Site icon Vistara News

IND vs ZIM ODI | ಭಾರತಕ್ಕೆ ಐದು ವಿಕೆಟ್‌ ಭರ್ಜರಿ ಜಯ, ಸರಣಿ ರಾಹುಲ್‌ ಪಡೆಯ ಕೈವಶ

ind vs zim odi

ಹರಾರೆ : ಆತಿಥೇಯ ಜಿಂಬಾಬ್ವೆ ತಂಡವನ್ನು ಕೆ.ಎಲ್‌ ರಾಹುಲ್‌ ನೇತೃತ್ವದ ಭಾರತ ತಂಡ ಎರಡನೇ ಏಕ ದಿನ ಪಂದ್ಯದಲ್ಲಿ ೫ ವಿಕೆಟ್‌ಗಳಿಂದ ಮಣಿಸಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಮೂರು ಪಂದ್ಯಗಳ ಸರಣಿಯನ್ನು ೨-0 ಅಂತರದಿಂದ ವಶಪಡಿಸಿಕೊಂಡಿತು. ಇನ್ನೊಂದು ಪಂದ್ಯ ಆಗಸ್ಟ್‌ ೨೨ರಂದು ಇದೇ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಭಾರತದ ಪಾಲಿಗೆ ಜಿಂಬಾಬ್ವೆ ವಿರುದ್ಧ ಸತತ ೧೪ನೇ ಏಕ ದಿನ ಪಂದ್ಯಗಳ ಜಯ ಇದಾಗಿದೆ.

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ೩೮.೧ ಓವರ್‌ಗಳಲ್ಲಿ ೧೬೧ ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ ೨೫.೪ ಓವರ್‌ಗಳಲ್ಲಿ ೫ ವಿಕೆಟ್‌ ನಷ್ಟಕ್ಕೆ ೧೬೭ ರನ್ ಬಾರಿಸಿ ಗೆಲುವಿನ ಸಂಭ್ರಮನ್ನಾಚರಿಸಿತು.

ಸಣ್ಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡಕ್ಕೆ ಕೆ.ಎಲ್‌ ರಾಹುಲ್‌ ೧ ರನ್‌ಗೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆ ಉಂಟಾಯಿತು. ಬಳಿಕ ಶಿಖರ್‌ ಧವನ್‌ (೩೩) ಸ್ವಲ್ಪ ಹೊತ್ತು ಆಡಲಿದರೆ, ಶುಬ್ಮನ್‌ ಗಿಲ್‌ (೩೩) ರನ್ ಗಳಿಕೆಯಲ್ಲಿ ಕೊರತೆ ಉಂಟಾಗದಂತೆ ನೋಡಿಕೊಂಡರು. ನಂತರ ಕ್ರೀಸ್‌ಗೆ ಇಳಿದ ಇಶಾನ್‌ ಕಿಶನ್‌ ೬ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ದೀಪಕ್‌ ಹೂಡ ೨೫ ರನ್‌ ಗಳಿಸಿದರೆ, ಸಂಜು ಸ್ಯಾಮ್ಸನ್‌ ೪೩ ರನ್‌ ಗಳಿಸಿ ಅಜೇಯರಾಗಿ ಉಳಿದರು.

ಅದಕ್ಕಿಂತ ಮೊದಲು ಭಾರತೀಯ ಬೌಲರ್‌ಗಳು ಪ್ರಭಾವಿ ಬೌಲಿಂಗ್‌ ಪ್ರದರ್ಶನ ನೀಡಿದರು. ದೀಪಕ್ ಚಾಹರ್‌ ಬದಲು ಆಡಲು ಬಂದ ಶಾರ್ದುಲ್ ಠಾಕೂರ್‌ ೩೮ ರನ್‌ಗಳಿಗೆ ೩ ವಿಕೆಟ್‌ ಪಡೆದರೆ, ಮೊಹಮ್ಮದ್‌ ಸಿರಾಜ್, ಪ್ರಸಿದ್ಧ್‌ ಕೃಷ್ಣ, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌ ಹಾಗೂ ದೀಪಕ್‌ ಹೂಡಾ ತಲಾ ಒಂದು ವಿಕೆಟ್‌ ತಮ್ಮದಾಗಿಸಿಕೊಂಡರು.

ಸ್ಕೋರ್‌ ವಿವರ

ಜಿಂಬಾಬ್ವೆ : 38.1 ಓವರ್‌ಗಳಲ್ಲಿ ೧೬೧ (ಸೀನ್‌ ವಿಲಿಯಮ್ಸ್ ೪೨, ರಿಯಾನ್‌ ಬರ್ಲ್‌ ೩೯, ಶಾರ್ದುಲ್ ಠಾಕೂರ್‌ ೩೮ಕ್ಕೆ೩)

ಭಾರತ : 25.4 ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೬೭ (ಶಿಖರ್‌ ಧವನ್‌ ೩೩, ಶುಬ್ಮನ್‌ ಗಿಲ್‌ ೩೩, ಸಂಜು ಸ್ಯಾಮ್ಸನ್‌ ೪೩*, ಲೂಕ್ ಜಾಂಗ್ವೆ ೩೩ಕ್ಕೆ೨ )

Exit mobile version