ಡಬ್ಲಿನ್ (ಐರ್ಲೆಂಡ್): ಐರ್ಲೆಂಡ್ ಪ್ರವಾಸದ ಟಿ20 ಸರಣಿಯ (ind vs Ireland) ಮೊದಲ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದಂತೆ 2 ರನ್ಗಳ ರೋಚಕ ವಿಜಯ ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಭಾರತ ತಂಡದ ಬೌಲರ್ಗಳು ಆತಿಥೇಯ ತಂಡ ಹೆಚ್ಚು ರನ್ ಗಳಿಸದಂತೆ ನೋಡಿಕೊಂಡ ಕಾರಣ ಮಳೆಯ ಅಡಚಣೆಯ ನಡುವೆಯೂ ಭಾರತ ತಂಡಕ್ಕೆ ವಿಜಯ ದೊರಕಿತು. ಈ ಗೆಲುವಿನೊಂದಿಗೆ 11 ತಿಂಗಳ ಗಾಯದ ಸಮಸ್ಯೆ ಬಳಿಕ ತಂಡಕ್ಕೆ ಮರಳಿದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಶುಭಾರಂಭ ಮಾಡಿದ್ದಾರೆ. ಅವರ ಹಂಗಾಮಿ ನಾಯಕತ್ವದ ತಂಡವೂ ಸರಣಿಯಲ್ಲಿ ಮುನ್ನಡೆ ದಾಖಲಿಸಿಕೊಂಡಿದೆ.
ಮಲಾಹೈಡ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆತಿಥೇಯ ಐರ್ಲೆಂಡ್ ಬಳಗ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಮಳೆ ಸುರಿಯುವುದಕ್ಕಿಂತ ಮುಂಚೆ 6. 5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿತು. ಮಳೆಯಿಂದ ಪಂದ್ಯವನ್ನು ಅನಿವಾರ್ಯವಾಗಿ ಮೊಟಕುಗೊಳಿಸುವ ಮೊದಲು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ ತಂಡಕ್ಕೆ ಗೆಲುವು ಲಭಿಸಿತು.
ಬುಮ್ರಾ, ಪ್ರಸಿದ್ಧ್ ಭರ್ಜರಿ ಬೌಲಿಂಗ್
ಭಾರತ ತಂಡದ ಪರ ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದು ವಾಪಸ್ ಬಂದಿದ್ದ ಜಸ್ಪ್ರಿತ್ ಬುಮ್ರಾ (2 ವಿಕೆಟ್, 4 ಓವರ್, 24 ರನ್ ) ಹಾಗೂ ಪ್ರಸಿದ್ಧ್ ಕೃಷ್ಣ (2 ವಿಕೆಟ್, 4 ಓವರ್, 32 ರನ್) ಮಿಂಚಿದರು. ಬುಮ್ರಾ ಇನಿಂಗ್ಸ್ನ ಮೊದಲ ಓವರ್ನಲ್ಲಿಯೇ ಎರಡು ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದದರು. ಅದೇ ರೀತಿ ಪ್ರಸಿದ್ಧ್ ಕೃಷ್ಣ ಕೂಡ ಪ್ರಮುಖ ವಿಕೆಟ್ಗಳನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ : Jasprit Bumrah : ಪುನರಾಗಮನದಲ್ಲಿ ಸಂಚಲನ ಮೂಡಿಸಿದ ವೇಗಿ ಜಸ್ಪ್ರಿತ್ ಬುಮ್ರಾ
ಆತಿಥೇಯ ಐರ್ಲೆಂಡ್ ಆರಂಭದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡಿತು. ಭಾರತದ ಬೌಲಿಂಗ್ ಮೊನಚಿಗೆ ತಲೆಬಾಗಿತು. ಆದರೆ ಕೊನೆ ಹಂತದಲ್ಲಿ ಬ್ಯಾರಿ ಮೆಕ್ಕಾರ್ತಿ 33 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಫೋರ್ ಸಮೇತ 51 ರನ್ ಬಾರಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಅದಕ್ಕಿಂತ ಮೊದಲು ಕರ್ಟಿಸ್ ಕ್ಯಾಂಪೆರ್ 39 ರನ್ ಗಳಿಸಿದರು. ಮಾರ್ಕ್ ಅಡೈರ್ 16 ರನ್ ಗಳಿಸಿದರು.
ತಿಲಕ್ ವರ್ಮಾ ವಿಫಲ
ಭಾರತ ತಂಡ ಉತ್ತಮ ಆರಂಭ ಪಡೆದ ಹೊರತಾಗಿಯೂ ಹೆಚ್ಚಿನ ಸತತವಾಗಿ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಒಳಗಾಯಿತು. ಆದರೆ, ಮಳೆ ಭಾರತಕ್ಕೆ ನೆರವು ಕೊಟ್ಟಿತು. ಅದಕ್ಕಿಂತ ಮೊದಲು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಬ್ಯಾಟ್ ಮಾಡಿ 23 ಎಸೆತಗಳಲ್ಲಿ 24 ರನ್ ಬಾರಿಸಿ ಔಟಾದರು. ಋತುರಾಜ್ ಗಾಯಕ್ವಾಡ್ 19 ರನ್ ಕೊಡುಗೆ ಕೊಟ್ಟರು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ತಿಲಕ್ ವರ್ಮಾ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಎದುರಿಸಿದರು.
ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯ ಆಗಸ್ಟ್ 20ರಂದು ನಡೆಯಲಿದೆ. ಮೂರನೇ ಪಂದ್ಯ ಆಗಸ್ಟ್ 23ಕ್ಕೆ ನಿಗದಿಯಾಗಿದೆ. ಭಾರತದ ವಿರುದ್ಧ ಐರ್ಲೆಂಡ್ ತಂಡ ಇದುವರೆಗೆ ಸರಣಿ ಗೆದ್ದಿಲ್ಲ.