Site icon Vistara News

Asian Kabaddi Championship: ಇರಾನ್​ ಕಾಲೆಳೆದು ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ

indian kabaddi team

ಬೂಸಾನ್‌: ಏಷ್ಯನ್‌ ಕಬಡ್ಡಿ ಚಾಂಪಿಯನ್‌ಶಿಪ್‌(Asian Kabaddi Championship) ಫೈನಲ್ ಪಂದ್ಯದಲ್ಲಿ ಬಲಿಷ್ಠ ಇರಾನ್​ ತಂಡದ ಸೊಕ್ಕಡಗಿಸಿದ ಭಾರತ, ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಮೂಲಕ ಟೂರ್ನಿಯಲ್ಲಿ 8ನೇ ಬಾರಿ ಚಾಂಪಿಯನ್​ ಆದ ಸಾಧನೆ ಮಾಡಿದೆ. ಪವನ್​ ಸೆಹ್ರಾವತ್​ (Pawan Sehrawat)ಅವರು ಮಿಂಚಿನ ರೈಡಿಂಗ್ ಮಾಡುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ​

​ಹಾಲಿ ಚಾಂಪಿಯನ್​ ಆಗಿದ್ದ ಭಾರತ ತನ್ನ ಖ್ಯಾತಿಗೆ ತಕ್ಕಂತೆ ಪ್ರದರ್ಶನ ತೋರುವ ಮೂಲಕ ಇರಾನ್‌(India vs Iran) ತಂಡವನ್ನು 42-32 ಅಂತರದಿಂದ ಪರಾಭವಗೊಳಿಸಿತು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿದ ಭಾರತ ಅಜೇಯವಾಗಿ ಫೈನಲ್​ ಪ್ರವೇಶಿಸಿತ್ತು. ಫೈನಲ್​ನಲ್ಲಿಯೂ ಇದೇ ಲಯ ಮುಂದುವರಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಲೀಗ್​ ಪಂದ್ಯದಲ್ಲಿಯೂ ಇರಾನ್​ಗೆ ಭಾರತ 33-28 ಅಂತರದಿಂದ ಆಘಾತವಿಕ್ಕಿತ್ತು.

ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದಲ್ಲಿ ಪವನ್​ ಸೆಹ್ರಾವತ್​ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದರು. ಇದಕ್ಕೂ ಮುನ್ನ ಆಡಿದ 4 ಪಂದ್ಯಗಳಲ್ಲಿ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಿಂದ ಕೂಡಿರಿಲ್ಲ. ಹಿಂದಿನ ಪಂದ್ಯಗಳಲ್ಲಿ ಅಸ್ಲಾಮ್‌ ಇನಾಮಾದರ್‌ ಅವರು ಸೂಪರ್​ ಟೆನ್​ ರೈಡ್​ ಮಾಡುವ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆದರೆ ಫೈನಲ್​ನಲ್ಲಿ ಪವನ್​ ಎದುರಾಳಿ ಕೋಟೆಗೆ ನುಗ್ಗಿ ಸೂಪರ್​ ಟೆನ್​ ಅಂಕ ಗಳಿಸುವಲ್ಲಿ ಯಶಸ್ಸು ಸಾಧಿಸಿದರು. ಕಳೆದ ಬಾರಿಯ ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲೇ ಗಾಯಗೊಂಡಿದ್ದ ಪವನ್​ ಬಳಿಕ ಸಂಪೂರ್ಣವಾಗಿ ಟೂರ್ನಿಯಿಂದ ಹೊರಗುಳಿದಿದ್ದರು.

ಇದನ್ನೂ ಓದಿ PKL 2022 | ಪ್ರೊ ಕಬಡ್ಡಿಗೆ ಪವನ್ ಸೆಹ್ರಾವತ್​ ಎಂಟ್ರಿ; ಅಭಿಮಾನಿಗಳಿಗೆ ಫುಲ್​ ಖುಷ್​​!

ಪವನ್‌ ಸೆಹ್ರಾವತ್‌ ಅವರಿಗೆ ಅರ್ಜುನ್‌ ದೇಶ್ವಾಲ್‌ ಮತ್ತು ಅಸ್ಲಾಮ್‌ ಇನಾಮಾದರ್‌ ಉತ್ತಮ ಸಾಥ್​ ನೀಡಿದರು. ಇರಾನ್‌ ಪರ ಪ್ರಮುಖ ರೈಡರ್‌ಗಳಾದ ಅಲಿರೇಝ, ಹೈದರ್‌ ಅಲಿ, ಇಕ್ರಾಮಿ ಹೋರಾಟ ನಡೆಸಿದರೂ ಪಂದ್ಯದಲ್ಲಿ ಹಿಡಿತ ಸಾಧಿಸಲು ವಿಫಲರಾದರು.

ಭಾರತದ್ದೇ ಪಾರುಪತ್ಯ

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್​ನಲ್ಲಿ ಭಾರತದ್ದೇ ಪಾರುಪತ್ಯ. ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು 1980ರಲ್ಲಿ ಪ್ರಾರಂಭಿಸಲಾಯಿತು. ಏಷ್ಯಾ ಖಂಡದ ವಿವಿಧ ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತವೆ. ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಸದ್ಯ ಇದುವರೆಗೆ ಈ ಚಾಂಪಿಯನ್​ಶಿಪ್​ನಲ್ಲಿ 9 ಆವೃತ್ತಿಗಳು ನಡೆದಿದ್ದು, ಇದರಲ್ಲಿ 8 ಬಾರಿ ಭಾರತ ಚಿನ್ನದ ಪದಕಗಳನ್ನು ಗೆದ್ದ ದಾಖಲೆ ಬರೆದಿದೆ. 2003ರಲ್ಲಿ ಮಾತ್ರ ಭಾರತ ಸೋಲು ಕಂಡಿತ್ತು. ಈ ವರ್ಷ ಇರಾನ್​ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಮಹಿಳಾ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್​ನಲ್ಲಿಯೂ ಭಾರತ ಉತ್ತಮ ದಾಖಲೆ ಹೊಂದಿದೆ. 5 ಆವೃತ್ತಿಯಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದ ಸಾಧನೆ ಮಾಡಿದೆ.

Exit mobile version