Site icon Vistara News

IND vs ENG | ಆತಿಥೇಯ ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 88 ರನ್ ಭರ್ಜರಿ ಜಯ, ಏಕ ದಿನ ಸರಣಿ ಕೈವಶ

IND vs ENG

ಕ್ಯಾಂಟೆರ್‌ಬರಿ : ಪ್ರವಾಸಿ ಭಾರತೀಯ ಮಹಿಳೆಯರ ತಂಡ ಅದ್ಧೂರಿ ಪ್ರದರ್ಶನದೊಂದಿಗೆ ಇಂಗ್ಲೆಂಡ್‌ ವಿರುದ್ಧದ ಏಕ ದಿನ ಸರಣಿಯ ಎರಡನೇ ಪಂದ್ಯವನ್ನು ಭರ್ಜರಿ ೮೮ ರನ್‌ಗಳಿಂದ ವಶಪಡಿಸಿಕೊಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೆ ಕೈವಶ ಮಾಡಿಕೊಂಡಿತು.

ಇಲ್ಲಿನ ಸೇಂಟ್ ಲಾರೆನ್ಸ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೫೦ ಓವರ್‌ಗಳಲ್ಲಿ ೫ ವಿಕೆಟ್‌ ನಷ್ಟಕ್ಕೆ ೩೩೩ ರನ್‌ ಬಾರಿಸಿತು. ಗುರಿ ಆತಿಥೇಯ ಬಳಗ ೪೪.೨ ಓವರ್‌ಗಳಲ್ಲಿ ೨೪೫ ರನ್‌ ಬಾರಿಸಿ ಸರ್ವಪತನ ಕಾಣುವುದರೊಂದಿಗೆ ಸೋಲಿಗೆ ಸುಳಿಗೆ ಸಿಲುಕಿತು. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಏಳು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಹೀಗಾಗಿ ಸರಣಿ ಭಾರತದ ಕೈವಶಗೊಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭಿಕ ಕುಸಿತ ಕಂಡಿತು. ಶಫಾಲಿ ವರ್ಮ ೮ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ, ಕಳೆದ ಪಂದ್ಯದ ಹೀರೊ ಸ್ಮೃತಿ ಮಂಧಾನ ೪೦ ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವೆಲ್ಲರ ನಡುವೆ, ಮಧ್ಯಮ ಕ್ರಮಾಂಕದಲ್ಲಿ ಜೀವನ ಶ್ರೇಷ್ಠ ಬ್ಯಾಟಿಂಗ್ ಮಾಡಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ೧೧೧ ಎಸೆತಗಳಿಗೆ ಅಜೇಯ ೧೪೩ ರನ್‌ ಬಾರಿಸಿ ಭಾರತ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು. ಇವರ ಇನಿಂಗ್ಸ್‌ನಲ್ಲಿ ೪ ಸಿಕ್ಸರ್‌ ಹಾಗೂ ೧೮ ಫೋರ್‌ಗಳೂ ಸೇರಿಕೊಂಡಿದ್ದವು. ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಇಳಿದ ಹರ್ಲಿನ್‌ ದೇವಲ್‌ ೫೮ ರನ್‌ ಬಾರಿಸಿದರು. ಈ ಬ್ಯಾಟರ್‌ಗಳ ಸಾಹಸದಿಂದ ಭಾರತ ತಂಡ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಸವಾಲು ನೀಡಿತು.

ದೊಡ್ಡ ಗುರಿ ಬೆನ್ನಟ್ಟಲು ಆರಂಭಿಸಿದ ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟರ್‌ಗಳನ್ನು ಭಾರತೀಯ ಬೌಲರ್‌ಗಳು ಬೇಗನೆ ಪೆವಿಲಿಯನ್‌ಗೆ ಅಟ್ಟಿದರು. ಆದರೆ ಡ್ಯಾನಿ ವೇಟ್ ೬೫ ರನ್‌ ಬಾರಿಸಿ ಆತಿಥೇಯ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಸ್ಕೋರ್‌ ವಿವರ

ಭಾರತ ಮಹಿಳೆಯರು: ೫೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೩೩೩ (ಹರ್ಮನ್‌ಪ್ರೀತ್ ಕೌರ್‌ ೧೪೩, ಹರ್ಲಿನ್ ದೇವಲ್‌ ೫೮, ಸ್ಮೃತಿ ಮಂಧಾನಾ ೪೦., ಚಾರ್ಲಿ ಡೀನ್‌ ೩೧ಕ್ಕೆ೧)

ಇಂಗ್ಲೆಂಡ್‌ ಮಹಿಳೆಯರು : ೪೪.೨ ಓವರ್‌ಗಳಲ್ಲಿ ೨೪೫ಕ್ಕೆ ಆಲ್‌ಔಟ್‌ (ಡ್ಯಾನಿ ವೇಟ್‌ ೬೫, ಅಲೈಸ್‌ ಕ್ಯಾಪ್ಸಿ ೩೯, ಆಮಿ ಜೋನ್ಸ್‌ ೩೯, ರೇಣುಕಾ ಸಿಂಗ್‌ ೫೭ಕ್ಕೆ ೪).

ಇದನ್ನೂ ಓದಿ | Team India | ಇಂಗ್ಲೆಂಡ್‌ ತಂಡದ ವಿರುದ್ಧ ಭಾರತೀಯ ಮಹಿಳೆಯರಿಗೆ 7 ವಿಕೆಟ್‌ ಜಯ

Exit mobile version