ಕೊಲಂಬೊ: ಏಷ್ಯಾಕಪ್ನ(Asia Cup 2023) ಮಂಗಳವಾರದ ಸೂಪರ್ 4(India vs Sri Lanka Super Fours) ಪಂದ್ಯದಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್ ಶ್ರೀಲಂಕಾ(IND vs SL) ವಿರುದ್ಧ 41 ರನ್ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಮೊದಲ ತಂಡವಾಗಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಲಂಕಾ ಸ್ಪಿನ್ನರ್ಗಳ ದಾಳಿಗೆ ಸಿಲುಕಿ 49.2 ಓವರ್ಗಳಲ್ಲಿ 213 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ 41. 3 ಓವರ್ಗಳಲ್ಲಿ 172 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು.
ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಲು ಹೊರಟ ಸ್ಥಳೀಯ ತಂಡ ಶ್ರೀಲಂಕಾ ಭಾರತದ ಬೌಲರ್ಗಳ ಒತ್ತಡಕ್ಕೆ ಒಳಗಾಯಿತು. ಸತತವಾಗಿ ವಿಕೆಟ್ ಕಳೆದುಕೊಂಡು 171 ರನ್ಗಳಿಗೆ ಸರ್ವಪತನ ಕಂಡಿತು. ಬೌಲಿಂಗ್ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ದುನಿತ್ ವೆಲ್ಲಾಲಗೆ ಅಜೇಯರಾಗಿ 42 ರನ್ ಬಾರಿಸಿ ಭಾರತಕ್ಕೆ ಆತಂಕ ತಂದೊಡ್ಡಿದರು. ಆದರೆ, ಉಳಿದ ಬ್ಯಾಟರ್ಗಳ ನೆರವು ಸಿಗದ ಕಾರಣ ಅವರಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲಾಗಲಿಲ್ಲ. ಒಂದು ವೇಳೆ ಅವರು ತಂಡವನ್ನು ಗೆಲ್ಲಿಸಿದ್ದರೆ ದಿನದ ಹೀರೋ ಆಗುತ್ತಿದ್ದರು.
Consecutive wins in Colombo for #TeamIndia 🙌
— BCCI (@BCCI) September 12, 2023
Kuldeep Yadav wraps things up in style as India complete a 41-run victory over Sri Lanka 👏👏
Scorecard ▶️ https://t.co/P0ylBAiETu#AsiaCup2023 | #INDvSL pic.twitter.com/HUVtGvRpnG
ಮಧ್ಯಮ ಕ್ರಮಾಂಕದಲ್ಲಿ ಧನಂಜಯ ಡಿಸಿಲ್ವಾ ಕೂಡ 41 ರನ್ ಬಾರಿಸಿದರು. ಅವರು ದುನಿತ್ ಜತೆಗೂಡಿ 63 ರನ್ಗಳ ಜತೆಯಾಟವಾಡಿದರು. ಈ ಜತೆಯಾಟ ಭಾರತ ತಂಡಕ್ಕೆ ಸೋಲಿನ ಆತಂಕ ತಂದೊಡ್ಡಿತು. ಆದರೆ, ಜಡೇಜಾ ಧನಂಜಯ ವಿಕೆಟ್ ಪಡೆದು ಭಾರತದ ಗೆಲುವಿಗೆ ಹಾದಿ ಮಾಡಿಕೊಟ್ಟರು. ಬಳಿಕ ಕುಲ್ದೀಪ್ ಯಾದವ್ ತಮ್ಮ ಸ್ಪೆಲ್ನ ಕೊನೇ ಓವರ್ನಲ್ಲಿ ಸತತ ಎರಡು ವಿಕೆಟ್ಗಳನ್ನು ಕಬಳಿಸಿ ವಿಜಯ ತಂದುಕೊಟ್ಟರು.
ಲಂಕಾ ಸ್ಪಿನ್ ದಾಳಿಗೆ ನಲುಗಿದ ಭಾರತ
ಭಾರತ ತಂಡ ರೋಹಿತ್ ಶರ್ಮಾ (53 ರನ್) ಅರ್ಧ ಶತಕ ಹಾಗೂ ಶುಭ್ಮನ್ ಗಿಲ್ (19) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮೊದಲ ವಿಕೆಟ್ಗೆ 80 ರನ್ ಜತೆಯಾಟ ಪಡೆಯಿತು. ಆದರೆ, ಆ ಬಳಿಕ ಭಾರತದ ಬ್ಯಾಟಿಂಗ್ ವಿಭಾಗ ಏಕಾಏಕಿ ವೈಫಲ್ಯ ಕಂಡಿತು. ಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ (40 ರನ್ಗಳಿಗೆ 5 ವಿಕೆಟ್), ಚರಿತ್ ಅಸಲಂಕಾ (18 ರನ್ಗಳಿಗೆ 4 ವಿಕೆಟ್) ಅವರ ಮಾರಕ ದಾಳಿಗೆ ಸಿಲುಕಿ ನಲುಗಿತು.
ವಿರಾಟ್ ಕೊಹ್ಲಿ 3 ರನ್ಗಳಿಗೆ ಔಟಾದರೆ, ಇಶಾನ್ ಕಿಶನ್ (33) ಹಾಗೂ ಕೆ. ಎಲ್ ರಾಹುಲ್ (39) ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಿದರು. ಆದರೆ, ಲಂಕಾದ ಸ್ಪಿನ್ನರ್ಗಳ ಪ್ರಭಾವ ಹೆಚ್ಚಾಗುತ್ತಿದ್ದಂತೆ ಸತತವಾಗಿ ವಿಕೆಟ್ಗಳನ್ನು ಕಳೆದಕೊಂಡು ಕನಿಷ್ಠ ಮೊತ್ತಕ್ಕೆ ಸರ್ವಪತನ ಕಂಡಿತು.
ಇದನ್ನೂ ಓದಿ : ind vs sl : ಭಾರತ ಬ್ಯಾಟರ್ಗಳು ಈ ರೀತಿ ಆಲ್ಔಟ್ ಆಗಿರುವುದು ಇದೇ ಮೊದಲು
ಹಾರ್ದಿಕ್ ಪಾಂಡ್ಯ 5 ರನ್ ಬಾರಿಸಿದರೆ, ರವೀಂದ್ರ ಜಡೇಜಾ 4 ರನ್ಗಳಿಗೆ ಸೀಮಿತಗೊಂಡರು. ಅಕ್ಷರ್ ಪಟೇಲ್ ಕೊನೆ ವಿಕೆಟ್ ಆಗಿ ಔಟಾಗುವ ಮೊದಲು 26 ರನ್ಗಳ ಕೊಡುಗೆ ಕೊಟ್ಟರು. ಬುಮ್ರಾ 5 ರನ್, ಕುಲ್ದೀಪ್ ಯಾದವ್ ಶೂನ್ಯಕ್ಕೆ ಔಟಾದರು.
ಲಂಕಾ ಪರ ಮಹೀಶ್ ತೀಕ್ಷಣಾ ಒಂದು ವಿಕೆಟ್ ಪಡೆದರು.