ಬರ್ಮಿಂಗ್ಹಮ್: ಸಿಂಗಾಪುರ ತಂಡದ ವಿರುದ್ಧ ಪಾರಮ್ಯ ಸಾಧಿಸಿರುವ ಭಾರತ ಮಿಶ್ರ ಬ್ಯಾಡ್ಮಿಂಟನ್ ತಂಡ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ. ಈ ಮೂಲಕ ಈ ಸ್ಪರ್ಧೆಯಲ್ಲೂ ಕನಿಷ್ಠ ಪಕ್ಷ ಬೆಳ್ಳಿ ಪದಕವನ್ನು ಖಾತರಿಪಡಿಸಿದೆ. ಭಾರತ ಬ್ಯಾಡ್ಮಿಂಟನ್ ತಂಡ ಈ ಹಿಂದಿನ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಸಿಂಗಾಪುರ ತಂಡದ ವಿರುದ್ಧದ ಸೆಮಿಫೈನಲ್ಸ್ ಪಂದ್ಯದಲ್ಲಿ ೩-೦ ಅಂತರದ ವಿಜಯ ಸಾಧಿಸಿದ ಭಾರತ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು. ಮೊದಲ ಹಣಾಹಣಿಯಲ್ಲಿ ಸ್ಪರ್ಧಿಸಿದ ಭಾರತ ಪುರುಷರ ಡಬಲ್ಸ್ ತಂಡದ ಜತೆಗಾರರಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಗೆಲುವು ಸಾಧಿಸಿದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತ ಸ್ಟಾರ್ ಆಟಗಾರ್ತಿ ಪಿ.ವಿ ಸಿಂಧೂ ಸುಲಭ ಜಯ ಕಂಡರು. ಅಂತೆಯೇ ಮೂರನೇ ಪಂದ್ಯ ಪುರುಷರ ಸಿಂಗಲ್ಸ್ ಹಣಾಹಣಿ. ಈ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಲೊ ಕಿನ್ ಯಿವ್ ವಿರುದ್ಧ ಜಯ ಸಾಧಿಸಿದ ಭಾರತ ಪುರುಷರ ಸಿಂಗಲ್ಸ್ ಸ್ಪರ್ಧಿ ಲಕ್ಷ್ಯ ಸೇನ್ ತಂಡವನ್ನು ಪ್ರಶಸ್ತಿ ಸುತ್ತಿಗೆ ಕೊಂಡೊಯ್ದರು.