ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಸರಣಿಯ ಮೂರನೇ ಪಂದ್ಯವನ್ನೂ ಭಾರತ ಗೆದ್ದುಕೊಂಡಿದ್ದು, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ೩೬ ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟದಲ್ಲಿ ೨೫೭ ರನ್ ಮಾಡಿದ್ದಾಗ, ಮಳೆಯ ಪರಿಣಾಮ ಪಂದ್ಯಕ್ಕೆ ಡಿಎಲ್‌ಎಸ್ ಪದ್ಧತಿಯನ್ನು ಅಳವಡಿಸಲಾಯಿತು. ಪ್ರತಿಯಾಗಿ ವೆಸ್ಟ್ ಇಂಡೀಸ್ ೧೩೭ ರನ್‌ಗಳನ್ನು ಮಾತ್ರ ಗಳಿಸಲು ಶಕ್ಯವಾಯಿತು. ಹೀಗಾಗಿ ಡಿಎಲ್‌ಎಸ್ ಪ್ರಕಾರ ಭಾರತಕ್ಕೆ ೧೧೯ ರನ್‌ಗಳ ಗೆಲುವು ಲಭಿಸಿತು.
ಭಾರತದ ಪರ ಯಜುವೇಂದ್ರ ಚಹಲ್ ೧೭ ರನ್ ಕೊಟ್ಟು ನಾಲ್ಕು ವಿಕೆಟ್ ಕಬಳಿಸಿದರು. ಮಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್ ಉರುಳಿಸಿದರು. ಇದಕ್ಕೂ ಮುನ್ನ ಬ್ಯಾಟಿಂಗ್ ವಿಭಾಗದಲ್ಲಿ ಶುಬ್ಮನ್ ಗಿಲ್ ೯೮ ಎಸೆತಕ್ಕೆ ಅಜೇಯ ೯೮ ರನ್ ಸಿಡಿಸಿದರು. ಶಿಖರ್ ಧವನ್ ೫೮(೭೪), ಶ್ರೇಯಸ್ ಐಯ್ಯರ್ ೩೪ ಎಸೆತಕ್ಕೆ ೪೪ ರನ್ ಕಲೆ ಹಾಕಿದರು.
ಶುಬ್ಮನ್ ಗಿಲ್ ಅವರ ಅಜೇಯ ೯೮ ರನ್‌ಗಳಲ್ಲಿ ೭ ಫೋರ್ ಮತ್ತು ೨ ಸಿಕ್ಸರ್ ಇತ್ತು. ಶ್ರೇಯಸ್ ಐಯ್ಯರ್ ಅವರ ೪೪ ರನ್‌ಗಳಲ್ಲಿ ೪ ಫೋರ್ ಮತ್ತು ೧ ಸಿಕ್ಸರ್ ಇತ್ತು. ಕಪ್ತಾನ ಶಿಖರ್ ಧವನ್ ೭ ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿ ೫೮ ರನ್ ಪೇರಿಸಿದರು. ಇಡೀ ಪಂದ್ಯ ಭಾರತದ ಪರ ಏಕಪಕ್ಷೀಯವಾಗಿತ್ತು. ವೆಸ್ಟ್ ಇಂಡೀಸ್ ಪಡೆ ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್‌ನಲ್ಲಿ ದುರ್ಬಲವಾಗಿತ್ತು. ಬ್ರೆಂಡನ್ ಕಿಂಗ್ ೪೨, ಕಪ್ತಾನ ನಿಕೋಲಸ್ ಪೂರನ್ ೪೨ ರನ್, ಶಾಯ್ ಹೋಪ್ ೨೨ ರನ್, ಹೇಡನ್ ವಾಲ್ಶ್ ೧೦ ಗಳಿಸಿದ್ದು ಬಿಟ್ಟರೆ ಉಳಿದವರು ಎರಡಂಕಿ ಗಡಿ ದಾಟಲಿಲ್ಲ.