Site icon Vistara News

ind vs Aus : ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ 44 ರನ್ ಜಯ, ಸರಣಿಯಲ್ಲಿ 2-0 ಮುನ್ನಡೆ

Team India

ತಿರುವನಂತಪುರ: ಯಶಸ್ವಿ ಜೈಸ್ವಾಲ್​ (53 ರನ್, 25 ಎಸೆತ, 9ಫೋರ್, 2 ಸಿಕ್ಸರ್​​) , ಋತುರಾಜ್ ಗಾಯಕ್ವಾಡ್​ (58 ರನ್​, 43 ಎಸೆತ, 3 ಫೋರ್, 2 ಸಿಕ್ಸರ್​), ಇಶಾನ್ ಕಿಶನ್​ (52 ರನ್​, 32 ಎಸೆತ, 3 ಫೋರ್​, 4 ಸಿಕ್ಸರ್​) ಅವರ ಅರ್ಧ ಶತಕಗಳ ನೆರವಿನಿಂದ ಮಿಂಚಿದ ಭಾರತ ತಂಡದ ಆಸ್ಟ್ರೇಲಿಯಾ (ind vs Aus ) ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 44 ರನ್​ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ.

ಇಲ್ಲಿನ ಗ್ರೀನ್​ ಫೀಲ್ಡ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ವೇಡ್​ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಎದುರಾಳಿ ತಂಡದ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಭಾರತ ಬ್ಯಾಟರ್​ಗಳು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 235 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ತಮ್ಮ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ಗೆ 191 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭವನ್ನು ಪಡೆಯುವ ಯತ್ನ ಮಾಡಿತು. ಮೊದಲ ವಿಕೆಟ್​ಗೆ ವೇಗವಾಗಿ 35 ರನ್ ಬಾರಿಸಿತು. ಆದರೆ, ರವಿ ಬಿಷ್ಣೋಯ್​ ಎಸೆತಕ್ಕೆ ಮ್ಯಾಥ್ಯೂ ಶಾರ್ಟ್ಸ್​​ 19 ರನ್ ಬಾರಿಸಿ ಆದರು. ಬಳಿಕ ಬಂದ ಜೋಶ್ ಬೇಗನೆ ವಿಕೆಟ್​ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಾರ್ಕ್ ಸ್ಟೊಯ್ನಿಸ್​ 45 ಹಾಗೂ ಟಿಮ್ ಡೇವಿಡ್ (37)​ ಭಾರತ ಬೌಲಿಂಗ್​ಗೆ ಬೆದರಿಕೆಯೊಡ್ಡಿದರು. ಆದರೆ, ಅವರಿಬ್ಬರನ್ನೂ ಮುಕೇಶ್ ಕುಮಾರ್ ಹಾಗೂ ಬಿಷ್ಣೋಯಿ ಪೆವಿಲಿಯನ್​ಗಟ್ಟಿದರು. ಅಲ್ಲಿಂದ ಆಸೀಸ್ ತಂಡ ಚೇತರಿಸಿಕೊಳ್ಳಲಿಲ್ಲ.

ಭಾರತ ತಂಡದ ಪರ ಬೌಲಿಂಗ್​ನಲ್ಲಿ ರವಿ ಬಿಷ್ಣೋಯ್​ 32ಕ್ಕೆ 3 ವಿಕೆಟ್ ಪಡೆದರು.

ಭಾರತದ ಭರ್ಜರಿ ಬ್ಯಾಟಿಂಗ್

ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ತಂಡ ಸ್ಪೋಟಕ ಬ್ಯಾಟಿಂಗ್ ಮೊರೆ ಹೋಯಿತು. ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್​ ಮೊದಲ ವಿಕೆಟ್​ಗೆ 77 ರನ್ ಬಾರಿಸಿದರು. ಕೇವಲ 5.5 ಓವರ್​ಗಳಲ್ಲಿ ಈ ರನ್ ಮೂಡಿಬಂದಿತ್ತು. ಬಳಿಕ ಬಂದ ಇಶಾನ್ ಕಿಶನ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅವರು ಋತುರಾಜ್ ಜತೆಗೂಡಿ ತಂಡವನ್ನು ಮೊತ್ತವನ್ನು 164ಕ್ಕೆ ಕೊಂಡೊಯ್ದರು. ಸೂರ್ಯಕುಮಾರ್​ 360 ಡಿಗ್ರಿ ಬ್ಯಾಟಿಂಗ್ ಮಾಡಿದ ಹೊರತಾಗಿಯೂ 19 ರನ್​ಗೆ ಸೀಮಿತಗೊಂಡರು. ಆದರೆ, ಫಿನಿಶರ್ ರಿಂಕು ಸಿಂಗ್ ಕೊನೆಯಲ್ಲಿ ಕೇವಲ 9 ಎಸೆತಗಳಲ್ಲಿ 31 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಆಸೀಸ್​ ಪರ ನೇಥಾನ್ ಎಲ್ಲೀಸ್​ 45 ರನ್​ಗೆ 3 ವಿಕೆಟ್ ಪಡೆದರು. ಮ್ಯಾಥ್ಯೂ ವೇಡ್​ ಕೊನೇ ಹಂತದಲ್ಲಿ 23 ಎಸೆತಗಳಲ್ಲಿ ಅಜೇಯ 42 ರನ್ ಬಾರಿಸಿದರು.

ಈ ಸುದ್ದಿಯನ್ನೂ ಓದಿ : Rahul Dravid: ಮತ್ತೆ ಐಪಿಎಲ್​ ಕೋಚಿಂಗ್​ನತ್ತ ಮುಖ ಮಾಡಿದ ರಾಹುಲ್‌ ದ್ರಾವಿಡ್‌!

ಯಶಸ್ವಿ ಜೈಸ್ವಾಲ್ ಪವರ್ ಪ್ಲೇ ಅವಧಿಯಲ್ಲಿ ಅರ್ಧ ಶತಕ ಬಾರಿಸಿದ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡರು. ಅವರು 25 ಎಸೆತಗಳಿಗೆ 53 ರನ್ ಬಾರಿಸಿದ್ದರು. ಈ ಮೂಲಕ ಅವರು ಭಾರತ ತಂಡದ ಪರಿವಾಗಿ ಹೊಸ ದಾಖಲೆ ಬರೆದರು.

Exit mobile version