೋಪ್ರಾ

ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಹಲವು ಕಟ್ಟುಪಾಡುಗಳ ನಡುವೆ ಜಪಾನ್​ನ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್ ಚೋಪ್ರ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಿವಿ ಸಿಂಧು ಕಂಚಿನ ಪದಕ ಜಯಿಸಿ ಸತತವಾಗಿ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸಾಧನೆ ಮಾಡಿದರು. ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು 1980ರ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿತ್ತು. ಬಾಕ್ಸರ್​ ಲವ್ಲೀನಾ ಬೋರ್ಗೊಹೈನ್ ಕಂಚು ಗೆದ್ದರೆ, ಮೀರಾಬಾಯಿ ಚಾನು ಬೆಳ್ಳಿಯೊಂದಿಗೆ ಮಿನುಗಿದರು. ಕುಸ್ತಿಪಟು ರವಿ ದಹಿಯಾ ಬೆಳ್ಳಿ, ಬಜರಂಗ್ ಪೂನಿಯಾ ಕಂಚು ಗೆದ್ದರು.​

35 ಪದಕ


ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತ ಇದುವರೆಗೆ ಒಟ್ಟು 35 ಪದಕಗಳನ್ನು ಗೆದ್ದಿದೆ. ಇದರಲ್ಲಿ 10 ಚಿನ್ನ, 9 ಬೆಳ್ಳಿ ಮತ್ತು 16 ಕಂಚು ಒಳಗೊಂಡಿದೆ. ಈ ಬಾರಿ ಕನಿಷ್ಠ 20 ಪದಕ ಗೆಲ್ಲುವ ನಿರೀಕ್ಷೆ ಇದೆ. ನಿರೀಕ್ಷೆ ಮಾಡಿದಷ್ಟು ಪದಕ ಗೆದ್ದರೆ ಒಟ್ಟು ಪದಕಗಳ ಸಂಖ್ಯೆ 50ರ ಗಡಿ ದಾಟಲಿದೆ.

Exit mobile version