Site icon Vistara News

ind vs ban : ಭಾರತ ತಂಡಕ್ಕೆ ಬಾಂಗ್ಲಾ ವಿರುದ್ಧ 7 ವಿಕೆಟ್​ ಸುಲಭ ಜಯ

Virat kohli

ಪುಣೆ: ಬೌಲರ್​ಗಳ ಸಾಹಸ ಹಾಗೂ ವಿರಾಟ್​ ಕೊಹ್ಲಿಯ (ಅಜೇಯ 103 ರನ್​) ಅಮೋಘ ಶತಕದ ನೆರವಿನಿಂದ ಮಿಂಚಿದ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ (ind vs ban) ವಿಶ್ವ ಕಪ್​ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ವಿಜಯ ಸಾಧಿಸಿದೆ. ಇದು ಭಾರತ ತಂಡಕ್ಕೆ ಹಾಲಿ ವಿಶ್ವ ಕಪ್​ನಲ್ಲಿ ಸತತ ನಾಲ್ಕನೇ ಗೆಲುವಾಗಿದೆ. ಚಈ ಮೂಲಕ ಭಾರತ ತಂಡ ವಿಶ್ವ ಕಪ್​ನಲ್ಲಿ (ICC World Cup 2023) ಅಜೇಯ ಓಟವನ್ನು ಮುಂದುವರಿಸಿದ್ದು, ಪ್ರಶಸ್ತಿ ಕಡೆಗೆ ದಾಪುಗಾಲು ಇಟ್ಟಿದೆ.

ಇಲ್ಲಿನ ಎಂಸಿಎ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಅವಕಾಶ ಸಿಕ್ಕಾಗ ರನ್​ ಗಳಿಸುತ್ತಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟ ಮಾಡಿಕೊಂಡು 256 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ 41.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 261 ರನ್ ಬಾರಿಸಿ ಗೆಲುವು ಸಾಧಿಸಿತು. ಭಾರತ ತಂಡ ಪರವಾಗಿ ಯುವ ಬ್ಯಾಟರ್ ಶುಭ್​ಮನ್ ಗಿಲ್​ (53) ಅರ್ಧ ಶತಕ ಬಾರಿಸಿ ಗೆಲುವಿಗೆ ತಮ್ಮ ಕೊಡುಗೆ ಕೊಟ್ಟರು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ರೋಹಿತ್​ ಶರ್ಮಾ (48) ಮತ್ತೊಂದು ಬಾರಿ ಸ್ಫೋಟಕ ಬ್ಯಾಟಿಂಗ್ ಮಾಡಿ ವಿಶ್ವಾಸ ಮೂಡಿಸಿದರು. ಹೀಗಾಗಿ ಮೊದಲ ವಿಕೆಟ್​ಗೆ 88 ರನ್​ಗಳನ್ನು ಭಾರತ ಸೇರಿಸಿತು. ಆದರೆ, 48 ರನ್ ಬಾರಿಸಿದ್ದ ಅವರ ಹಸನ್​ ಮುಹಮ್ಮದ್ ಎಸೆತಕ್ಕೆ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಔಟಾದರು. ಬಳಿಕ ವಿರಾಟ್ ಕೊಹ್ಲಿ ಶುಭ್​ಮನ್ ಗಿಲ್​ ಇನಿಂಗ್ಸ್ ಕಟ್ಟಿದರು. ಹೀಗಾಗಿ ತಂಡದ ರನ್​ ಗಳಿಕೆ ವೇಗ ಪಡೆಯಿತು.

ಉತ್ತಮ ರೀತಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಶುಭ್​ಮನ್ ಗಿಲ್ 53 ರನ್​ ಬಾರಿಸಿ ಔಟಾದರು. ಅವರು ಮೆಹೆದಿ ಹಸನ್ ಎಸೆತಕ್ಕೆ ಬೌಂಡರಿ ಲೈನ್​ನಲ್ಲಿ ಮಹಮದುಲ್ಲಾ ಅವರಿಗೆ ಕ್ಯಾಚ್ ನೀಡಿ ಔಟಾಗಿದ್ದಾರೆ. ಅದಕ್ಕಿಂತ ಮೊದಲು ಅವರು 55 ಎಸೆತಗಳಲ್ಲಿ 5 ಫೋರ್ ಹಾಗೂ 2 ಸಿಕ್ಸರ್​ ಸಮೇತ ಅರ್ಧ ಶತಕ ಬಾರಿಸಿದ್ದರು. ಗಿಲ್ ಔಟಾದ ಹೊರತಾಗಿಯೂ ಭಾರತ ತಂಡ ಉತ್ತಮ ಸ್ಥಿತಿಯಲ್ಲಿತ್ತು. 19.4 ಓವರ್​ಗಳಲ್ಲಿ 137 ರನ್ ಬಾರಿಸಿತ್ತು. ಬಳಿಕ ಶ್ರೇಯಸ್ ಸ್ವಲ್ಪ ಹೊತ್ತು ಆಡಿದರು. ಹೀಗಾಗಿ 20 ಓವರ್​ಗಳ ಅಂತ್ಯಕ್ಕೆ ಭಾರತ 142 ರನ್​ ಬಾರಿಸಿದ್ದು ಗೆಲುವಿನ ಅವಕಾಶಗಳನ್ನು ಸೃಷ್ಟಿಸಿಕೊಂಡಿತಲ್ಲದೆ, 23ನೇ ಓವರ್​ಗೆ 150 ರನ್ ಬಾರಿಸಿತು. ಏತನ್ಮಧ್ಯೆ ​ ಕೊಹ್ಲಿ ಅರ್ಧ ಶತಕ ಪೂರೈಸಿದರು. ಅವರು 48 ಎಸೆತಗಳಲ್ಲಿ 50 ರನ್ ಬಾರಿಸಿದರು. ಇದು ಅವರು 69ನೇ ಏಕ ದಿನ ಅರ್ಧ ಶತಕ. ಹಾಲಿ ವಿಶ್ವ ಕಪ್​ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕವಾಗಿದೆ.

25 ಎಸೆತಗಳಲ್ಲಿ 2 ಫೋರ್ ಸಮೇತ 19 ರನ್ ಬಾರಿಸಿದ್ದ ಅಯ್ಯರ್​ ವಿಕೆಟ್​ ಒಪ್ಪಿಸಿದರು. ಮೆಹೆದಿ ಹಸನ್ ಸ್ಪಿನ್ ಬೌಲಿಂಗ್​ಗೆ ಮಿಡ್​ವಿಕೆಟ್​ ಕಡೆಗೆ ಸಿಕ್ಸರ್ ಹೊಡೆಯಲು ಮುಂದಾದ ಅವರು ಮಹಮದುಲ್ಲಾ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಮತ್ತೊಂದು ಬಾರಿ ಅವರು ನಿರಾಸೆ ಮೂಡಿಸಿದರು. ಇದಾದ ಬಳಿಕ ಆಡಲು ಬಂದ ಕೆ ಎಲ್ ರಾಹುಲ್ ವಿಶ್ವಾಸದಿಂದಲೇ ಆಡಿದರು. ಅವರು 34 ಎಸೆತಗಳಲ್ಲಿ 3 ಫೋರ್​ ಹಾಗೂ 1 ಸಿಕ್ಸರ್ ಸಮೇತ 34 ರನ್ ಬಾರಿಸಿ ಮಿಂಚಿದರು. ಅವರಿಗೆ ಅರ್ಧ ಶತಕ ಬಾರಿಸುವ ಅವಕಾಶ ಇದ್ದರೂ ಕೊಹ್ಲಿಯ ಶತಕಕ್ಕಾಗಿ ಅವರು ಅವಕಾಶಗಳನ್ನು ಬಿಟ್ಟುಕೊಟ್ಟರು.

ಕೊಹ್ಲಿಯ ಶತಕ ಸಂಭ್ರಮ

ಕ್ರೀಸ್​ಗೆ ತಳವೂರಿ ಆಡುತ್ತಿದ್ದ ಕೊಹ್ಲಿಗೆ ಶತಕ ಬಾರಿಸುವ ಅವವಕಾಶ ಸೃಷ್ಟಿಯಾಯಿತು. ಒಮ್ಮಿಂದೊಮ್ಮೆಲೆ ಬೌಂಡರಿ ಸಿಕ್ಸರ್​ಗಳನ್ನು ಬಾರಿಸಲು ಮುಂದಾದ ಅವರು ವಿಜಯದ ಸಿಕ್ಸರ್ ಸಮೇತ 103 ರನ್ ಬಾರಿಸಿದರು. ಇದು ಹಾಲಿ ವಿಶ್ವ ಕಪ್​ನಲ್ಲಿ ಅವರ ಮೊದಲ ಶತಕ ಹಾಗೂ ಏಕ ದಿನ ಮಾದರಿಯಲ್ಲಿ 48ನೇ ಶತಕವಾಗಿದೆ. ಏಕ ದಿನ ಕ್ರಿಕೆಟ್​ನಲ್ಲಿ 49 ಶತಕ ಬಾರಿಸಿರುವ ದಿಗ್ಗಜ ಸಚಿನ್​ ತೆಂಡೂಲ್ಕರ್ ಅವರಿಗಿಂತ ಕೊಹ್ಲಿ ಈಗ ಒಂದು ಶತಕ ಹಿಂದಿದ್ದಾರೆ. ಕೊಹ್ಲಿಯ ಶತಕದ ಶ್ರೇಯ ರಾಹುಲ್​ಗೆ ಸಲ್ಲಬೇಕು. ಅವರು ಸ್ಟ್ರೈಕ್ ಸಂಪೂರ್ಣವಾಗಿ ಕೊಹ್ಲಿಗೆ ಬಿಟ್ಟುಕೊಟ್ಟು ಆಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

ಬಾಂಗ್ಲಾದ ಉತ್ತಮ ಆರಂಭದ ಬಳಿಕ ಕುಸಿತ

ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾದೇಶ ತಂಡ ಉತ್ತಮ ಆರಂಭವನ್ನೇ ಪಡೆಯಿತು. 14.4 ಓವರ್​ಗಳಲ್ಲಿ 93 ರನ್​ ಬಾರಿಸುವ ಮೂಲಕ ದೊಡ್ಡ ಸ್ಕೋರ್ ಗಳಿಸುವ ಗುರಿಯನ್ನು ವ್ಯಕ್ತಪಡಿಸಿತು. ಆದರೆ, ಕುಲ್ದೀಪ್​ ಯಾದವ್ ಅವರ ಅಮೋಘ ಕೈಚಳಕಕ್ಕೆ ಅರ್ಧ ಶತಕ ಬಾರಿಸಿದ್ದ ತಂಜಿದ್ ಹಸನ್​ (51) ಎಲ್​ಬಿಡಬ್ಲ್ಯು ಆಗಿ ಔಟಾದರು. ಮೊದಲ ವಿಕೆಟ್​ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ತಕ್ಷಣವೇ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಬಳಿಕ ಬಂದ ಹಂಗಾಮಿ ನಾಯಕ ನಜ್ಮುಲ್ ಶಾಂಟೊ 8 ರನ್​ಗೆ ಔಟಾದರು. ಅವರು ಜಡೇಜಾ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯು ಆದರು. ಏತನ್ಮಧ್ಯೆ ರನ್​ ಗಳಿಕೆಗೆ ವೇಗ ಕೊಟ್ಟ ಮತ್ತೊಬ್ಬ ಆರಂಭಿಕ ಆಟಗಾರ ಲಿಟನ್​ ದಾಸ್​ 66 ರನ್​ಗಳಿಗೆ ಔಟಾದರು. ಜಡೇಜಾ ಎಸೆತಕ್ಕೆ ದೊಡ್ಡ ಹೊಡೆದ ಬಾರಿಸಲು ಮುಂದಾದ ಅವರು ಗಿಲ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ಈ ಸುದ್ದಿಗಳನ್ನೂ ಓದಿ
IND vs BAN: ಹಾರ್ದಿಕ್​ ಪಾಂಡ್ಯಗೆ ಗಾಯ; ಟೀಮ್​ ಇಂಡಿಯಾಕ್ಕೆ ಆತಂಕ
KL Rahul : ಜಿಂಕೆಯಂತೆ ಚಂಗನೆ ನೆಗೆದು ಅದ್ಭುತ್ ಕ್ಯಾಚ್ ಹಿಡಿದ ಕೆ. ಎಲ್​ ರಾಹುಲ್​

ನಾಲ್ಕನೇ ಬ್ಯಾಟರ್ ಆಗಿ ಆಡಲು ಬಂದ ಮೆಹೆದಿ ಹಸನ್​ ವೇಗಿ ಮೊಹಮ್ಮದ್ ಸಿರಾಜ್​ಗೆ ವಿಕೆಟ್​ ಒಪ್ಪಿಸಿದರು. ವಿಕೆಟ್​ ಕೀಪರ್ ಕೆ. ಎಲ್​ ರಾಹುಲ್ ಹಿಡಿದ ಅದ್ಭುತ ಕ್ಯಾಚ್​ಗೆ ಅವರು ಬಲಿಯಾದರು. ಇದಾದ ಬಳಿಕ ಆಡಲು ಬಂದ ತೌಹಿದ್ ಹೃದೋಯ್ 16 ರನ್​ ಬಾರಿಸಿ ಕ್ರೀಸ್​ನಲ್ಲಿ ತಳವೂರುವ ಲಕ್ಷಣ ತೋರಿದರು. ಇವರಿಗೆ ವಿಕೆಟ್​ಕೀಪರ್​ ಮುಷ್ಫಿಕರ್​ ರಹೀಮ್​ (38) ಸಾಥ್ ಕೊಟ್ಟರು. ಹೃದೋಯ್​ ಠಾಕೂರ್​ಗೆ ವಿಕೆಟ್​ ಒಪ್ಪಿಸಿದರೆ, ಬುಮ್ರಾ ಎಸೆತಕ್ಕೆ 38 ರನ್ ಬಾರಿಸಿ ಔಟಾದರು. ಜಡೇಜಾ ಹಿಡಿದ ಅದ್ಭುತ ಕ್ಯಾಚ್​ಗೆ ಮುಷ್ಫಿಕರ್ ವಿಕೆಟ್​ ಒಪ್ಪಿಸಿದರು.

ನಸುಮ್ ಅಹಮದ್​​ 14 ರನ್ ಬಾರಿಸಿ ಔಟಾದರು. ಮಹಮದುಲ್ಲಾ 46 ರನ್​ ಬಾರಿಸಿ ಮಿಂಚಿದರು.

ಭಾರತ ತಂಡದ ಪರ ಬೌಲಿಂಗ್​ನಲ್ಲಿ ಬುಮ್ರಾ 2 ವಿಕೆಟ್​ ಉರುಳಿಸಿದರೆ, ಸಿರಾಜ್​ 2 ವಿಕೆಟ್ ತಮ್ಮದಾಗಿಸಿಕೊಂಡರು. ರವೀಂದ್ರ ಜಡೇಜಾ ಪ್ರಮುಖ ಎರಡು ವಿಕೆಟ್​ಗಳನ್ನು ಉರುಳಿಸಿದರೆ, ಶಾರ್ದೂಲ್​ ಠಾಕೂರ್ ಹಾಗೂ ಕುಲ್ದೀಪ್​ ಯಾದವ್​ ತಲಾ 1 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version