ಪಲ್ಲೆಕೆಲೆ: ಏಷ್ಯಾ ಕಪ್ (Asia Cup 2023) ಟೂರ್ನಿಯ ಲೀಗ್ ಹಂತದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 10 ವಿಕೆಟ್ ಸುಲಭ ಜಯ ದಾಖಲಿಸಿದೆ. ಮಳೆಯ ಅಡಚಣೆ ಹಾಗೂ ದುರ್ಬಲ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ಆರಂಭಿಕ ಬ್ಯಾಟರ್ಗಳಾದ ರೋಹಿತ್ ಶರ್ಮಾ (74) ಹಾಗೂ ಶುಭ್ಮನ್ ಗಿಲ್ (67) ಅವರ ಅಬ್ಬರದ ಪ್ರದರ್ಶನ ಹಿನ್ನೆಲೆಯಲ್ಲಿ ಭಾರತಕ್ಕೆ ಗೆಲುವು ಲಭಿಸಿತು. ಈ ಗೆಲುವಿನೊಂದಿಗೆ ಗುಂಪು 1ರಲ್ಲಿರುವ ಭಾರತ ತಂಡ ಎರಡನೇ ತಂಡವಾಗಿ ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಿತು. ಈ ಗುಂಪಿನಿಂದ ಪಾಕಿಸ್ತಾನ ತಂಡ ಈಗಾಗಲೇ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿದೆ.
ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 48.2 ಓವರ್ಗಳಲ್ಲಿ 230 ರನ್ಗಳಿಗೆ ಆಲ್ಔಟ್ ಆಯಿತು. ಭಾರತ ತಂಡ ಗುರಿ ಬೆನ್ನಟ್ಟಲು ಆರಂಭಿಸುತ್ತಿದ್ದಂತೆ ಮಳೆ ಆರಂಭವಾಯಿತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 23 ಓವರ್ಗಳಲ್ಲಿ 145 ರನ್ ಬಾರಿಸುವ ಸವಾಲು ಎದುರಾಯಿತು. ಬಾಂಗ್ಲಾದೇಶದ ಬೌಲರ್ಗಳನ್ನು ಪುಡಿಗಟ್ಟಿದ ರೋಹಿತ್ ಹಾಗೂ ಶುಭ್ಮನ್ 20.1 ಓವರ್ಗಳಲ್ಲಿ 147 ರನ್ ಬಾರಿಸಿ ಗೆಲುವು ತಂದುಕೊಟ್ಟರು.
ಇದನ್ನೂ ಓದಿ : Virat kohli : ಕೊಹ್ಲಿ ಕೂಗಿದ ಅಭಿಮಾನಿಗಳು; ಅಶ್ಲೀಲ ಸನ್ನೆ ಮಾಡಿದ ಗೌತಮ್ ಗಂಭೀರ್
ಭಾರತದ ಇನಿಂಗ್ಸ್ಗೆ ಮಳೆ ಅಡಚಣೆ ಮಾಡುವ ಮೊದಲು 2.1 ಓವರ್ಗಳಲ್ಲಿ 12 ರನ್ ಬಾರಿಸಿತ್ತು. ಈ ವೇಳೆ ಭಾರತದ ಗೆಲುವಿಗೆ ಐದರೊಳಗಿನ ಒಳಗಿನ ಸರಾಸರಿ ರನ್ ಬೇಕಾಗಿತ್ತು. ಡಕ್ವರ್ತ್ ಲೂಯಿಸ್ ನಿಯಮ ಅನ್ವಯಗೊಂಡ ಬಳಿಕ ಅದು 6ಕ್ಕೂ ಅಧಿಕವಾಯಿತು. ಆದರೆ, ರೋಹಿತ್ ಮತ್ತು ಶುಭ್ಮನ್ ಗಿಲ್ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಗೆಲುವು ತಂದುಕೊಟ್ಟರು.
ದುರ್ಬಲ ಫೀಲ್ಡಿಂಗ್
ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ ಉತ್ತಮವಾಗಿಯೇ ಆಡಿತು. ಆದರೆ, ಭಾರತದ ಫೀಲ್ಡರ್ಗಳು ಅತ್ಯಂತ ಕಳಪೆ ಫೀಲ್ಡಿಂಗ್ ನಡೆಸಿತು. ಅತ್ಯಂತ ನಿರ್ಲಕ್ಷ್ಯದಿಂದ ಆಡಿತು. ಮೊದಲ 26 ಎಸೆತಗಳ ಒಳಗೆ ಮೂರು ಬಾರಿ ಕ್ಯಾಚ್ ಡ್ರಾಪ್ ಮಾಡುವ ಮೂಲಕ ಬೇಜವಾಬ್ದಾರಿತನ ಮೆರೆಯಿತು. ಹೀಗಾಗಿ ನೇಪಾಳದ ಆರಂಭಿಕ ಬ್ಯಾಟರ್ಗಳು ಮೊದಲ ವಿಕೆಟ್ಗೆ 65 ರನ್ ಪೇರಿಸಿದರು. ಅದರಲ್ಲೂ ಆಸಿಫ್ ಶೇಖ್ (58) ಅರ್ಧ ಶತಕ ಬಾರಿಸಿದರು. ಸಿಕ್ಕ ಎರಡು ಜೀವದಾನಗಳನ್ನು ಅವರು ಉತ್ತಮವಾಗಿ ಬಳಸಿಕೊಂಡರು. ಕುಶಾಲ್ ಭುರ್ಟೆಲ್ (38) ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸೋಮ್ಪಾಲ್ ಕಾಮಿ (48) ಭರ್ಜರಿ ಬ್ಯಾಟಿಂಗ್ ನಡೆಸಿ ಭಾರತ ತಂಡಕ್ಕೆ ನಡುಕ ಹುಟ್ಟಿಸಿದರು. ಗುಲ್ಶನ್ ಜಾ (23) ಹಾಗೂ ದೀಪೇಂದರ್ ಸಿಂಗ್ (29) ತಮ್ಮ ಕೊಡುಗೆ ಕೊಟ್ಟರು.
ಭಾರತ ಪರ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಉರುಳಿಸಿದರು.