ಹೊಸದಿಲ್ಲಿ : ನಿಯಮಕ್ಕೆ ಅನುಗುಣವಾಗಿ ಕಾರ್ಯಾಚರಣೆ ನಡೆಸದ ಹಾಗೂ ಆಡಳಿತ ಮಂಡಳಿ ನೇಮಕದ ವಿಚಾರದಲ್ಲಿ ಗೊಂದಲಕ್ಕೆ ಬಿದ್ದಿರುವ ಅಖಿಲ ಭಾರತ ಫುಟ್ಬಾಲ್ ಒಕ್ಕೂಟವನ್ನು (AIFF) ವಿಶ್ವ ಫುಟ್ಬಾಲ್ ಒಕ್ಕೂಟ (FIFA) ಮಂಗಳವಾರ ನಿಷೇಧಿಸಿ ಪ್ರಕಟಣೆ ಹೊರಡಿಸಿದೆ. ಇದರಿಂದಾಗಿ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಬೇಕಾಗಿದ್ದ ೧೭ರ ವಯೋಮಿತಿಯ ಮಹಿಳೆಯರ ವಿಶ್ವ ಕಪ್‌ಗೆ ಆತಿಥ್ಯ ಪಡೆದಿದ್ದ ಭಾರತಕ್ಕೆ ಹಿನ್ನಡೆ ಉಂಟಾಗಿದೆ.
ಈ ಕುರಿತು ಮಂಗಳವಾರ ಫಿಫಾ ಪ್ರಕಟಣೆ ಹೊರಡಿಸಿದ್ದು, ಸ್ಥಾನಮಾನ ಉಲ್ಲಂಘನೆ ಹಾಗೂ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಮೂರನೇ ವ್ಯಕ್ತಿಯ ಅನಗತ್ಯ ಹಸ್ತಕ್ಷೇಪದಿಂದಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. “ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(AIFF) ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. AIFF ಅಂತೆಯೇ ಪಂದ್ಯಾವಳಿ ಕುರಿತ ಮುಂದಿನ ಹಂತಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ಫಿಫಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಸ್ಥಾಪನೆಗೊಂಡ ೮೫ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ನಿಷೇಧಕ್ಕೆ ಒಳಗಾಗಿದೆ.
ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ಕಾರ್ಯಕಾರಿ ಸಮತಿಯನ್ನು ರಚಿಸಿ ಅಧಿಕಾರವನ್ನು ವಾಪಸ್ ಪಡೆದುಕೊಂಡು, ದೈನಂದಿನ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಆರಂಭಿಸಿದೆ ಎಂಬುದನ್ನು ಆಡಳಿತಾತ್ಮಕ ಸಲಹಾ ಸಮಿತಿ ಖಾತರಿಪಡಿಸಿದ ಬಳಿಕ ನಿಷೇಧ ಹಿಂಪಡೆಯುವುದಾಗಿ ಫಿಫಾ ಹೇಳಿದೆ.
ಯಾಕೆ ಬ್ಯಾನ್?
ಕಳೆದ ಮೇ ೧೮ರಂದು ಸುಪ್ರೀಂ ಕೋರ್ಟ್ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷರಾದ ಪ್ರಫುಲ್ ಪಟೇಲ್ ಅವರನ್ನು ಪದಚ್ಯುತಗೊಳಿಸಿತ್ತು. ೨೦೨೦ರಿಂದ ಒಕ್ಕೂಟಕ್ಕೆ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ಕೋರ್ಟ್ ಈ ತೀರ್ಪು ನೀಡಿ, ಮೂರು ಸದಸ್ಯರನ್ನು ಹೊಂದಿರುವ ಆಡಳಿತಾತ್ಮಕ ಸಮಿತಿ (ಸಿಒಎ) ಸ್ಥಾಪಿಸಿತ್ತು. ಈ ಸಮಿತಿಯು ರಾಷ್ಟ್ರೀಯ ಕ್ರೀಡಾ ನೀತಿಯನ್ನು ಆಧರಿಸಿ ಸಂವಿಧಾನ ರಚಿಸುವ ಹೊಣೆಗಾರಿಕೆ ವಹಿಸಿಕೊಂಡಿದೆ.
ಆಗಸ್ಟ್ ೩ರಂದು ಈ ಕುರಿತು ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್, ಆಡಳಿತಾತ್ಮಕ ಸಮಿತಿಯ ನಿರ್ದೇಶನದ ಪ್ರಕಾರ ಚುನಾವಣೆ ನಡೆಸುವಂತೆ ಸೂಚನೆ ನೀಡಿತ್ತು. ಅಂತೆಯೇ ಆಗಸ್ಟ್ ೨೮ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಚುನಾವಣೆ ಪ್ರಕ್ರಿಯೆ ಆಗಸ್ಟ್ ೧೩ರಂದು ಆರಂಭಗೊಂಡಿದೆ. ಏತನ್ಮಧ್ಯೆ, ಆಗಸ್ಟ್ ೫ ರಂದು ಫಿಫಾ ನಿಷೇಧದ ಎಚ್ಚರಿಕೆಯನ್ನು ನೀಡಿತ್ತಲ್ಲದೆ, ಕೆಲವೇ ದಿನಗಳಲ್ಲಿ ನಿಷೇಧ ಹೇರಿದೆ.
ಇದನ್ನೂ ಓದಿ | ಥಾಮಸ್ ಕಪ್| ಭಾರತ ತಂಡದ ಐತಿಹಾಸಿಕ ಗೆಲುವು