ಬ್ರಿಜ್ಟೌನ್ (ವೆಸ್ಟ್ ಇಂಡೀಸ್): ಕುಲ್ದೀಪ್ ಯಾದವ್ ಅವರ ಮಾರಕ ಬೌಲಿಂಗ್ (4 ವಿಕೆಟ್, 3 ಓವರ್, 6 ರನ್) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶಾನ್ (52ರನ್) ಬಾರಿಸಿದ ಅರ್ಧ ಶತಕದ ನೆರವು ಪಡೆದ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸದ (ind vs wi) ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಸುಲಭ ಜಯ ದಾಖಲಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. ಜುಲೈ 29ರಂದು ಎರಡನೇ ಪಂದ್ಯ ಇದೇ ಸ್ಟೇಡಿಯಮ್ನಲ್ಲಿ ನಡೆಯಲಿದ್ದು ಆ ಪಂದ್ಯ ಗೆದ್ದರೆ ಸರಣಿ ಭಾರತ ತಂಡದ ಕೈವಶವಾಗಲಿದೆ.
ಇಲ್ಲಿನ ಕೆನಿಂಗ್ಸ್ಟನ್ ಓವಲ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆತಿಥೇಯ ವಿಂಡೀಸ್ ಬಳಗ 23 ಓವರ್ಗಳಲ್ಲಿ 114 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಆಡಿದ ಭಾರತ 22.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್ ಬಾರಿಸಿ ಗೆಲುವು ಸಾಧಿಸಿತು.
ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಪರ ಇಶಾನ್ ಕಿಶನ್ ಉತ್ತಮವಾಗಿ ಬ್ಯಾಟ್ ಬೀಸಿದರು. 46 ಎಸೆತಗಳನ್ನು ಎದುರಿಸಿದ ಅವರು 7 ಫೋರ್ ಹಾಗೂ 1 ಸಿಕ್ಸರ್ ಮೂಲಕ 52 ರನ್ ಬಾರಿಸಿದರು. ಆದರೆ, ಶುಭ್ಮನ್ ಗಿಲ್ ಮತ್ತೆ ವೈಫಲ್ಯ ಕಂಡರು. 16 ಎಸೆತಕ್ಕೆ 7 ರನ್ ಬಾರಿಸಿದ ಅವರು ನಿರಾಸೆಯಿಂದ ಪೆವಿಲಿಯನ್ ಕಡೆಗೆ ನಡೆದರು. ಬಳಿಕ ಬಂದ ಸೂರ್ಯಕುಮಾರ್ ನಿಧಾನಗತಿಯಲ್ಲಿ ಆಡಿ 19 ರನ್ ಗಳಿಸಿ ಮೋತಿ ಎಸೆತಕ್ಕೆ ಎಲ್ಬಿಡಬ್ಲ್ಯು ಔಟ್ ಆದರು. ಹಾರ್ದಿಕ್ ಪಾಂಡ್ಯ ಅನಗತ್ಯ ರನ್ ಔಟ್ ಆಗಿ ಹೋಗುವ ಮೊದಲು ಕೇವಲ 5 ರನ್ ಗಳಿಸಿದ್ದರು. ಬಳಿಕ ಬಂದ ರವೀಂದ್ರ ಜಡೇಜಾ 16 ರನ್ ಬಾರಿಸಿದರೆ, ಏಳನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ರೋಹಿತ್ ಶರ್ಮಾ 12 ರನ್ ಗಳಿಸಿದರು. ಇದಕ್ಕಿಂದ ಮೊದಲು ಕ್ರೀಸ್ಗೆ ಇಳಿದಿದ್ದ ಆಲ್ರೌಂಡರ್ ಶಾರ್ದುಲ್ ಠಾಕೂರ್ 1 ರನ್ಗೆ ಔಟಾದರು.
ವಿಂಡೀಸ್ ಪತನ
ಮೊದಲು ಬ್ಯಾಟಿಂಗ್ಗೆ ಆಹ್ವಾನ ಪಡೆದ ವೆಸ್ಟ್ ಇಂಡೀಸ್ ತಂಡ ತನ್ನ ದೌರ್ಬಲ್ಯವನ್ನು ಪ್ರದರ್ಶಿಸಿತು. ಬ್ರೆಂಡನ್ ಕಿಂಗ್ 17 ರನ್ಗೆ ಔಟಾದರೆ, ಕೈಲ್ ಮೇಯರ್ಸ್ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಅಲಿಕ್ ಅಥನಾಜೆ 22 ರನ್ ಬಾರಿಸಿ ಸ್ವಲ್ಪ ಹೊತ್ತು ಕ್ರೀಸ್ ಕಾಪಾಡಿಕೊಂಡರೆ ನಾಯಕ ಶಾಯ್ ಹೋಪ್ 43 ರನ್ ಗಳಿಸಿ ಭಾರತ ತಂಡದ ಬೌಲಿಂಗ್ ದಾಳಿಯನ್ನು ಸ್ವಲ್ಪ ಹೊತ್ತು ಹಿಮ್ಮೆಟ್ಟಿಸಿದರು. ಹೆಟ್ಮಾಯರ್ ಗಳಿಕೆ ಕೇವಲ 11 ರನ್. ಆ ಬಳಿಕ ವಿಂಡೀಸ್ ತಂಡದ ಬ್ಯಾಟಿಂಗ್ ವಿಭಾಗ ಪತನಗೊಂಡಿತು. ಕುಲ್ದೀಪ್ ಯಾದವ್ ಏಕಾಏಕಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ವಿಂಡೀಸ್ ತಂಡ ರನ್ ಗಳಿಕೆ ಹೆಚ್ಚು ಮಾಡದಂತೆ ನೋಡಿಕೊಂಡರು. ಅದಕ್ಕಿಂತ ಮೊದಲು ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು.
ಇದನ್ನೂ ಓದಿ : Team India : 2023-24ರ ಭಾರತ ತಂಡದ ತವರಿನ ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿ ಪ್ರಕಟ
ಕ್ರಮಾಂಕ ಬದಲಾವಣೆ
ಸಣ್ಣ ಮೊತ್ತವೆಂಬ ಕಾರಣಕ್ಕೆ ಭಾರತ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಂಡಿತು. ರೋಹಿತ್ ಶರ್ಮಾ ಆರಂಭಿಕರಾಗಿ ಬ್ಯಾಟ್ ಮಾಡಲು ಬರದೇ ವಿಕೆಟ್ಗಳು ಪತನಗೊಂಡ ಬಳಿಕ ಏಳನೇ ಕ್ರಮಾಂಕದಲ್ಲಿ ಆಡಲು ಇಳಿದರು. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲು ಬರಬೇಕಾಗಿದ್ದ ವಿರಾಟ್ ಕೊಹ್ಲಿ ಕ್ರೀಸ್ಗೆ ಇಳಿಯಲಿಲ್ಲ.