ಧರ್ಮಶಾಲಾ: ಮೊಹಮ್ಮದ್ ಶಮಿಯ (54 ರನ್ಗಳಿಗೆ 5 ) ಮಾರಕ ಬೌಲಿಂಗ್ ಸಾಧನೆ ಹಾಗೂ ವಿರಾಟ್ ಕೊಹ್ಲಿಯ ಅಮೋಘ ಅರ್ಧ ಶತಕ (95 ರನ್) ನೆರವಿನಿಂದ ಮಿಂಚಿದ ಭಾರತ ತಂಡ ನ್ಯೂಜಿಲ್ಯಾಂಡ್ (Ind vs NZ) ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ 4 ವಿಕೆಟ್ಗಳ ವಿಜಯ ದಾಖಲಿಸಿದೆ. ಇದು ಭಾರತ ತಂಡಕ್ಕೆ ವಿಶ್ವ ಕಪ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 20 ವರ್ಷಗಳ ಬಳಿಕ ಲಭಿಸಿದ ಗೆಲುವಾಗಿದೆ. 2003ರಲ್ಲಿ ಐಸಿಸಿ ವಿಶ್ವ ಕಪ್ನಲ್ಲಿ ಭಾರತ ತಂಡ ಕೊನೇ ಬಾರಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿತ್ತು. ಅದೇ ರೀತಿ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಅಜೇಯ ಓಟ ಮುಂದುವರಿಸಿದ್ದು, ಐದನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಭಾರತದ ಖಾತೆಯಲ್ಲೀಗ 10 ಅಂಕಗಳಿವೆ.
India 🇮🇳 make it FIVE in a row!
— BCCI (@BCCI) October 22, 2023
Ravindra Jadeja with the winning runs 🔥🔥
King Kohli 👑 reigns supreme in yet another run-chase for #TeamIndia 😎#CWC23 | #MenInBlue | #INDvNZ pic.twitter.com/d6pQU7DSra
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ನಿಗದಿತ 50 ಓವರ್ಗಳಲ್ಲಿ 273 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 48 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಬಾರಿಸಿ ಗೆಲುವು ಸಾಧಿಸಿತು. ಇದರೊಂದಿಗೆ ನ್ಯೂಜಿಲ್ಯಾಂಡ್ನ ಡ್ಯಾರೆಲ್ ಮಿಚೆಲ್ (130) ಅವರ ಶತಕದ ಸಾಧನೆ ಮಂಕಾಯಿತು.
ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಮೊದಲ ವಿಕೆಟ್ಗೆ 71 ರನ್ ಬಾರಿಸಿ ಉತ್ತಮ ಆರಂಭ ಪಡೆಯಿತು. ಆದರೆ, ಅತ್ಯುತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ರೋಹಿತ್ ಶರ್ಮಾ ಲೂಕಿ ಫರ್ಗ್ಯೂಸನ್ ಎಸೆತಕ್ಕೆ ಇನ್ಸೈಡ್ ಎಜ್ ಆಗಿ ಬೌಲ್ಡ್ ಅದರು. ಅವರು 40 ಎಸೆತಗಳಲ್ಲಿ 46 ರನ್ ಬಾರಿಸಿದರು. ಬಳಿಕ 31 ಎಸೆತಕ್ಕೆ 26 ರನ್ ಗಳಿಸಿದ್ದ ಶುಭ್ಮನ್ ಗಿಲ್ ಔಟಾದರು. ವೇಗದ ಬೌಲರ್ ಲೂಕಿ ಫರ್ಗ್ಯೂಸನ್ ಎಸೆತಕ್ಕೆ ಸಿಕ್ಸರ್ ಬಾರಿಸಲು ಮುಂದಾದ ಗಿಲ್ ಡ್ಯಾರಿಲ್ ಮಿಚೆಲ್ಗೆ ಕ್ಯಾಚ್ ನೀಡಿದರು ಈ ವೇಳೆ ಭಾರತ ತಂಡ 74 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು.
ಕೊಹ್ಲಿ ಅಮೋಘ ಆಟ
ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಉತ್ತಮವಾಗಿ ರನ್ ಗಳಿಸುವ ಜತೆಗೆ ತಂಡವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡು ಇನಿಂಗ್ಸ್ ಕಟ್ಟಿದರು. ಏತನ್ಮಧ್ಯೆ ಶ್ರೇಯಸ್ ಅಯ್ಯರ್ 29 ಎಸೆತಗಳಿಗೆ 33 ರನ್ ಗಳಿಸಿ ಔಟಾದರು. ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಕಾನ್ವೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ಬ್ಯಾಟಿಂಗ್ ಮುಂದುವರಿಸಿ ಗೆಲುವಿನ ಹಾದಿಯನ್ನು ತುಳಿದರು. ಆದರೆ, ಕೊಹ್ಲಿಗೆ ಉತ್ತಮವಾಗಿ ಸಾಥ್ ಕೊಡುತ್ತಿದ್ದ ಕೆ. ಎಲ್ ರಾಹುಲ್ 35 ಎಸೆತಕ್ಕೆ 27 ರನ್ ಬಾರಿಸಿ ಮಿಚೆಲ್ ಸ್ಯಾಂಟ್ನರ್ ಎಸೆತಕ್ಕೆ ಎಲ್ಬಿಡಬ್ಲ್ಯು ಆಗಿ ನಿರ್ಗಮಿಸಿದರು.
ಈ ಸುದ್ದಿಯನ್ನೂ ಓದಿ : Rohit Sharma : ಸಿಕ್ಸರ್ ಬಾರಿಸುವುದರಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ
ಅದಾದ ಬಳಿಕ ಭಾರತ ತಂಡ ಅನಗತ್ಯ ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿಯ ನಡುವಿನ ಸಂವಹನದ ಕೊರತೆಯಿಂದಾಗಿ ಸೂರ್ಯ ರನ್ಔಟ್ ಆದರು. ಈ ವೇಳೆ ಕ್ರೀಸ್ಗೆ ಬಂದ ರವೀಂದ್ರ ಜಡೇಜಾ ಕೊಹ್ಲಿಗೆ ಉತ್ತಮವಾಗಿ ಜತೆಯಾಟ ನೀಡಿದರು. ಆದರೆ, ಕೊನೇ ಹಂತದಲ್ಲಿ ಗೆಲುವಿನ ಸಿಕ್ಸರ್ ಹಾಗೂ 49ನೇ ಶತಕ ಬಾರಿಸಲು ಮುಂದಾದ ಕೊಹ್ಲಿ ಗ್ಲೆನ್ ಫಿಲಿಪ್ಸ್ಗೆ ಕ್ಯಾಚ್ ನೀಡಿದ ನಿರಾಸೆಯಿಂದ ಹೊರನಡೆದರು. ಬಳಿಕ ಜಡೇಜಾ ತಂಡವನ್ನು ಗೆಲ್ಲಿಸಿದರು. ಅವರು 39 ರನ್ ಗಳಿಸಿದ್ದರು.
ಮಿಚೆಲ್ ಶತಕದ ಸಾಧನೆ
ಬ್ಯಾಟಿಂಗ್ ಶುರುಮಾಡಿದ ನ್ಯೂಜಿಲ್ಯಾಂಡ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಉತ್ತಮ ಫಾರ್ಮ್ನಲ್ಲಿದ್ದ ಡೆವೋನ್ಕಾನ್ವೆ 9 ಎಸೆತಗಳನ್ನು ಎದುರಿಸಿ ಸೊನ್ನೆಗೆ ಔಟಾದರು. ಈ ವೇಳೆ ತಂಡ 9 ರನ್ ಬಾರಿಸಿತ್ತು. ಸಿರಾಜ್ ಎಸೆತಕ್ಕೆ ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ಗೆ ಅವರು ಕಾನ್ವೆ ಔಟಾದರು. ಅದೇ ರೀತಿ 19 ರನ್ಗೆ ಕಿವೀಸ್ ತಂಡದ ಎರಡನೇ ವಿಕೆಟ್ ಪತನಗೊಂಡಿತ್ತು. ಮತ್ತೊಬ್ಬ ಆರಂಭಿಕ ಬ್ಯಾಟರ್ ವಿಲ್ ಯಂಗ್ 17 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.
ಆರಂಭಿಕ ಹಿನ್ನಡೆಯ ಹೊರತಾಗಿಯೂ ನ್ಯೂಜಿಲ್ಯಾಂಡ್ ತಂಡ ಚೇತರಿಸಿಕೊಂಡಿತು. ರಚಿನ್ ರವಿಂದ್ರ ಹಾಗೂ ಮಿಚೆಲ್ ಭಾರತೀಯ ಬೌಲರ್ಗಳನ್ನು ಹಿಮ್ಮೆಟ್ಟಿಸಿದರು. ಭಾರತ ತಂಡದ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಶತಕದ ಜತೆಯಾಟವಾಡಿತು. ಹಿಂದಿನ ಪಂದ್ಯಗಳಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ್ದ ಭಾರತ ತಂಡ ಈ ಧರ್ಮಶಾಲಾದಲ್ಲಿ ಕೆಟ್ಟ ಫೀಲ್ಡಿಂಗ್ ಪ್ರದರ್ಶನ ನೀಡಿತು. ಈ ಇಬ್ಬರಿಗೆ ಕೆಲವೊಂದು ಜೀವದಾನಗಳನ್ನು ಭಾರತೀಯ ಫೀಲ್ಡರ್ಗಳು ನೀಡಿದರು. ಜಡೇಜಾ ಸಮೇತ ಹಲವರು ಕ್ಯಾಚ್ ಕೈಚೆಲ್ಲಿದರು. ಮಿಚೆಲ್ ಹಾಗೂ ರಚಿನ್ ಜೋಡಿ ಮೂರನೇ ವಿಕೆಟ್ಗೆ 159 ರನ್ ಬಾರಿಸಿತು.
ಶಮಿಯ ಎಸೆತಕ್ಕೆ ರಚಿನ್ ರವಿಂದ್ರ ಔಟಾದ ಬಳಿಕ ನ್ಯೂಜಿಲ್ಯಾಂಡ್ ತಂಡ ರನ್ ಗಳಿಕೆ ವೇಗ ಕಡಿಮೆಯಾಯಿತು. ಅಲ್ಲದೆ, ನಾಐಕ ಟಾಮ್ ಲೇಥಮ್ 5 ರನ್ ಬಾರಿಸಿ ಔಟಾದರು. ಬಳಿಕ ಬಂದ ಗ್ಲೆನ್ ಫಿಲಿಪ್ಸ್ 26 ಎಸೆತಗಳಿಗೆ 23 ರನ್ ಬಾರಿಸಿದರು. ಅದಕ್ಕಿಂತ ಮೊದಲು 100 ಎಸೆತಕ್ಕೆ ಡ್ಯಾರಿಲ್ ಮಿಚೆಲ್ ತಮ್ಮ ಶತಕ ಬಾರಿಸಿದರು. ಈ ವೇಳೆ ಕುಲ್ದೀಪ್ ಯಾದವ್ ಎಸೆತಕ್ಕೆ ಸಿಕ್ಸರ್ ಬಾರಿಸಲು ಹೋಗಿ ಫಿಲಿಪ್ಸ್ ಔಟಾದರು. ಬಳಿಕ ಚಾಪ್ಮನ್ (6 ರನ್) ಬುಮ್ರಾ ಎಸೆತಕ್ಕೆ ಔಟಾದರು. ಕೊನೆಯಲ್ಲಿ ನ್ಯೂಜಿಲ್ಯಾಂಡ್ ಬೇಗ ವಿಕೆಟ್ ಕಳೆದುಕೊಂಡಿತು. ಮಿಚೆಲ್ ಸ್ಯಾಂಟ್ನರ್ ಹಾಗೂ ಮ್ಯಾಟ್ ಹೆನ್ರಿಯನ್ನು ಮೊಹಮ್ಮದ್ ಶಮಿ ಬೌಲ್ಡ್ ಮಾಡಿದರು. ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಡ್ಯಾರಿಲ್ ಮಿಚೆಲ್ 130 ರನ್ಗಳಿಗೆ ಔಟಾದರು. ಅವರು 127 ಎಸೆತಗಳನ್ನು ಎದುರಿಸಿ 8 ಫೋರ್ ಹಾಗೂ 5 ಸಿಕ್ಸರ್ ಬಾರಿಸಿದ್ದರು. ಶಮಿ ಎಸೆತಕ್ಕೆ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು. ಇದು ಭಾರತ ವಿರುದ್ಧ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ಆಟಗಾರೊಬ್ಬರು ನಾಲ್ಕು ದಶಕಗಳ ಬಳಿಕ ಬಾರಿಸಿದ ಶತಕವಾಗಿದೆ.
ಭಾರತ ಪರ ಬೌಲಿಂಗ್ನಲ್ಲಿ ಶಮಿ ಮಿಂಚಿದರೆ, ಕುಲ್ದೀಪ್ ಯಾದವ್ 2 ವಿಕೆಟ್ ಹಾಗೂ ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.