Site icon Vistara News

WTC Final 2023 : ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್: ತಂಡದ ಪಟ್ಟಿ ಸಲ್ಲಿಸಿದ ಭಾರತ, ಆಸ್ಟ್ರೇಲಿಯಾ

WTC Final 2023

ದುಬೈ: ಜೂನ್ 7 ರಿಂದ 11 ರವರೆಗೆ ಲಂಡನ್​​ನ ಓವಲ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್ (WTC Final 2023) ಪಂದ್ಯದಲ್ಲಿ ಆಡಲಿರುವ ಆಟಗಾರರ ಪಟ್ಟಿಯನ್ನು ಭಾರತ ಹಾಗೂ ಆಸ್ಟ್ರೇಲಿಯಾ ತಂಡ ಐಸಿಸಿಗೆ ಸಲ್ಲಿಸಿದೆ. ಈ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸ್ವೀಕರಿಸಿ ಅಂತಿಮಗೊಳಿಸಿದೆ. ಎರಡೂ ತಂಡಗಳು ಭಾನುವಾರ ಐಸಿಸಿಗೆ ತಮ್ಮ ಅಂತಿಮ ತಂಡಗಳನ್ನು ಸಲ್ಲಿಸಿದ್ದು, ಜೂನ್ 7 ರಿಂದ ದಕ್ಷಿಣ ಲಂಡನ್​ನಲ್ಲಿ ಭಾರತವನ್ನು ಎದುರಿಸಲಿರುವ 15 ಆಟಗಾರರ ಪಟ್ಟಿಯನ್ನೂ ನೀಡಿದೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅನುಭವಿ ವೇಗಿ ಜೋಶ್ ಹೇಜಲ್​ವುಡ್​ ಡಬ್ಲ್ಯುಟಿಸಿ ಫೈನಲ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗರಿಷ್ಠ ಫಿಟ್ನೆಸ್ ಸಾಧಿಸಲು ಸಾಧ್ಯವಾಗದಿರುವ ಅವರು ಆಡದಿದ್ದರೆ ಮೈಕೆಲ್ ನೇಸರ್ ಆಡಬಹುದು ಎಂದು ಹೇಳಲಾಗಿದೆ. ಗಾಯದಿಂದ ಚೇತರಿಸಿಕೊಂಡ ನಂತರ, ಸುಮಾರು ನಾಲ್ಕು ತಿಂಗಳ ಕಾಲ ಆಟದಿಂದ ಹೊರಗುಳಿದ ನಂತರ ಹೇಜಲ್​ವುಡ್​ ಐಪಿಎಲ್​ಗೆ ಮರಳಿದ್ದರು. ಆದರೆ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಿದ್ದರು. ಒಂದು ವೇಳೆ ಆಸ್ಟ್ರೇಲಿಯಾ ತಂಡ ಗಾಯ ಅಥವಾ ಇತರ ಕಾರಣಗಳಿಂದ 15 ಆಟಗಾರರ ತಂಡದಲ್ಲಿ ಬದಲಾವಣೆ ಮಾಡಬೇಕಾದರೆ ಐಸಿಸಿ ತಾಂತ್ರಿಕ ಸಮಿತಿಯಿಂದ ಅನುಮೋದನೆ ಪಡೆಯಬೇಕಾಗುತ್ತದೆ.

ಆಸ್ಟ್ರೇಲಿಯಾದ ಮೀಸಲು ಆಟಗಾರರಲ್ಲಿ ಆಲ್​ರೌಂಡರ್ ಮಿಚೆಲ್ ಮಾರ್ಷ್ ಮತ್ತು ಮ್ಯಾಟ್ ರೆನ್ಶಾ ಅವರನ್ನು ಸೇರಿಸಲಾಗಿದೆ.

ಮತ್ತೊಂದೆಡೆ ಕೆ.ಎಲ್​ ರಾಹುಲ್​ ಗಾಯದ ಕಾರಣ ಆಡುತ್ತಿಲ್ಲ ಎಂದು ಗೊತ್ತಾದ ಬಳಿಕವೂ ಆಯ್ಕೆ ಮಾಡಿದ 15 ಆಟಗಾರರ ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ನಡುವೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡದ ಯಶಸ್ವಿ ಜೈಸ್ವಾಲ್ ಅವರನ್ನು ಐಪಿಎಲ್ 2023ರ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಮೀಸಲು ಆಟಗಾರರ ಬಳಗಕ್ಕೆ ಸೇರಿಸಲಾಗಿದೆ.

ಇದನ್ನೂ ಓದಿ : IPL 2023: 15 ವರ್ಷಗಳ ಹಿಂದಿನ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್​

ಜೈಸ್ವಾಲ್ ಈ ಋತುವಿನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ 14 ಪಂದ್ಯಗಳಲ್ಲಿ ಎರಡು ಶತಕಗಳೊಂದಿಗೆ 625 ರನ್ ಗಳಿಸಿದ್ದಾರೆ. ಐದು ರಣಜಿ ಟ್ರೋಫಿ ಪಂದ್ಯಗಳಲ್ಲಿ 404 ರನ್ ಪೇರಿಸಿದ್ದಾರೆ. ಮೊದಲು ಆಯ್ಕೆಯಾಗಿದ್ದ ಭಾರತದ ಮೂವರು ಮೀಸಲು ಆಟಗಾರರ ಪಟ್ಟಿಯಲ್ಲಿ ಋತುರಾಜ್ ಗಾಯಕ್ವಾಡ್ ಬದಲಿಗೆ ಜೈಸ್ವಾಲ್ ಸ್ಥಾನ ಪಡೆದಿದ್ದಾರೆ. ಅವರು ಸೂರ್ಯಕುಮಾರ್ ಯಾದವ್ ಮತ್ತು ವೇಗದ ಬೌಲರ್ ಮುಖೇಶ್ ಕುಮಾರ್ ಅವರ ಜತೆಯಲ್ಲಿರುತ್ತಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ಗೆ ತಂಡಗಳು ಇಂತಿವೆ

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಜಲ್​ವುಡ್​, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.

ಮೀಸಲು ಆಟಗಾರರು: ಮಿಚೆಲ್ ಮಾರ್ಷ್, ಮ್ಯಾಥ್ಯೂ ರೆನ್ಶಾ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್).

ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

Exit mobile version