ಲಾಡರ್ಹಿಲ್: ಬ್ಯಾಟಿಂಗ್ನಲ್ಲಿ ಹಾಗೂ ಬೌಲಿಂಗ್ನಲ್ಲಿ ವೈಫಲ್ಯ ಎದುರಿಸಿದ ಭಾರತ ತಂಡ ವೆಸ್ಟ್ ಇಂಡೀಸ್ (ind vs wi) ಪ್ರವಾಸದ ಟಿ20 ಸರಣಿಯ ಐದನೇ ಹಾಗೂ ಕೊನೇ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಭಾರತ ತಂಡ ಸರಣಿಯನ್ನು 2-3 ಅಂತರದಿಂದ ಕಳೆದುಕೊಂಡಿದೆ. ಈ ಪರಾಜಯದೊಂದಿಗೆ ಭಾರತ ತಂಡದ ಸತತ 11 ಟಿ20 ಸರಣಿ ವಿಜಯ ದಾಖಲೆಯನ್ನು ಕಳೆದುಕೊಂಡಿತು. ಅಲ್ಲದೆ, 2016ರ ಬಳಿಕ ವಿಂಡೀಸ್ ತಂಡ ಭಾರತ ಬಿರುದ್ಧ ಟೊ20 ಸರಣಿ ಗೆದ್ದಿತು. ಪ್ರಮುಖ ಆಟಗಾರರನ್ನು ತಂಡಕ್ಕೆ ಹಾಕದೇ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವ ಕಪ್ಗೆ ತಂಡ ಕಟ್ಟುವ ನಿಟ್ಟಿನಲ್ಲಿ ಈ ಸರಣಿಯಲ್ಲಿ ಹೆಚ್ಚು ಪ್ರಯೋಗಗಳನ್ನು ನಡೆಸಿದ್ದು ಸೋಲಿಗೆ ಕಾರಣ ಎನಿಸಿತು.
ಇಲ್ಲಿನ ಸೆಂಟ್ರಲ್ ಬ್ರೊವಾರ್ಡ್ ರೀಜಿನಲ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟ್ ಮಾಡಿತು. ಪ್ರಮುಖ ಬ್ಯಾಟರ್ಗಳ ವೈಫಲ್ಯದ ಹಿನ್ನೆಲೆಯಲ್ಲಿ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ವಿಂಡೀಸ್ ತಂಡ ಇನ್ನೂ 12 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿ ಗೆಲುವು ಸಾಧಿಸಿತು.
ಇದನ್ನೂ ಓದಿ : World Cup 2023 : ವಿಶ್ವ ಕಪ್ ನಮ್ಮದೇ; ರೋಹಿತ್ ಶರ್ಮಾ ವಿಶ್ವಾಸ
ಭಾರತ ನೀಡಿದ ಮೊತ್ತವನ್ನು ಸುಲಭವಾಗಿ ಮೀರಿತು. ಕೈಲ್ ಮೇಯರ್ಸ್ 10 ರನ್ಗೆ ಔಟಾಗಿರುವ ಹೊರತಾಗಿಯೂ ಬ್ರೆಂಡನ್ ಕಿಂಗ್ (ಅಜೇಯ 85 ರನ್) ಹಾಗೂ ನಿಕೋಲಸ್ ಪೂರನ್ (47) ಅವರ ಅಬ್ಬರದ ಆಟದ ನೆರವಿನಿಂದ ಗೆಲುವು ಸಾಧಿಸಿತು. ಪೂರನ್ ಹಾಗೂ ಕಿಂಗ್ ಎರಡನೇ ವಿಕೆಟ್ಗೆ 117 ರನ್ಗಳ ಜತೆಯಾಟ ನೀಡುವ ಮೂಲಕ ಭಾರತ ತಂಡದ ಸೋಲಿಗೆ ಕಾರಣರಾದರು. ಆದಾಗ್ಯೂ ಪೂರನ್ 3 ರನ್ಗಳ ಕೊರತೆಯೊಂದಿಗೆ ಅರ್ಧ ಶತಕದ ಸಾಧನೆಯಿಂದ ವಂಚಿತರಾದರು.
ಭಾರತ ತಂಡದ ವಿಫಲ ಬ್ಯಾಟಿಂಗ್
ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಹೀಗಾಗಿ ಐದನೇ ಪಂದ್ಯದಲ್ಲಿ ಅದೇ ರೀತಿಯಲ್ಲಿ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಭಾರತ ತಂಡದ ಬ್ಯಾಟರ್ಗಳ ಸತತವಾಗಿ ವಿಕೆಟ್ ಒಪ್ಪಿಸುವ ಮೂಲಕ ಸೋಲಿಗೆ ಕಾರಣರಾದರು. ಆರಂಭಿಕರಾದ ಯಶಸ್ವಿ ಜೈಸ್ವಾಲ್ 5 ರನ್ಗೆ ಔಟಾದರೆ ಶುಭ್ಮನ್ ಗಿಲ್ 9 ರನ್ ಪೇರಿಸಿದರು. ಸೂರ್ಯಕುಮಾರ್ ಯಾದವ್ 45 ಎಸೆತಗಳಲ್ಲಿ 65 ರನ್ ಬಾರಿಸಿ ಅರ್ಧ ಶತಕ ಪೂರೈಸಿದರೂ ದೊಡ್ಡ ಮೊತ್ತ ಪೇರಿಸುವ ತನಕ ಇನಿಂಗ್ಸ್ ಕಟ್ಟಲು ಅವರಿಗೆ ಸಾಧ್ಯವಾಗಲಿಲ್ಲ. ತಿಲಕ್ ವರ್ಮಾ 27 ರನ್ ಬಾರಿಸಿದರೆ, ಸಂಜು ಸ್ಯಾಮ್ಸನ್ 12 ರನ್ಗೆ ಸೀಮಿತಗೊಂಡರು. ಹಾರ್ದಿಕ್ ಪಾಂಡ್ಯ ಹಾಗೂ ಹರ್ಷಲ್ ಪಟೇಲ್ 13 ರನ್ ಬಾರಿಸಿದರು. ವಿಂಡೀಸ್ ಪರ ರೊಮಾರಿಯೊ ಶಫರ್ಡ್ 31 ರನ್ಗಳಿಗೆ 4 ವಿಕೆಟ್ ಕಬಳಿಸಿ ಮಿಂಚಿದರು.