ಪೋರ್ಟ್ ಆಫ್ ಸ್ಪೇನ್ : ಆರಂಭಿಕ ಬ್ಯಾಟರ್ ಶಾಯ್ ಹೋಪ್ (೧೧೫ ರನ್) ಅವರ ಸಮಯೋಚಿತ ಶತಕ ಹಾಗೂ ನಾಯಕ ನಿಕೋಲಸ್ ಪೂರನ್ (೭೪ ರನ್) ಅವರ ಅರ್ಧ ಶತಕದ ನೆರವು ಪಡೆದ ಆತಿಥೇಯ ವೆಸ್ಟ್ ಇಂಡೀಸ್ ತಂಡ IND vs WI ODI ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡಕ್ಕೆ ೩೧೨ ರನ್‌ಗಳ ಗೆಲುವಿನ ಗುರಿಯನ್ನೊಡ್ಡಿದೆ. ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ ೫೦ ಓವರ್‌ಗಳು ಮುಕ್ತಾಯಗೊಂಡಾಗ ೬ ವಿಕೆಟ್ ಕಳೆದುಕೊಂಡು ೩೧೧ ರನ್ ಬಾರಿಸಿತು.
ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ೯ ಓವರ್‌ಗಳಲ್ಲಿ ೬೫ ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿತು. ಆದರೆ, ದೀಪಕ್ ಹೂಡ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಕೈಲ್ ಮೇಯರ್ಸ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮುನ್ನಡೆ ಕಲ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಶಮ್ರಾ ಬ್ರೂಕ್ಸ್ ಕೂಡ ೩೫ ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವ ಯತ್ನ ಮಾಡಿದರು. ಆದರೆ, ಹರ್ಷಲ್ ಪಟೇಲ್ ಎಸೆತಕ್ಕೆ ಧವನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಬೆಂಡನ್ ಕಿಂಗ್ ರನ್ ಗಳಿಸುವ ಮೊದಲೇ ವಾಪಸಾಗುವಂತೆ ಸ್ಪಿನ್ನರ್ ಯಜ್ವೇಂದ್ರ ಚಹಲ್ ನೋಡಿಕೊಂಡರು. ಆದರೆ, ನಂತರದಲ್ಲಿ ಆಡಲು ಇಳಿದ ನಾಯಕ ನಿಕೊಲಸ್ ಪೂರನ್ ೬ ಸಿಕ್ಸರ್‌ಗಳ ಸಮೇತ ೭೪ ರನ್ ಬಾರಿಸಿದರು. ಮತ್ತೊಂದು ತುದಿಯಲ್ಲಿ ತಾಳ್ಮೆಯ ಪ್ರದರ್ಶನ ನೀಡುತ್ತಿದ್ದ ಶಾಯ್ ಹೋಪ್ ಶತಕ ಬಾರಿಸಿ ಸಂಭ್ರಮಿಸಿದರು.
ರೋವ್ಮನ್ ಪೊವೆಲ್ ೧೩ ರನ್ ಬಾರಿಸಿದರೆ, ರೊಮಾರಿಯೊ ಶಫರ್ಡ್ ೧೪ ರನ್‌ಗಳ ಕೊಡುಗೆ ಕೊಟ್ಟರು. ಭಾರತ ಪರ ೫೪ ರನ್‌ಗಳಿಗೆ ೩ ವಿಕೆಟ್ ಪಡೆದ ಶಾರ್ದುಲ್ ಠಾಕೂರ್ ಯಶಸ್ವಿ ಬೌಲರ್ ಎನಿಸಿಕೊಂಡರು. ಯಜ್ವೇಂದ್ರ ಚಹಲ್ ೬೯ ರನ್‌ಗಳ ವೆಚ್ಚದಲ್ಲಿ ೧ ವಿಕೆಟ್ ಪಡೆದರು.